ರೋಟರಿ- ಎಮ್‌ಇಎಸ್ ಸಹಯೋಗ: 6 ಲಕ್ಷಕ್ಕೂ ಅಧಿಕ ಲೀ. ನೀರು ಸಂಗ್ರಹದ ಮಳೆಕೊಯ್ಲು ಯೋಜನೆ


ಶಿರಸಿ: ಬೇಸಿಗೆ ಕಾಲದಲ್ಲಿ ನೀರಿನ ಬವಣೆಯನ್ನು ತಪ್ಪಿಸಲು ರೋಟರಿ ಮತ್ತು ಎಮ್.ಇ.ಎಸ್. ಶಿಕ್ಷಣ ಸಂಸ್ಥೆ ಮಾದರಿ ನೀರುಳಿಕೆ ಹಾಗೂ ನೀರಿಂಗಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಎಮ್.ಇ.ಎಸ್. ಸಂಸ್ಥೆಯ 3 ವಸತಿ ನಿಲಯಗಳಲ್ಲಿ ತಂಗಿದ್ದ ವಿದ್ಯಾರ್ಥಿನಿಯರಿಗೆ ನೆರವಾಗಲು ಆರು ಲಕ್ಷಕ್ಕೂ ಅಧಿಕ ಲೀಟರ್ ನೀರನ್ನು ಹಿಡಿದಿಟ್ಟು ಮರು ಬಳಕೆ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.

ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಎಮ್.ಇ.ಎಸ್. ಸಂಸ್ಥೆಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕಾನೂನು ವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಉಂಟಾಗುತ್ತಿದ್ದ ನೀರಿನ ಸಮಸ್ಯೆಯನ್ನು ನೀಗಿಸಲು ಶಿರಸಿ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಮಳೆ ನೀರು ಸಂಗ್ರಹ, ಇಂಗಿಸುವಿಕೆ ಹಾಗೂ ಪುನರ್ ಬಳಕೆ ಘಟಕವನ್ನು ಸ್ಥಾಪನೆ ಮಾಡಲಾಗಿದೆ.

ಈ ಕುರಿತು ನಗರದ ಎಂಇಎಸ್ ಪ್ರಾಂಗಣದಲ್ಲಿ ಎಂಇಎಸ್ ಆಡಳಿತ ಮಂಡಳಿ ಹಾಗೂ ರೋಟರಿ ಕ್ಲಬ್ ಸದಸ್ಯರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರು ವಸತಿ ಮಾಡುವ ಮೂರು ಹಾಸ್ಟೇಲ್ಗ ಳಲ್ಲಿ ಒಟ್ಟೂ ನಾಲ್ಕು ಕಡೆ ಐದು ಸಾವಿರ ಲೀ.ಗಳಷ್ಟು ಸಾಮರ್ಥ್ಯದ ಟ್ಯಾಂಕ್ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಪ್ರತೀ ಹಾಸ್ಟೇಲ್ ಮೇಲ್ಛಾವಣಿಯ ನೀರು ಬೇರೆಲ್ಲೂ ಹರಿದು ಹೋಗದೇ ಅದನ್ನು ಸೋಸಿ ಸ್ವಚ್ಛಗೊಳಿಸುವ ಮೂಲಕ ಮೂವತ್ತಕ್ಕೂ ಅಧಿಕ ಟ್ಯಾಂಕ್ ಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಕಳೆದ ಎಂಟು ದಿನಗಳಿಂದ ಸುರಿದ ಮಳೆಗೆ ಅಷ್ಟೂ ಟ್ಯಾಂಕ್ ಗಳು ತಂಬಿದ್ದು, ಹೆಚ್ಚುವರಿ ನೀರು ಬಟ್ಟೆ ತೊಳೆಯಲು, ಸ್ವಚ್ಛಗೊಳಿಸಲು, ಸ್ನಾನಕ್ಕೆ ಬಳಸಲು ಪಂಪ್ ಮಾಡಿಕೊಳ್ಳುತ್ತಿದ್ದಾರೆ. ಎರಡು ವರ್ಷ ಆದರೂ ಹಾಳಾಗದ ಗುಣಮಟ್ಟದಲ್ಲಿ ನೀರಿನ ಸಂಗ್ರಹಣೆ ಮಾಡಲಾಗಿದ್ದು, ಹೆಚ್ಚುಳಿದ ನೀರೂ ಭೂಮಿಗೆ ಇಂಗುವ ವ್ಯವಸ್ಥೆ ಮಾಡಲಾಗಿದೆ ಎಂದು ಎಮ್.ಇ.ಎಸ್. ಸಂಸ್ಥೆಯ ಅಧ್ಯಕ್ಷ ಜಿ.ಎಮ್.ಹೆಗಡೆ ಮಾಹಿತಿ ನೀಡಿದರು.

