ಕಾರ್ಗಿಲ್ ವೀರ ಕ್ಯಾಪ್ಟನ್ ಅನೂಜ್ ನಯ್ಯರ್ ಬಗ್ಗೆ ನಿಮಗೆಷ್ಟು ಗೊತ್ತು..?

.

ವ್ಯಕ್ತಿ ವಿಶೇಷ: 1999ರ ಕಾರ್ಗಿಲ್ ಸಮರದಲ್ಲಿ ಭಾರತ ವಿಜಯಶಾಲಿಯಾಯಿತು, ಆದರೆ ಅದಕ್ಕಾಗಿ ಪ್ರಾಣ ತೆತ್ತ ತಾಯಿ ಭಾರತೀಯ ಸುಪುತ್ರರು ಅದೆಷ್ಟೋ ಜನ. ತಮ್ಮ ಪ್ರಾಣ- ಕುಟುಂಬದ ಬಗ್ಗೆ ಯಾವ ಯೋಚನೆಗಳನ್ನೂ ಮಾಡದೆ ದೇಶದ ಚಿಂತನೆ ಮಾಡಿದರು. ಶತ್ರು ಸೈನ್ಯ ಪಾಕಿಸ್ತಾನದ ತುಕಡಿಗಳನ್ನೆಲ್ಲ ಮುಗಿಸಿ ಕಾರ್ಗಿಲ್ ಭಾರತದ ವಿಜಯ ಪತಾಕೆ ಹಾರಾಡಿಸಿ ಕಾರ್ಗಿಲ್ ವಿಜಯ ದಿವಸ ಆಚರಿಸಿದರು. ಈ ವಿಜಯ ದಿನಕ್ಕಾಗಿ ಹೋರಾಡಿದವರಲೊಬ್ಬರಾದ ಕ್ಯಾಪ್ಟನ್ ಅನೂಜ್ ನಯ್ಯರ್ ಬಗ್ಗೆ ಸ್ವಲ್ಪ ತಿಳಿಯೋಣ.

1975 ರ ಅಗಸ್ಟ್ 28 ರಂದು ಡೆಲ್ಲಿಯಲ್ಲಿ ಜನಿಸಿದರು. ತಂದೆ ಎಸ್.ಕೆ.ನಯ್ಯರ್ ತಾಯಿ ಮೀನಾ. ಶಾಲಾ ಶಿಕ್ಷಣವನ್ನು ಆರ್ಮಿ ಪಬ್ಲಿಕ್ ಸ್ಕೂಲ್ ಧೌಲಾ ಕುವಾನ್ ನಲ್ಲಿ ಪಡೆದುಕೊಂಡರು. ಬಾಲ್ಯದಿಂದಲೇ ಪ್ರಕಾಶಮಾನವಾದ ವಿದ್ಯಾರ್ಥಿಯಾಗಿದ್ದು, ಶಿಕ್ಷಣ ಮತ್ತು ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಪದವಿ ಪಡೆದುಕೊಂಡರು. ನಂತರದಲ್ಲಿ 1997 ರಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ 17 ನೇ ಬೆಟಾಲಿಯನ್, ಜಾಟ್ರೆಜಿಮೆಂಟ್ ಗೆ ನಿಯೋಜನೆಗೊಂಡು ತಾಯಿ ಭಾರತೀಯ ಸೇವೆಯಲ್ಲಿ ನಿರತರಾದರು.

