ಬರಗದ್ದೆ ಸೊಸೈಟಿಯಲ್ಲಿ ರೈತರ ಹೆಸರಲ್ಲಿ ಕೋಟ್ಯಾಂತರ ರೂ. ಅವ್ಯವಹಾರ: ರೈತರ ಪ್ರತಿಭಟನೆ

ಕುಮಟಾ: ತಾಲೂಕಿನ ಬರಗದ್ದೆ ಸೊಸೈಟಿಯಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಅವ್ಯವಹಾರದ ಮಾಹಿತಿಯನ್ನು ಹೊರಹಾಕಬೇಕು ಮತ್ತು ರೈತರ ಹೆಸರಿನಲ್ಲಿ ತೆಗೆದ ಸಾಲದ ಮೊತ್ತವನ್ನು ಶೀಘ್ರವೇ ರೈತರಿಗೆ ತಲುಪಿಸಬೇಕು ಎಂದು ಒತ್ತಾಯಿಸಿ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದ ಸದಸ್ಯರು ಹಾಗೂ ಬೆಳೆ ಸಾಲ ಪಡೆದ ರೈತರು ಕುಮಟಾ ಕೆಡಿಸಿಸಿ ಬ್ಯಾಂಕ್‍ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾದ ಪ್ರಯೋಜನ ರೈತರಿಗೆ ಇನ್ನೂ ದೊರೆತಿಲ್ಲ. ಕಳೆದ ಮೂರು ವರ್ಷಗಳಿಂದ ರೈತರಿಗೆ ಬೆಳೆ ಸಾಲ ಸಿಗಲಿಲ್ಲ. ಸೇವಾ ಸಹಕಾರಿ ಸಂಘ ರೈತರಿಗೆ ಸಾಲ ಸೌಲಭ್ಯದಿಂದ ವಂಚಿಸುತ್ತಿದೆ. ಅದಲ್ಲದೇ, ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಈತನ ಕೆಲವು ಸಂಶಯಾಸ್ಪದ ನಡೆತೆಯ ಕುರಿತು ಮತ್ತು ಸಂಘದ ಕಾರ್ಯ ವೈಖರಿಯ ಬಗ್ಗೆ ಆರೋಪಿಸಿದ ರೈತರು, ಬ್ಯಾಂಕ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

2017ರಲ್ಲಿ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ 50,000 ರೂ. ಸಾಲಮನ್ನಾವನ್ನು ಸರ್ಕಾರ ಸಂಪೂರ್ಣವಾಗಿ ನೀಡಿದೆ. ಆದರೆ ಬರಗದ್ದೆ ಸೇವಾ ಸಹಕಾರಿ ಸಂಘ ಇನ್ನೂ ತನ್ನ ಸದಸ್ಯರ ಖಾತೆಗೆ ಸಂಪೂರ್ಣವಾಗಿ ಹಣ ಜಮಾ ಮಾಡಿಲ್ಲ. ಅಲ್ಲದೆ ರೈತರಿಗೆ ಸಾಲ ಚುಕ್ತಾ ಪ್ರಮಾಣ ಪತ್ರವನ್ನೂ ನೀಡಿಲ್ಲ. ಕೆಡಿಸಿಸಿ ಬ್ಯಾಂಕ್ ಕುಮಟಾ ಶಾಖೆಯ ಸಿಬ್ಬಂದಿ ಹಾಗೂ ಬರಗದ್ದೆ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಇಲ್ಲಿನ 200ಕ್ಕೂ ಅಧಿಕ ರೈತರಿಗೆ ವಿತ್‍ಡ್ರಾವಲ್ ಚೆಕ್ಕಿಗೆ ಮೊತ್ತ ನಮೂದಿಸಿದೇ ಮನೆಮನೆಗೆ ತೆರಳಿ ಸಹಿ ಪಡೆದುಕೊಂಡಿದ್ದಾರೆ. ಕಾನೂನಾತ್ಮಕವಾಗಿ ಇಂತಹ ಚೆಕ್ಕನ್ನು ಬ್ಯಾಂಕಿಗೆ ತೆರಳಿ ಅಲ್ಲಿಯೇ ಬರೆದು ಕೊಟ್ಟು ಹಣ ಪಡೆಯಬೇಕಾಗುತ್ತದೆ. ಆದರೆ ನಿಯಮ ಉಲ್ಲಂಘಿಸಿ ಬ್ಯಾಂಕ್ ಸಹಕಾರಿ ಸಂಘದ ಕಾರ್ಯದರ್ಶಿ ಮೂಲಕ ಸಹಿ ಪಡೆದುಕೊಂಡಿರುವದು ಭಾರಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಸೇವಾ ಸಹಕಾರಿ ಸಂಘದ ಕಾರ್ಯವೈಖರಿ ಬಗ್ಗೆ ರೈತರು ಸಂಶಯ ವ್ಯಕ್ತ ಪಡಿಸಿದರಲ್ಲದೇ, ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆಯನ್ನೂ ವ್ಯಕ್ತ ಪಡಿಸಿದರು.

ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ರಾಜ್ಯ ಸರ್ಕಾರ ರೈತರ 1 ಲಕ್ಷದ ವರೆಗಿನ ಸಾಲಮನ್ನಾ ಮಾಡಿದ್ದರು. ಆದರೆ ಸಂಘದ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಇದೇ ಸಂದರ್ಭದಲ್ಲಿ 35 ರಿಂದ 41 ಸಾವಿರ ರೂ. ಸಾಲ ಪಡೆದ ರೈತರ ಖಾತೆಗೂ 1 ಲಕ್ಷ ರೂ. ಸಾಲಮನ್ನಾ ಮಾಡಿಸಿ ಅಕ್ರಮ ಎಸಗಿದ್ದಾರೆ. ಅದಲ್ಲದೇ, ಕೆಲವರ ವಿತ್‍ಡ್ರಾವಲ್ ಚೆಕ್ಕಿನ ಮೊತ್ತವನ್ನೂ ಡ್ರಾ ಮಾಡಿದ್ದಾರೆ. ಆದರೆ ರೈತರಿಗೆ ಯಾವ ಮೊತ್ತವನ್ನೂ ನಿಡಿಲ್ಲ ಎಂದು ಸೇವಾ ಸಹಕಾರಿ ಸಂಘದ ಕಾರ್ಯದರ್ಶಿಯ ವಿರುದ್ಧ ರೈತರು ತೀವ್ರ ವಾಗ್ದಾಳಿ ನಡೆಸಿದರಲ್ಲದೇ, ಕಾರ್ಯದರ್ಶಿ ಬರುವ ತನಕ ನಾವು ಬ್ಯಾಂಕಿನಿಂದ ಕದಲುವುದಿಲ್ಲ ಎಂದು 200 ಕ್ಕೂ ಅಧಿಕ ರೈತರು ಪಟ್ಟು ಹಿಡಿದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀಧರ ಭಾಗ್ವತ ಪ್ರತಿಭಟನಾ ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರನ್ನು ಸಂತೈಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ಈ ಹಿಂದೆಯೇ ಈ ಅವ್ಯವಹಾರದ ಕುರಿತು ಸೊಸೈಟಿ ಹಾಗೂ ಶಾಸಕರ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ರೈತರ ಹಣವನ್ನು ವಾಪಸ್ಸು ನೀಡುವುದಾಗಿ ತಿಳಿಸಲಾಗಿತ್ತು. ಆದಾಗ್ಯೂ ಹಣವನ್ನು ನೀಡದೇ ಸಂಘದ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಫೋನ್ ಕರೆಗೂ ದೊರೆಯುತ್ತಿಲ್ಲ. ನಮ್ಮ ಹಣ ಯಾರ ಜೇಬಿಗೆ ಸೇರಿದೆ ಎಂಬ ಉತ್ತರ ದೊರೆಯಬೇಕು. ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಸ್ಥಳಕ್ಕಾಗಮಿಸಬೇಕು. ಇಲ್ಲವಾದರೆ ನಿಮ್ಮನ್ನು ಹೋಗಲು ಬಿಡುವುದಿಲ್ಲ ಎಂದು ಮುತ್ತಿಗೆ ಹಾಕಿದರು.

