ಹೆಚ್ಚು ಅಂಕಗಳಿಕೆಗೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬಾರದು: ಡಾ. ಶ್ರೀನಿವಾಸ ಶೇಣ್ವಿ

ಕುಮಟಾ: ಉದ್ಯೋಗ ಗಿಟ್ಟಿಸಿ, ಪ್ರಬುದ್ಧ ಜೀವನ ನಡೆಸಲು ಕೇವಲ ಅಂಕಗಳಿಕೆಗಿಂತ ಸಂವಹನ, ಸ್ಪಂದಿಸುವ ಕೌಶಲ್ಯ ಮತ್ತು ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹರಿಸುವ ಕೌಶಲ್ಯಗಳನ್ನು ರೂಢಿಸಿಕೊಳ್ಳುವದು ಇಂದಿನ ಅಗತ್ಯವೇ ಹೊರತು, ಅಧಿಕ ಅಂಕಗಳಿಸಲು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ತರವಲ್ಲ ಎಂದು ಡಾ.ಎ.ವಿ.ಬಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶ್ರೀನಿವಾಸ ಶೇಣ್ವಿ ಅಭಿಪ್ರಾಯಪಟ್ಟರು.

ಶ್ರೀ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ ವಡೆಯರ್ ಸ್ವಾಮೀಜಿಯವರ ಜನ್ಮ ದಿನೋತ್ಸವದ ಪ್ರಯುಕ್ತ ರಥಬೀದಿಯ ವೆಂಕಟ್ರಮಣ ದೇವಸ್ಥಾನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಯುವ ಸೇವಾವಾಹಿನಿ ಆಯೋಜಿತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್ಸೆಸೆಲ್ಸಿ, ಪಿ.ಯು.ಸಿ, ಪದವಿಗಳಲ್ಲಿ ಶ್ರೇಯಾಂಕಿತ 22 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. 45 ಅರ್ಹ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಭಾಜನರಾದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಈಜು ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.

ಸಮಾಜ ಭೂಷಣ ಪುರಸ್ಕೃತ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ವಸುದೇವ ಯಶ್ವಂತ ಪ್ರಭು ಅವರನ್ನು ಅಭಿನಂದಿಸಲಾಯಿತು. ಶ್ರೀ ಮಠದಲ್ಲಿ ಇವರ ನೇತೃತ್ವದಲ್ಲಿ ನೆರವೇರಿದ ಸುವರ್ಣ ಪಲ್ಲಕಿ ರಚನೆ, ಸುವರ್ಣ ಕಲಶಯುಕ್ತ ಶಿಖರ ಮಂಟಪ ನಿರ್ಮಾಣ, ಬ್ರಹ್ಮರಥದ ನೂತನ ಚಕ್ರ ನಿರ್ಮಾಣ, ತಾಮ್ರಪಠ ಆಚ್ಛಾದನ, ಹನುಮಂತ ದೇವರ ಪ್ರದಕ್ಷಣಾ ಪಥ ನಿರ್ಮಾಣ, ಚಿತ್ರಿಗಿ ಮೂಡಗಣಪತಿ ದೇವಸ್ಥಾನದ ನವೀಕರಣ, ವಿಷ್ಣುತೀರ್ಥ ಪ್ರಾಕಾರದ ನವೀಕರಣ ಹಾಗೂ ಅತಿವಿಷ್ಣು ಮಹಾಯಾಗದ ಸಾಧನೆಯನ್ನು ಸ್ಮರಿಸಲಾಯಿತು.

ವರಮಹಾಲಕ್ಷ್ಮೀ ವ್ರತ ಸಮಿತಿ ಆಯೋಜಿತ ಸ್ಪರ್ಧೆಗಳಿಗೆ ಉಪಾಧ್ಯಕ್ಷೆ ಮಾಲತಿ ಶಾನಭಾಗ ಬಹುಮಾನ ಕೊಡಮಾಡಿದರು. 20 ವಿದ್ಯಾರ್ಥಿಗಳು ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿ ಸಭಿಕರಿಗೆ ಮುದ ನೀಡಿದರು. ವೇದಿಕೆಯಲ್ಲಿ ವೆಂಕಟ್ರಮಣ ದೇವಸ್ಥಾನದ ಧರ್ಮದರ್ಶಿಗಳಾದ ನರಸಿಂಹ ಶಾನಭಾಗ, ವಿಷ್ಣು ಬಾಬು ಶಾನಭಾಗ, ಲಕ್ಷ್ಮೀದಾಸ ನಾಯಕ ಮತ್ತು ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷ ಮುಕುಂದ ಶಾನಭಾಗ ಉಪಸ್ಥಿತರಿದ್ದರು. ಯುವವಾಹಿನಿ ಅಧ್ಯಕ್ಷ ಕಿರಣ ಪ್ರಭು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಥಮ ಪೈ ಗುರುವಂದನೆಯನ್ನು, ಪ್ರತಿಭಾ ಪುರಸ್ಕಾರ ವಾಚನವನ್ನು ಸುಮಂತ ಆಚಾರ್ಯ ಹಾಗೂ ಶಿಷ್ಯವೇತನ ವಾಚನವನ್ನು ಪುರುಷೋತ್ತಮ ನಾಯಕ ನಿರ್ವಹಿಸಿದರು.

ಶಿಷ್ಯವೇತನದ ಪ್ರಾಯೋಜಕರಾದ ಭರತ ಭಂಡಾರಕರ ಹಾಗೂ ದಾಮೋದರ ಭಟ್ಟರನ್ನು ಅಭಿವಂದಿಸಲಾಯಿತು. ನಿರ್ಮಲಾ ಪ್ರಭು, ಪ್ರಶಾಂತ ಶಾನಭಾಗ ಮತ್ತು ಕಾರ್ಯದರ್ಶಿ ಕಮಲಾಕರ ಶಾನಭಾಗ ನಿರೂಪಿಸಿದರು. ಕಾರ್ತಿಕ ಶಾನಭಾಗರ ವಂದಿಸಿದರು. ಉಪಾಧ್ಯಕ್ಷ ಅಜಿತ ಶಾನಭಾಗ, ಪ್ರಸಾದ ನಾಯಕ, ಸದಸ್ಯರಾದ ಗಿರೀಶ ನಾಯಕ, ಗುರುದಾಸ ಬುರುಡೇಕರ, ಕೇಶವ ಕಾಮತ, ಕೃಷ್ಣ ನಾಯಕ, ಮಹೇಶ ಪ್ರಭು, ಮನೀಷ ಪ್ರಭು ಮೊದಲಾದವರು ಸಹಕರಿಸಿದರು. ಯುವವಾಹಿನಿಯ ಗೌರವಾಧ್ಯಕ್ಷ ಚಂದ್ರಕಾಂತ ಶಾನಭಾಗ, ಎಂ.ಕೆ.ಶಾನಭಾಗ, ಶ್ರೀಧರ ಶಾನಭಾಗ, ಸುಭಾಸ ಪ್ರಭು ಹಾಗೂ ದೇವಾಲಯದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.