ನೆರೆಗೆ ಸಿಲುಕಿದ ಹಲವು ಶಾಲೆಗಳು: ಕೊಚ್ಚಿಹೋದ ಪಠ್ಯಗಳು, ಆವಾರವೆಲ್ಲಾ ಮಣ್ಣಿನ ರಾಡಿ


ಕುಮಟಾ: ಈ ಹಿಂದೆ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ನೀಡಿದ ಒಂದು ವಾರಗಳ ರಜೆಯ ಮುಕ್ತಾಯದ ಬಳಿಕ ಮಂಗಳವಾರದಿಂದ ಶಾಲಾ ಕಾಲೇಜುಗಳು ಪುನಃ ಆರಂಭಗೊಂಡಿದೆ.

ಈ ಬಾರಿಯ ಮಳೆಯಿಂದಾಗಿ ಹಿಂದೆಂದೂ ಕಾಣದ ನೆರೆ ತಾಲೂಕಿನಾದ್ಯಂತ ಆವರಿಸಿತ್ತು. ನೆರೆಯ ಪ್ರಭಾವದಿಂದ ಅಘನಾಶಿನಿ ತಟದ ಮನೆ, ಶಾಲೆ, ಕೃಷಿಭೂಮಿ ಸೇರಿದಂತೆ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಕಳೆದೆರಡು ದಿನಗಳಿಂದ ವರುಣನ ಆರ್ಭಟ ಶಾಂತವಾಗಿದ್ದರಿಂದ ನೆರೆ ಇಳಿದಿದೆ. ಆದರೆ ಈ ಹಿಂದೆ ಜಲಾವೃತಗೊಂಡಿದ್ದ ಪ್ರದೇಶಗಳ ಈಗಿನ ಸ್ಥೀತಿ ಶೋಚನೀಯ. ಹಲವರ ಮನೆಗಳಲ್ಲಿ 3 ಅಡಿಗೂ ಎತ್ತರಕ್ಕೆ ಮಣ್ಣು ಹಾಗೂ ಇನ್ನಿತರ ತ್ಯಾಜ್ಯಗಳು ಶೇಖರಗೊಂಡಿವೆ. ಅದಲ್ಲದೇ, ನದಿ ತೀರ ಪ್ರದೇಶದ ಹಲವು ಶಾಲೆಗಳು ನೀರಿನಿಂದ ಆವೃತ್ತಗೊಂಡಿದ್ದರಿಂದ ಸುತ್ತಮುತ್ತಲ ಪ್ರದೇಶಗಳೆಲ್ಲ ಮಲೀನಗೊಂಡಿವೆ. ಶಾಲಾ ಮೈದಾನ, ಕುಡಿಯುವ ನೀರಿನ ಬಾವಿ, ಆಟದ ಸಾಮಗ್ರಿಗಳೆಲ್ಲ ರಾಡಿ ಮಣ್ಣಿನಿಂದ ಮುಚ್ಚಿಹೋಗಿವೆ.

ಜಿಲ್ಲಾಡಳಿತದ ಆದೇಶದ ಪ್ರಕಾರ ಮಂಗಳವಾರದಿಂದ ಶಾಲಾ ಕಾಲೇಜುಗಳು ಆರಂಭಗೊಂಡಿವೆ. ಆದರೆ ಕೆಲ ಶಾಲೆಗಳಲ್ಲಿ ಕುಡಿಯುವ ಹಾಗೂ ಬಿಸಿಯೂಟದ ಬಳಕೆಯ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣಗೊಂಡಿವೆ. ಶುದ್ಧ ನೀರಿನ ಘಟಕಗಳಿಗೆಲ್ಲ ಮಣ್ಣಿನಿಂದ ಮಿಶ್ರಣಗೊಂಡಿವೆ. ಶಾಲೆಯ ಸುತ್ತಮುತ್ತಲ ಪ್ರದೇಶಗಳು ಮಣ್ಣಿನಿಂದ 1 ಫೀಟ್‍ಗೂ ಅಧಿಕ ಹುಗಿಯುತ್ತವೆ. ಏಕಾಏಕಿ ನೆರೆಯ ಪ್ರಭಾವದಿಂದ ಹಲವಾರು ವಿದ್ಯಾರ್ಥಿಗಳ ಪಠ್ಯಪುಸ್ತಕಗಳು ಹಾನಿಯಾಗಿದೆ. ಶಾಲಾ ಕಾಲೇಜುಗಳಲ್ಲಿನ ಪುಸ್ತಕ ಭಂಡಾರಗಳು ಹಾಗೂ ಅತ್ಯಾವಶ್ಯಕ ಮಾಹಿತಿಗಳು ಸಂಪೂರ್ಣ ನೀರಿನಿಂದ ಕೊಚ್ಚಿಹೋಗಿದೆ.