ಈ ಸಂದರ್ಭದಲ್ಲಿ ಎನ್.ಎಸ್.ಹೆಗಡೆ, ಎಸ್.ಪಿ.ಭಟ್ಟ, ಸುಬ್ರಾಯ ಭಟ್ಟ, ಗಣಪತಿ ಹೆಗಡೆ, ನಾರಾಯಣ ಮಡಿವಾಳ, ಗಣಪತಿ ಭಟ್ಟ, ಶಂಕರ ಗೌಡ, ಬೀರಾ ಗೌಡ, ಎಂ.ಆರ್.ಹೆಗಡೆ, ನಾಗೇಶ ಮಡಿವಾಳ ಹಾಗೂ ನೂರಾರು ರೈತರು ಹಾಜರಿದ್ದರು.

ಸೊಸೈಟಿಯ ವ್ಯವಹಾರಸ್ಥ ರೈತರು, ಮಹಿಳೆಯರು ಮತ್ತು ವಯೋವೃದ್ಧರು, ಎಮ್‍ಡಿ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಮಧ್ಯಾಹ್ನದ ಊಟವನ್ನೂ ತ್ಯಜಿಸಿ ಬ್ಯಾಂಕಿನಲ್ಲಿಯೇ ಕುಳಿತು ಪ್ರತಿಭಟಿಸಿದರು. ಸಾಯಂಕಾಲದ ಬಳಿಕ ಗೋವಿಂದ ಹರಿ ಗೋವಿಂದ, ನಮ್ಮೆಲ್ಲರ ಹಣವೆಲ್ಲ ಗೋವಿಂದ ಎಂಬ ಭಜನೆಯ ಜೊತೆ ಇನ್ನಿತರ ಭಜನೆಗಳನ್ನೂ ಸಹ ಬ್ಯಾಂಕಿನ ಮುಂಭಾಗದಲ್ಲೇ ಹಾಡುತ್ತ, ನಮಗೆ ಸೇರಬೇಕಾದ ಹಣ ನಮಗೆ ದೊರೆಯಬೇಕು ಹಾಗೂ ಅಕ್ರಮ ವ್ಯವಹಾರದ ಬಗೆಗೆ ನಮಗೆ ಸರಿಯಾದ ಮಾಹಿತಿ ನೀಡಬೇಕು. ಇಲ್ಲವಾದರೆ ರಾತ್ರಿಯೂ ಸಹ ಮನೆಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

ತಾಲೂಕಿನ ಬರಗದ್ದೆ ಸೊಸೈಟಿಯಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಅವ್ಯವಹಾರದ ಕುರಿತು ಲೋಕಾಯುಕ್ತ ತನಿಖೆಯಾಗಬೇಕು. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಆಡಳಿತ ಮಂಡಳಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರತೊಡಗಿದೆ.

ಸೊಸೈಟಿಯ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ನಮ್ಮ ಮನೆಗೆ ಬಂದು ಕಾರಣ ತಿಳಿಸದೇ ಒತ್ತಾಯ ಪೂರ್ವಕವಾಗಿ ನನ್ನ ಬಳಿ ಸಹಿ ಪಡೆದು, ತೀರಿ ಹೋದ ನನ್ನ ಯಜಮಾನನ ಗಣಪತಿ ಹೆಗಡೆ ಹೆಸರಿನಲ್ಲಿ 1.25.000 ರೂಗಳನ್ನು ಸಾಲ ತೆಗೆದಿದ್ದಾರೆ. ಆದರೆ ಆ ಹಣ ಮಾತ್ರ ನನಗೆ ದೊರೆತಿಲ್ಲ. ಈ ಅಕ್ರಮಕ್ಕೆ ಕಾರ್ಯದರ್ಶಿಯೇ ಹೊಣೆ. – ಭಾಗೀರಥಿ ಗಣಪತಿ ಹೆಗಡೆ

ಬರಗದ್ದೆ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಲಕ್ಷಣ ಪಟಗಾರ ದೂರವಾಣಿಗೆ ದೊರೆಯುತ್ತಿಲ್ಲ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಅನ್ಯಾಯವಾದ ರೈತರಿಗೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ. ಶೀಘ್ರವೇ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ಶ್ರೀಧರ ಭಾಗ್ವತ (ಕೆಡಿಸಿಸಿ ಬ್ಯಾಂಕ್ ನಿರ್ದೇಶಕ)

Categories: ಜಿಲ್ಲಾ ಸುದ್ದಿ

Leave A Reply

Your email address will not be published.