ಬೆಂಗಳೂರಿಗೆ ಶರಾವತಿ- ಅಘನಾಶಿನಿ ನೀರು ನಿರ್ಧಾರ ಕೈ ಬಿಡುವಂತೆ ಜು.26ಕ್ಕೆ ಬೃಹತ್ ಪ್ರತಿಭಟನೆ


ಕುಮಟಾ: ಶರಾವತಿ ಹಾಗೂ ಅಘನಾಶಿನಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿ ಜು. 26 ರಂದು ಶುಕ್ರವಾರ ಬೆಳಿಗ್ಗೆ 10:30ಕ್ಕೆ ಪಟ್ಟಣದ ಗಿಬ್‍ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು, ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಉತ್ತರಕನ್ನಡ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಎಮ್.ಜಿ. ಭಟ್ಟ ತಿಳಿಸಿದರು.

ಶರಾವತಿ ಹಾಗೂ ಅಘನಾಶಿನಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ನಿರ್ಧಾರವನ್ನು ಸ್ಥಗಿತಗೊಳಿಸುವ ಕುರಿತು ಉತ್ತರಕನ್ನಡ ಉಳಿಸಿ ಹೋರಾಟ ಸಮೀತಿಯ ವತಿಯಿಂದ ಪಟ್ಟಣದ ನಾದಶ್ರೀ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅನೇಕ ಯೋಜನೆಗಳು ನಮ್ಮ ಜಿಲ್ಲೆಯಲ್ಲಿಯೇ ಇದೆ. ಆದರೆ ಅದರ ಪ್ರಯೋಜನ ಮಾತ್ರ ಜಿಲ್ಲೆಯ ಜನತೆಗೆ ದೊರೆಯುತ್ತಿಲ್ಲ. ಈಗಲೇ ಸಾಕಷ್ಟು ನದಿ ಮೂಲಗಳು ಬತ್ತುತ್ತಿವೆ. ಹೀಗಿರುವಾಗ ನಮ್ಮ ಜಿಲ್ಲೆಯ ಶರಾವತಿ ಹಾಗೂ ಅಘನಾಶಿನಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಅವೈಜ್ಞಾನಿಕ ಯೋಜನೆಯನ್ನು ಸರ್ಕಾರ ರೂಪಿಸಿದೆ. ಜಿಲ್ಲೆಯ ಜನರ ಸಮಸ್ಯೆಯ ಬಗೆಗೆ ಸರ್ಕಾರಕ್ಕೆ ಅರಿವಿಲ್ಲ. ಈ ಯೋಜನೆಯಿಂದ ಜಿಲ್ಲೆಗೆ ಸಾಕಷ್ಟು ಹಾನಿಯಾಗಲಿದೆ. ಆದ್ದರಿಂದ ಈ ಯೋಜನೆಯನ್ನು ಇಲ್ಲಿಗೇ ಸ್ಥಗಿತಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಪ್ರಾಣ ಬಿಡುತ್ತೇವೆಯೇ ಹೊರತು ನೀರನಲ್ಲ ಎಂದು ಎಚ್ಚರಿಸಿದರು.