ಅವಶ್ಯಕತೆಗಳು: ಇಂತಹ ಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಶೀಘ್ರದಲ್ಲಿ ಪಠ್ಯಪುಸ್ತಗಳನ್ನು ಹಾಗೂ ಇನ್ನಿತರ ಸಲಕರಣೆಗಳನ್ನು ಪುನಃ ವಿತರಿಸಬೇಕು. ಹಾನಿಗೊಳಗಾದ ಶಾಲೆಗಳನ್ನು ಶೀಘ್ರ ದುರಸ್ತಿಗೊಳಿಸಬೇಕು. ಮಕ್ಕಳ ಅತ್ಯಾವಶ್ಯಕ ವಸ್ತುಗಳು ಹಾಗೂ ಬಿಸಿಯೂಟದ ಸಾಮಗ್ರಿಗಳನ್ನು ಒದಗಿಸಬೇಕು. ಕೆಲ ಶಾಲೆಗಳಿಗೆ ಅತ್ಯಾವಶ್ಯಕ ಪೀಠೋಪಕರಣಗಳನ್ನು ಪೂರೈಸುವುದು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸುತ್ತಮುತ್ತಲ ಪ್ರದೇಶಗಳನ್ನು ಶೀಘ್ರವೇ ಸ್ವಚ್ಛಗೊಳಿಸಬೇಕಿದೆ.

ವಿವಿಧ ಸಂಘ ಸಂಸ್ಥೆ ಹಾಗೂ ಯುವ ಬ್ರಿಗೇಡ್‍ನಿಂದ ಸ್ವಚ್ಛತಾ ಕಾರ್ಯ: ನೆರೆ ಪೀಡಿತ ಪ್ರದೇಶಗಳ ಹಲವು ಕಡೆಗಳಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ಯುವ ಬ್ರಿಗೇಡ್ ತಂಡದವರು ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಸಂಪೂರ್ಣ ಮಣ್ಣು ಹಾಗೂ ಇನ್ನಿತರ ತ್ಯಾಜ್ಯಗಳಿಂದ ಆವೃತ್ತಗೊಂಡ ಐಗಳಕೂರ್ವೆ ಮತ್ತು ದಿವಗಿ ಶಾಲೆಯನ್ನು ಯುವ ಬ್ರಿಗೇಡ್ ತಂಡ ಸ್ವಚ್ಛಗೊಳಿಸಿ ಜನರ ಮನ್ನಣೆಗೆ ಪಾತ್ರವಾಗಿದೆ. ಅದೇ ರೀತಿ ವಿವೇಕನಗರದ ಶಾರದಾ ನಿಲಯ ಶಾಲೆಯನ್ನೂ ಸ್ವಚ್ಛಗೊಳಿಸಿ, ಸಣ್ಣಪುಟ್ಟ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಹಲವು ಶಾಲೆಗಳು ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಬಗೆಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿವಹಿಸಿ, ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕಿದೆ ಎಂಬುದು ಹಲವರ ಅಭಿಪ್ರಾಯ.

ವಿದ್ಯಾರ್ಥಿಗಳ ಹಲವು ಪಠ್ಯಪುಸ್ತಕಗಳು ನೆರೆಯಿಂದ ಹಾನಿಯಾಗಿದೆ. ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಮಕ್ಕಳಿಗೆ ಅತ್ಯಾವಶ್ಯಕ ಪಠ್ಯಪುಸ್ತಕಗಳನ್ನು ಶೀಘ್ರ ಒದಗಿಸಬೇಕು. ಅದೇ ರೀತಿ ಶಾಲೆಯ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛಗೊಳಿಸುವುದರ ಜೊತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. – ಸುಜಯ ಹೆಗಡೆ (ಚಂದಾವರ)

Categories: ಜಿಲ್ಲಾ ಸುದ್ದಿ

Leave A Reply

Your email address will not be published.