ಶಾರದಾ ನಿಲಯ ಸರಕಾರಿ ಶಾಲೆಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ: ಹಾನಿಯ ಕುರಿತು ಪರಿಶೀಲನೆ


ಕುಮಟಾ: ಭಾರೀ ಗಾಳಿ ಮಳೆಯಿಂದಾಗಿ ಕೆಲ ದಿನಗಳ ಹಿಂದೆ ತೆಂಗಿನ ಮರಬಿದ್ದು ಹಾನಿಗೊಳಗಾಗಿದ್ದ ಪಟ್ಟಣದ ವಿವೇಕನಗರದ ಶಾರದಾ ನಿಲಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಶಾಲೆಯ ಮೇಲೆ ಮರ ಮುರಿದು ಬಿದ್ದಿದ್ದರಿಂದ ಮೇಲ್ಛಾವಣಿ ಮುರಿದು ಹೋಗಿ, ಸೋರದಂತೆ ಪ್ಲಾಸ್ಟಿಕ್ ಹೊದಿಕೆ ಮಾಡಲಾಗಿತ್ತು. ಇದನ್ನು ಪರಿಶೀಲಿಸಿದ ಶಾಸಕರು, ಶಿಕ್ಷಕ ವರ್ಗದವರ ಜೊತೆ ಚರ್ಚಿಸಿ ನಾಳೆಯಿಂದಲೇ ದುರಸ್ತಿ ಕಾರ್ಯ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು. ಅದೇ ರೀತಿ ಶಾಲೆಯಲ್ಲಿ ಸ್ವಚ್ಛತೆ ಇಲ್ಲದ ಕಾರಣ ಶಿಕ್ಷವರ್ಗದವರಿಗೆ ಸ್ವಚ್ಛವಾಗಿಡುವಂತೆ ಹಾಗೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆರೆಯಿಂದಾಗಿ ತಾಲೂಕಿನಾದ್ಯಂತ ಹಲವು ಸಮಸ್ಯೆಗಳು ಉದ್ಭವಗೊಂಡಿದ್ದವು. ಅಂತಹ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ಕಾರಣದಿಂದ ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಶಾಲೆಯ ಮೇಲೆ ತೆಂಗಿನ ಮರ ಬಿದ್ದಿದ್ದರಿಂದ ಮೇಲ್ಛಾವಣಿ ಮುರಿದಿದೆ. ಒಂದು ವಾರದೊಳಗಾಗಿ ಶಾಲಾ ಕೊಠಡಿಯ ಸಂಪೂರ್ಣ ರಿಪೇರಿ ಕಾರ್ಯವನ್ನು ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾಳೆಯಿಂದಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಗಜಾನನ ಪೈ, ಪುರಸಭಾ ಸದಸ್ಯ ಸಂತೋಷ ನಾಯ್ಕ, ಬಿಜೆಪಿ ಪ್ರಮುಖರಾದ ಸುಧೀರ ಗೌಡ, ಶಾಲಾ ಮುಖ್ಯೋಪಾಧ್ಯಾಪಕ ಡಿ.ಎಸ್ ಮುಕ್ರಿ, ಸ್ಥಳೀಯರಾದ ಹನುಮಂತ ಶಾನಭಾಗ ಇನ್ನಿತರರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.