ಸುವಿಚಾರ

ಕರ್ಪೂರಧೂಲೀಕಲಿತಾಲವಾಲೇ ಕಸ್ತೂರಿಕಾಕಲ್ಪಿತದೋಹಲಶ್ರೀಃ
ಹಿಮಾಂಬುಕಾಭೈರಭಿಷಿಚ್ಯಮಾನಃ ಪ್ರಾಂಚಂ ಗುಣಂ ಮುಂಚತಿ ನೋ ಪಲಾಂಡುಃ ||

ಕರ್ಪೂರದ ಹುಡಿಯಿಂದಲೇ ಪಾತಿ, ಸುಗಂಧಿತ ಕಸ್ತೂರಿಯನ್ನೇ ಬಳಸಿ ಉಪಚಾರ ಮಾಡಿ, ಗುಲಾಬಿಯ ಎಸಳುಗಳ ಮೇಲಿಂದ ಇಳಿದ ಇಬ್ಬನಿಯನ್ನೇ ನೀರಾಗಿ ಉಣಿಸುವ ಸಾಹಸ ಮಾಡಿದರೂ ಈರುಳ್ಳಿ ಅನ್ನುವುದು ಇದೆಯಲ್ಲ, ಅದು ತನ್ನ ಮೂಲಭೂತವಾದ ಸ್ವಭಾವವನ್ನು (ಅಂದರೆ ತನ್ನದೇ ಆದ ಕಮಟು ಗಂಧವನ್ನು) ತೊರೆಯುವುದಿಲ್ಲ. ಸುಗಂಧಭರಿತವಾತ ಬೇರೆ ಏನೆಲ್ಲ ವಸ್ತುಗಳಿಂದ ಸಂಸ್ಕಾರ ಕೊಡಲು ಪ್ರಯತ್ನಿಸಿದರೂ ಈರುಳ್ಳಿಯು ತನ್ನ ಹುಟ್ಟುಗುಣವನ್ನು ತೊರೆಯದೇ ಬದುಕುತ್ತದೆ.
ಈರುಳ್ಳಿ ಒಂದೇ ಅಲ್ಲ, ಜನ್ಮಜಾತವಾದ ನಮ್ಮೆಲ್ಲರ ಸಂಸ್ಕಾರಗಳೂ ಈರುಳ್ಳಿಯ ವಾಸನೆಯಂತೆಯೇ. ಅದೆಷ್ಟೇ ಓದು, ಅನುಭವ ಮತ್ತು ಹೊರಗಿನಿಂದ ಮಾಡುವ ತೇಪೆಗಳಿಂದಲೂ ಅದು ಮಾತ್ರ ಬದಲಾಗದೆ ಉಳಿಯುತ್ತದೆ. ಹುಟ್ಟುಗುಣ ಸುಟ್ಟರೂ ಹೋಗದು ಅನ್ನುವ ಮಾತೇ ಇದೆಯಲ್ಲ ಕನ್ನಡಲ್ಲಿ. ಈರುಳ್ಳಿಯಾದರೂ ಸುಟ್ಟಾಗ (ಬೇಯಿಸಿದಾಗ) ಜಿಹ್ವಾರಸೋತ್ಪಾದಕ ಗಂಧವನ್ನು ಹೊಮ್ಮಿಸೀತು, ಮನುಷ್ಯ ಸ್ವಭಾವಗಳು ಮಾತ್ರ ಎಂದಿಗೂ ಬದಲಾಗವು.
– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.