1999 ರ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನದ ಒಳನುಸುಳುವಿಕೆಯನ್ನು ಭಾರತೀಯ ಸೇನೆ ಪತ್ತೆ ಮಾಡಿತ್ತು. ಈ ಕಾರ್ಗಿಲ್ ಪ್ರದೇಶದಲ್ಲಿ ಕ್ಯಾಪ್ಟನ್ ಅನೂಜ್ ನಯ್ಯರ್‍ರನ್ನು ಭಾರತೀಯ ಸೇನೆ ನಿಯೋಜಿಸಿತ್ತು. ಅವರ ಪ್ರಮುಖ ಕಾರ್ಯಾಚರಣೆ ಇಲ್ಲಿಂದ ಪ್ರಾರಂಭವಾಯಿತು. ಪಿಂಪಲ್ 2 ವಶ ಪಡಿಸಿಕೊಳ್ಳಲು ಎದುರಾಳಿ ಬಳಿಯಿರುವ ನಾಲ್ಕು ಬಂಕರ್ ಗಳನ್ನು ನಾಶ ಮಾಡಲೇ ಬೇಕಿತ್ತು. ಅನೂಜ್ ಪಡೆಯ ಮೇಲೆ ಒತ್ತಡ ಹೆಚ್ಚುತ್ತಲೇ ಇತ್ತು. ಆ ಸಂದರ್ಭದಲ್ಲಿ ನಯ್ಯರ್ ರವರು ರಾಕೆಟ್ ಲಾಂಚರ್ ಗಳನ್ನು ಸ್ವತಃ ಅವರ ಹೆಗಲ ಮೇಲೆ ಹೊತ್ತು ಬಂಕರ್ ಎದುರು ನಿಂತು ಎದುರಾಳಿ ವಿರುದ್ಧ ದಾಳಿಗೈದರು.

ಶತ್ರು ಸೇನೆ ಇವರ ದಾಳಿಗೆ ಗಲಿವಿಲಿಯಂತಾದ ಸಂದರ್ಭವನ್ನೇ ಉಪಯೋಗಿಸಿಕೊಂಡು ಬಂಕರ್ ನೊಳಗೆ ಅಡವಿ ಕುಳಿತಿದ್ದ ಪಾಕಿಗಳನ್ನು ಕೊಂದು ಬಿಸಾಡಿಬಿಟ್ಟರು. ಅಷ್ಟೊತ್ತಿಗಾಗಲೇ ಅವರ ದಾಳಿಗೆ ನಡುಗಿದ್ದ ಪಾಕ್ ನ ಮತ್ತೆರಡು ಬಂಕರ್ ಗಳನ್ನು ಇವರ ತುಕಡಿಯೇ ನಾಶಗೊಳಿಸಿಬಿಟ್ಟಿತ್ತು. ಅನೂಜ್ ನಯ್ಯರ್‍ರವರ ಈ ಎಡಬಿಡದ ದಾಳಿಗೆ ಕಾರ್ಗಿಲ್ ಗೆಲ್ಲುವ ಪಾಕ್ ನ ಮುಕ್ಕಾಲರಷ್ಟು ವಿಶ್ವಾಸ ಮಣ್ಣುಪಾಲಾಗಿ ಛಿದ್ರವಾಗಿತ್ತು. ಇನ್ನುಳಿದ ಒಂದು ಬಂಕರ್ ಮಾತ್ರ ತುಂಬಾ ಹಾರಾಡುತ್ತಿತ್ತು. ಅದರ ಸದ್ದನ್ನೂ ಹುಟ್ಟಡಗಿಸಲು ನಯ್ಯರ್ ತಮ್ಮ ಪ್ರಾಣದ ಹಂಗು ತೊರೆದು ಮುನ್ನುಗ್ಗಿದಾಗ ಸಿಡಿದ ಶೆಲ್ಲಿನ ಸೀಸದ ಗುಂಡುಗಳು ಅನುಜ್‍ರ ದೇಹವನ್ನು ಹೊಕ್ಕುಬಿಟ್ಟಿತ್ತು. ಆ ಕ್ಷಣದಲ್ಲೇ ಅವರು ಪ್ರಾಣ ಬಿಟ್ಟು, ತಾಯಿ ಭಾರತೀಯ ಋಣ ಭಾರ ಕಳೆದುಕೊಂಡು ಬಿಟ್ಟರು.

Categories: ವ್ಯಕ್ತಿ-ವಿಶೇಷ

Leave A Reply

Your email address will not be published.