ಟಿಆರ್‌ಸಿ ಸೊಸೈಟಿಗೆ 94.83 ಲಕ್ಷ ರೂ. ಲಾಭ: ಸದಸ್ಯರಿಗೆ ಶೇ. 6 ಡಿವಿಡೆಂಡ್ ಘೋಷಣೆ

 


ಶಿರಸಿ: ಇಲ್ಲಿನ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ(ಟಿಆರ್‌ಸಿ)ಯ 106ನೇಯ ವಾರ್ಷಿಕ ಸರ್ವ ಸಾಧಾರಣ ಸಭೆಯು ಶಿರಸಿಯ ಟಿಎಸ್‌ಎಸ್‌ನ ಮಾರಾಟ ಅಂಗಳದಲ್ಲಿ ನಡೆಯಿತು.

ಸಂಘವು ವರದಿ ವರ್ಷದಲ್ಲಿ 94.83ಲಕ್ಷ ರೂ. ನಿಕ್ಕೀ ಲಾಭಗಳಿಸಿದ್ದು, ಸದಸ್ಯರಿಗೆ ಅವರ ಶೇರಿನ ಮೇಲೆ ಶೇ.6 ಡಿವಿಡೆಂಡ್ ನೀಡಲಾಗುವುದೆಂದು ಘೋಷಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಮಾತನಾಡಿ, ಸಂಸ್ಥೆಯ ಪ್ರಗತಿಯ ಹಾದಿ ವಿವರಿಸಿದರು. ಸಂಸ್ಥೆಯ ಕಾರ್ಯ ವ್ಯವಹಾರಗಳಲ್ಲಿ ಕ್ರಿಯಾಶೀಲವಾಗಿ ಭಾಗಿಯಾಗಿ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ವ್ಯವಹರಿಸಿ, ಸಂಸ್ಥೆಯ ಈ ಸಾಧನೆಗೆ ಕಾರಣೀಕರ್ತರಾದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ರಾಜ್ಯದೆಲ್ಲೆಡೆ ನೆರೆಹಾವಳಿಯಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿ ಪ್ರದೇಶ ಸಂಪೂರ್ಣ ಜಲಾವೃತವಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಜನ-ಜಾನುವಾರುಗಳಿಗೆ ಪ್ರಾಣ ಹಾನಿ ಸಂಭವಿಸಿರುವುದು ವಿಷಾದಕರ ಸಂಗತಿ ಎಂದರು.

ಉತ್ತರಕನ್ನಡ ಜಿಲ್ಲೆಯಲ್ಲಿಯು ಸಹ ಅನೇಕ ಗ್ರಾಮಗಳು ಪ್ರವಾಹಪೀಡಿತವಾಗಿದ್ದು ಅನೇಕರಿಗೆ ವಾಸ್ತವ್ಯ ಮನೆ ಕೂಡಾ ಇಲ್ಲದಂತಾಗಿದೆ. ಜಿಲ್ಲೆಯ ನೆರೆಪೀಡಿತ ಸಂತ್ರಸ್ತರ ನೆರವಿಗೆ ಸಂಘವೂ ಕೈಜೋಡಿಸಿದ್ದು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಂತ್ರಸ್ತರಿಗೆ ಅವಶ್ಯವಿರುವ ಅಗತ್ಯ ವಸ್ತುಗಳನ್ನು ಪೂರೈಸಿದೆ. ಈ ಕಾರ್ಯಕ್ಕೆ ಸಂಘದೊಂದಿಗೆ ಕೈಜೋಡಿಸಲು ಬಯಸುವವರಿಗೆ ಕೂಡಾ ಅವಕಾಶ ಮಾಡಿಕೊಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದಲ್ಲಿ ಉತ್ತಮವಾಗಿ ವ್ಯವಹರಿಸಿದ ಸಂಘದ 16 ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಶೇಷ ಆಹ್ವಾನಿತರಾಗಿ ಟಿ.ಎಸ್.ಎಸ್. ಅಧ್ಯಕ್ಷರಾದ ಶಾಂತಾರಾಮ ಹೆಗಡೆ, ಶೀಗೇಹಳ್ಳಿ ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸಭೆಗೆ ಹಾಜರಾಗಿ ಸಭೆಯಲ್ಲಿಪಾಲ್ಗೊಂಡಿದ್ದರು. ವಾರ್ಷಿಕ ಸಭೆಯಲ್ಲಿ ಸದಸ್ಯರು ಪ್ರೋತ್ಸಾಹಿಸಬೇಕೆನ್ನುವ ಉದ್ದೇಶದಿಂದ ಸಭೆಗೆ ಹಾಜರಿದ್ದ ಎಲ್ಲ ಸದಸ್ಯರಿಗೆ ಸ್ಟೀಲ್ ಪ್ಲಾಸ್ಕ್ ಅನ್ನು ನೀಡಲಾಯಿತು

ಸಂಘದ ಉಪಾಧ್ಯಕ್ಷರಾದ ಲೋಕೇಶ ಹೆಗಡೆ ಹುಲೇಮಳಗಿ ಹಾಗೂ ಸಂಘದ ಎಲ್ಲ ನಿರ್ದೇಶಕರು, ಲೆಕ್ಕ ಪರಿಶೋಧಕರಾದ ಸತೀಶ ಹೆಗಡೆ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಜಿ.ವಿ.ಜೋಶಿ ಕಾಗೇರಿ ಅವರು ಸಂಘದ ಕುರಿತು ಸ್ವರ್ಣವಲ್ಲೀ ಶ್ರೀಗಳು ನೀಡಿದ ಸಂದೇಶ ವಾಚಿಸಿದರು. ನಿರ್ದೇಶಕರಾದ ಶಿವಾನಂದ ಭಟ್ ನಿಡಗೋಡ, ಹಾಗೂ ಸಂಘದ ಸಿಬ್ಬಂದಿ ಜಿ.ಜಿ. ಹೆಗಡೆ, ಕುರುವಣಿಗೆ ಸನ್ಮಾನ ಪತ್ರ ವಾಚಿಸಿದರು. ಮುಖ್ಯ ಕಾರ್ಯನಿರ್ವಾಹಕರಾದ ರಮೇಶ ಹೆಗಡೆ ಬಾಳೆಗದ್ದೆ ಕಾರ್ಯಕ್ರಮ ನಿರ್ವಹಿಸಿದರು.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.