ಸುಮಾರು 130 ಟ್ಯಾಂಕ್ ಗಳಿಂದ ಆರುವರೆ ಲಕ್ಷ ಲೀಟರ್ ಸಂಗ್ರಹಣೆಯ ಸಾಮರ್ಥ್ಯ ಈ ನಾಲ್ಕೂ ವಸತಿ ನಿಲಯಗಳಿಂದ ಸಾಧ್ಯವಾಗಿದೆ. ಸುಮಾರು 550 ವಿದ್ಯಾರ್ಥಿನಿಯರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಮುಖ್ಯವಾಗಿ ಏಪ್ರೀಲ್, ಬೇಸಗೆಯಲ್ಲಿನ ಜಲದ ಬವಣೆ ತಪ್ಪಿಸಿ, ನೀರನ್ನು ಟ್ಯಾಂಕರ್ ಮೂಲಕ ತರಿಸಿಕೊಳ್ಳುವದು ತಪ್ಪಲಿದೆ. ಎಂಇಎಸ್ ಪ್ರಾಂಗಣ ಎರಡೂ ಕಡೆ ತಗ್ಗಿನಿಂದ ಕೂಡಿದ್ದು, ಇದರ ಒಂದೇ ಒಂದು ಹನಿ ನೀರು ಹೊರಗೆ ಹೋಗದಂತೆ ಮೂರು ದೊಡ್ಡ ಕೆರೆಗಳನ್ನೂ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಸುಮಾರು 40 ಲಕ್ಷ ಲೀ. ನೀರು ಸಂಗ್ರಹವಾಗಲಿದೆ. ಈ ಜಲ ಕೊಯ್ಲು ಕೇವಲ ಎಂಇಎಸ್ ಕ್ಯಾಂಪಸ್ ಗೆ ಮಾತ್ರವಲ್ಲ, ಸುತ್ತಲಿನ ಆರು ಸಾವಿರಕ್ಕೂ ಅಧಿಕ ಕುಟುಂಬಗಳಿಗೆ, ವಸತಿ ಉಳ್ಳವರಿಗೆ ನೆರವಾಗಲಿದೆ. ಅವರ ಬಾವಿಯ ನೀರೂ ಏರಿಕೆ ಆಗಲಿದೆ. ಶಾಂತಿ ನಗರ, ಆದರ್ಶನಗರ, ಗಾಯತ್ರಿ ನಗರ, ಕೆಎಚ್‌ಬಿ ಕಾಲನಿ, ವಿವೇಕಾನಂದ ನಗರ, ಸಹ್ಯಾದ್ರಿ ಕಾಲನಿಗಳಿಗೂ ಅನುಕೂಲ ಆಗಲಿದೆ.

ಇ ಯೋಜನೆಗೆ ಸುಮಾರು 58 ಲಕ್ಷ ರೂ. ತಗುಲಿದ್ದು, ಎಂಇಎಸ್ ಶಿಕ್ಷಣ ಸಂಸ್ಥೆ ತನ್ನ ಪಾಲಾಗಿ 10 ಲಕ್ಷ ರೂ. ನೀಡಿದೆ. ರೋಟರಿ ಇಂಟರ್ ನ್ಯಾಶನಲ್, ಡಾ. ವಸಂತ ಪ್ರಭು, ರೋಟರಿ ಸದಸ್ಯರು, ರೋಟರಿ ಸೆಂಟ್ರಲ್ ಚೆಸ್ಟರ್ ಕೌಂಟಿ ಇತರರು ನೆರವಾಗಿದ್ದಾರೆ. ಭೂ ವಿಜ್ಞಾನಿ ಡಾ. ಜಿ.ವಿ.ಹೆಗಡೆ, ಅರುಣ ನಾಯಕ ಸೇರಿದಂತೆ ಇತರರ ನೆರವು ಸಹಕಾರ ಇದೆ. ಈ ಮೂಲಕ ರೋಟರಿ ಕ್ಲಬ್ ಶಿಕ್ಷಣ ಸಂಸ್ಥೆಯ ಮೂಲಕವೂ ಜಲ ಜಾಗೃತಿಗೆ ನಾಂದಿ ಹಾಡಿದೆ ಎಂದು ಯೋಜನೆಯ ರೂವಾರಿ, ರೋಟರಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಕಾಮತ್ ತಿಳಿಸಿದರು.

ಈ ವೇಳೆ ಪ್ರಮುಖರಾದ ಅಧ್ಯಕ್ಷ ಡಾ. ಶಿವರಾಮ ಕೆ.ವಿ, ಶ್ಯಾಂಸುಂದರ ಭಟ್ಟ, ಪಾಂಡುರಂಗ ಪೈ ಸೇರಿದಂತೆ ಇತರರು ಇದ್ದರು.

ಮಾದರಿ ನೀರಿಂಗಿಸುವ ಘಟಕವನ್ನು ಜು.14 ರಂದು ಬೆಳಿಗ್ಗೆ 11 ಗಂಟೆಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ 3170 ಕಂದಾಯ ಜಿಲ್ಲೆಯ ಹಿಂದಿನ ಜಿಲ್ಲಾ ಪ್ರಾಂತಪಾಲರಾದ ಬೆಳಗಾವಿಯ ರೋ. ಆನಂದ ಕುಲಕರ್ಣಿ, ಬಿಜಾಪುರದ ರೋ. ಡಾ. ಪ್ರಾಣೇಶ ಜಾಗಿರದಾರ, ಎಂ. ಇ. ಎಸ್. ಅಧ್ಯಕ್ಷ ಜಿ. ಎಂ. ಹೆಗಡೆ, ಮುಳಖಂಡ ಹಾಗೂ ರೋಟರಿ ಕ್ಲಬಿನ ಅಂತರಾಷ್ಟ್ರೀಯ ಪಾಲುದಾರ ಅಮೇರಿಕಾದ ರೋ. ವಸಂತ ಪ್ರಭು ರವರು ಉದ್ಘಾಟಿಸಲಿದ್ದಾರೆ. ಇದೊಂದು ಶಿರಸಿ ರೋಟರಿ ಕ್ಲಬಿನ ಇತಿಹಾಸದಲ್ಲಿ ಅಪೂರ್ವ ಸಾಧನೆಯಾಗಲಿದೆ ಎಂದು ಪ್ರವೀಣ್ ಕಾಮತ್ ಮಾಹಿತಿ ನೀಡಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.