ಹೋರಾಟ ಸಮಿತಿಯ ಕಾನೂನು ವಿಭಾಗದ ಮುಖ್ಯಸ್ಥ ಆರ್.ಜಿ.ನಾಯ್ಕ ಮಾತನಾಡಿ, ಇದು ಏಕಾಏಕಿ ಬಂದ ಯೋಜನೆಯಲ್ಲ. ಈ ಮೊದಲೇ ಈ ಬಗ್ಗೆ ಚರ್ಚಿಸಿ, ಮೇಲ್ಮಟ್ಟದಲ್ಲಿ ಬಜೆಟ್ ಸಹ ಮಂಡನೆಯಾಗಿದೆ. ಈ ಕುರಿತು ಸ್ಥಳೀಯ ರಾಜಕಾರಣಿಗಳಿಗೆ ಬಜೆಟ್ ಪ್ರತಿ ಕೂಡಾ ಕಳುಹಿಸಿರುತ್ತಾರೆ. ಆದರೆ ಇದರ ವಿರುದ್ಧ ಹೋರಾಡದೇ ರಾಜಕಾರಣಿಗಳು ಬಾಯಿಮುಚ್ಚಿ ಕುಳಿತಿರುವುದು ಯಕ್ಷ ಪ್ರಶ್ನೆಯಾಗಿದೆ. ಈ ಯೋಜನೆಯಿಂದ ಕುಮಟಾ, ಹೊನ್ನಾವರ, ಭಟ್ಕಳದ ಎಲ್ಲ ಸಮಾಜಕ್ಕೂ ತೊಂದರೆ ಉಂಟಾಗಲಿದೆ. ಇಂದಿನ ಸರ್ಕಾರದ ನಡೆತೆಯಿಂದ ಬದಕಲೂ ಹೋರಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಯೋಜನೆಯ ವಿರುದ್ಧ ಪ್ರತಿ ಗಾ.ಪಂ. ಮಟ್ಟದಲ್ಲೂ ಕರಪತ್ರ ಹಂಚಿ, ಜಾಗೃತಿ ಮೂಡಿಸಬೇಕಾಗಿದೆ. ತಾಲೂಕಿನ ಜನತೆಯ ಸಹಿ ಪಡೆದು ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಬೇಕು. ಆದರೂ ಯೋಜನೆಯನ್ನು ಸ್ಥಗಿತಗೊಳಿಸಲಿಲ್ಲವೆಂದಾದರೆ ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗೆ ಬೀಗ ಹಾಕಬೇಕು. ಈ ಎಲ್ಲ ಕಾರ್ಯಕ್ಕೆ ಪಕ್ಷಾತೀತವಾಗಿ ಎಲ್ಲ ಸಮಾಜ ಬಾಂಧವರು ಒಂದಾಗಬೇಕು ಎಂದರು.

ಸಮಿತಿಯ ಗೌರವ ಸಲಹೆಗಾರ ಶಿವಾನಂದ ಹೆಗಡೆ ಕಡತೋಕ ಮಾತನಾಡಿ, ಶರಾವತಿ ಹಾಗೂ ಅಘನಾಶಿನಿ ಇದು ಕೇವಲ ನದಿಯಲ್ಲ, ಇದೇ ಜೀವನ. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ನೀರಿನ ಸಮಸ್ಯೆಯನ್ನು ಕಂಡಿದ್ದೇವೆ. ಹೀಗಿರುವಾಗ ಬೆಂಗಳೂರಿಗೆ ಇಲ್ಲಿನ ಜೀವಜಲವನ್ನು ಕೊಂಡೊಯ್ದರೆ ಇಲ್ಲಿನ ಜನತೆಯ ಪರಿಸ್ಥಿತಿಯೇನು. ಅದನ್ನೇ ನಂಬಿಕೊಂಡು ಸಾಕಷ್ಟು ಮೀನುಗಾರರು ಜೀವನ ಸಾಗಿಸುತ್ತಿದ್ದಾರೆ. ಮೊದಲು ನೀರನ್ನು ಬೆಂಗಳೂರಿಗೆ ಮಾತ್ರ ಕೊಂಡೊಯ್ಯುತ್ತೇವೆ ಎನ್ನುವ ಸರ್ಕಾರ ಮಾರ್ಗಮಧ್ಯದಲ್ಲಿಯೂ ನೀರಿನ ಸಮಸ್ಯೆ ಉಂಟಾದರೆ ಇದೇ ನೀರನ್ನು ನೀಡುವುದರಲ್ಲಿ ಸಂಶಯವಿಲ್ಲ. ಈ ಯೋಜನೆ ಸ್ಥಗಿತಗೊಳ್ಳುವವರೆಗೆ ನಾವೆಲ್ಲರೂ ಒಂದಾಗಿ ಹೋರಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ವಿವಿಧ ಪಕ್ಷದ ಮುಖಂಡರು, ಹಲವು ಸಮಾಜದ ಪ್ರಮುಖರು, ಪುರಸಭಾ ಸದಸ್ಯರು ಸೇರಿದಂತೆ ಹಲವರಿದ್ದರು. ಹೇಮಂತಕುಮಾರ ಗಾಂವಕರ ನಿರೂಪಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.