ವಚನಕಾರರು ಕನ್ನಡ ನಾಡು ಬೆಳಗಿದ ದೀಪಗಳು: ವಿದ್ಯಾರ್ಥಿಗಳ ಅಭಿಮತ

ಕಾರವಾರ: ವಚನಕಾರರು ಕನ್ನಡ ನಾಡು ಬೆಳಗಿದ ದೀಪಗಳು, ಅವರು ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದರು. ಅಂತರ್ಜಾತಿ ವಿವಾಹವನ್ನು ಪ್ರತಿಪಾದಿಸಿದರು. ಆದರೆ ಇಂದಿಗೂ ಮರ್ಯಾದಾ ಹತ್ಯೆಗಳು ನಡೆಯುತ್ತವೆ, ಜಾತಿ ಸಂಘರ್ಷಗಳು ಜೀವಂತವಾಗಿವೆ. ಧರ್ಮದ ಹೆಸರಲ್ಲಿ ಹೊಡೆದಾಟಗಳು ನಡೆದಿವೆ. ಇದು ವಿಷಾದನೀಯ ಎಂದು ಮತ್ತೆ ಕಲ್ಯಾಣ ಏರ್ಪಡಿಸಿದ್ದ ವಚನಕಾರರ ಮೌಲ್ಯಗಳು ಇಂದಿನ ಸಮಾಜಕ್ಕೆ ಪ್ರಸ್ತುತ ಎಂಬ ವಿಷಯದಲ್ಲಿ ಭಾಷಣ ಮಾಡಿದ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.

ಮಾನವೀಯತೆ ಮತ್ತು ಬಂಧುತ್ವ ಹಾಗೂ ಕಾಯಕದಲ್ಲಿ ದೇವರನ್ನು ಕಂಡ ಬಸವಣ್ಣ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದರು ಎಂದು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಾರವಾರ ಪ್ರಿಮಿಯರ್ ಕಾಲೇಜಿನ ವಿದ್ಯಾರ್ಥಿನಿ ನಮನಾ .ಎಸ್. ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಎಲ್ಲರೂ ನಮ್ಮವರು, ಲೋಕದ ಡೊಂಕ ನಿವೇಕೆ ತಿದ್ದುವಿರಿ ಎಂದ ಬಸವಣ್ಣ ದಯವೇ ಧರ್ಮದ ಮೂಲ ಎಂದು ಸಾರಿದರು ಎಂಬುದನ್ನು ಪ್ರಸ್ತಾಪಿಸಿದರು.

ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು, ಸಂತೆಯಲ್ಲಿ ಮನೆಯ ಮಾಡಿ ಶಬ್ದಗಳಿಗೆ ಅಂಜಿದೊಡೆ ಎಂತಯ್ಯ ಎಂಬ ಅಕ್ಕಮಹಾದೇವಿ ವಚನವನ್ನು ಇಂಗ್ಲೀಷ್‍ನಲ್ಲಿ ಭಾಷಣ ಮಾಡಿದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ರಾಯ್ಕರ್ ಉಲ್ಲೇಖಿಸಿದರು.

ಸ್ತ್ರೀ ಸಮಾನತೆಗೆ ಹೋರಾಟ ನಡೆಯುತ್ತಿರುವ ಈ ಸಮಾಜದಲ್ಲಿ ಭ್ರೂಣ ಹತ್ಯೆ ಒಂದು ಸಮಸ್ಯೆಯಾಗಿದೆ. ಅತ್ಯಾಚಾರದ ಘಟನೆಗಳು ವರದಿಯಾಗುತ್ತಿದೆ. ಇಂದಿಗೂ ಸ್ತ್ರೀ ಪುರುಷ ಪ್ರಧಾನ ಸಮಾಜದ ಅಧೀನದಲ್ಲೇ ಇದ್ದಾಳೆ ಹಾಗಾಗಿ ವಚನಕಾರರು ಸಾರಿದ ಒಳಗೆ ಸುಳಿವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣ ರಾಮನಾಥ ಎಂಬ ವಚನವನ್ನು ಭಟ್ಕಳದ ಚಂದ್ರಪ್ರಭಾ ಕೋಡಿಯಾ ಉಲ್ಲೇಖಿಸಿದರು.

ಪ್ರಥಮ ಸ್ಥಾನ ಪಡೆದವರು: ಪ್ರಿಮಿಯರ್ ಕಾಲೇಜಿನ ಪಿಯು ವಿದ್ಯಾರ್ಥಿನಿ ನಮನಾ ಎಸ್. ಕನ್ನಡದಲ್ಲಿ , ಸರ್ಕಾರಿ ಪಿಯು ಕಾಲೇಜಿನ ಪಿಯು ವಿದ್ಯಾರ್ಥಿನಿ ಶ್ವೇತಾ ರಾಯ್ಕರ್ ಪ್ರಥಮ ಸ್ಥಾನ ಪಡೆದರು. ಚಂದ್ರಪ್ರಭಾ ಕೋಡಿಯಾ ದ್ವಿತೀಯ ಸ್ಥಾನ ಪಡೆದರೆ, ನಂದಿನಿ ಕೃಷ್ಣ ಶೆಟ್ಟಿ, ದೀಪಾ.ಜೆ. ನಾಯ್ಕ ತೃತೀಯ ಸ್ಥಾನ ಹಂಚಿಕೊಂಡರು. ಭವಾನಿ ಎಚ್.ಸಿ., ರಂಜಿತ್ , ನಾಯ್ಕ, ಸಂತೋಷ ಲಮಾಣಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರೊ,ವಿಜಯಾ ನಾಯ್ಕ, ಅನು ಕಳಸ ನಿರ್ಣಾಯಕರಾಗಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.