ಕಳಪೆ ಮಟ್ಟದ ಒಳಚರಂಡಿ ಕಾಮಗಾರಿ: ವಾಹನ ಸಂಚಾರಕ್ಕೆ ಅಡೆತಡೆ: ಸ್ಥಳೀಯರ ಆಕ್ರೋಶ

ಕುಮಟಾ: ತಾಲೂಕಿನ ಬಗ್ಗೋಣದಲ್ಲಿ ಈ ಹಿಂದೆ ನಿರ್ಮಿಸಿದ ಒಳಚರಂಡಿ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಇದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ. ಅಷ್ಟಲ್ಲದೇ, ಒಳಚರಂಡಿ ಸಮಸ್ಯೆಯಿಂದ ಸಾರಿಗೆ ಬಸ್ ಕೂಡಾ ಬರುವುದು ನಿಂತಿದೆ. ಆದರೆ ಸಬಂಧಪಟ್ಟ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಅಕ್ಕಿ ಮಿಲ್‍ಗೆ ಗುರುವಾರ ಸಾಯಂಕಾಲ ಬಂದಿದ್ದ ಲಾರಿಯೊಂದು ಒಳಚರಂಡಿ ಕಾಲುವೆಯಲ್ಲಿ ಸಿಲುಕಿಕೊಂಡಿತ್ತು. ಇದನ್ನು ಮೇಲೆಬ್ಬಿಸಲು ಬಂದ ಟೋವಿಂಗ್ ಕ್ರೇನ್ ಕೂಡಾ ಸಿಲುಕಿಕೊಂಡಿತ್ತು. ರಾತ್ರಿ ಕಾಲುವೆಯಲ್ಲಿ ಸಿಲುಕಿಕೊಂಡ ಕ್ರೇನ್ ಎತ್ತಲು ಬಂದ ಇನ್ನೊಂದು ಕ್ರೇನ್ ಕೂಡಾ ಹುಗಿದುಹೋಗಿ, ಬಗ್ಗೋಣ ರಸ್ತೆಯಲ್ಲಿ ಸಂಪೂರ್ಣ ಜನವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ರಾತ್ರಿ ಕಷ್ಟಪಟ್ಟು ಕಾಲುವೆಯಲ್ಲಿ ಸಿಲುಕಿಕೊಂಡ ವಾಹನಗಳನ್ನು ಎತ್ತಲಾಯಿತಾದರೂ ಶುಕ್ರವಾರ ಬೆಳಿಗ್ಗೆ ಮತ್ತದೇ ಸ್ಥಳದಲ್ಲಿ ತಂಪುಪಾನೀಯದ ವಾಹನ ಹುಗಿದುಹೋಗಿ ಜನ ಪರದಾಡುವಂತಾಗಿದೆ.

ಒಳಚರಂಡಿ ಕಾಮಗಾರಿಯ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಯೋಜನೆ ನಮಗೆ ಬೇಕಾಗಿಯೇ ಇರಲಿಲ್ಲ. ಯೋಜನೆಯನ್ನು ನಮ್ಮ ಮೇಲೆ ಹೇರಲಾಗಿದೆ. ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಚೇಂಬರ್‍ಗಳಲ್ಲಿ ಈಗ ನೀರು ಉಕ್ಕುತ್ತಿದೆ. ಮುಂದೆ ಚರಂಡಿಯಲ್ಲಿನ ಹೊಲಸು ಉಕ್ಕಲಿದೆ. ಬೇಸಿಗೆಯಲ್ಲಿ ಧೂಳಿನ ಕಾಟ, ಮಳೆಗಾಲದಲ್ಲಿ ರಸ್ತೆಯೇ ಹಾಳು. ಕುಮಟಾ ಪಟ್ಟಣದ ಭಾಗದಲ್ಲಿ ಒಳಚರಂಡಿ ಕೆಲಸ ಮಾಡುವಾಗ ಧೂಳು ಬಾರದಂತೆ ದಿನಕ್ಕೆ 5-6 ಬಾರಿ ನೀರು ಹೊಡೆದಿದ್ದರು. ಆದರೆ ಬಗ್ಗೋಣದಲ್ಲಿ ಒಮ್ಮೆಯೂ ಧೂಳಿಗಾಗಿ ನೀರು ಹಾಕಿಲ್ಲ. ಕಾಂಕ್ರೀಟ್ ಕೆಲಸಕ್ಕೂ ಕ್ಯೂರಿಂಗ್ ಮಾಡಿಲ್ಲ. ನಮಗೆ ಇಂಥ ಕೆಟ್ಟ ಕಳಪೆ ಒಳಚರಂಡಿ ಯೋಜನೆ ಬೇಡವೇ ಬೇಡ ಎಂದು ಸ್ಥಳೀಯರಾದ ನಾಗೇಶ ನಾಯ್ಕ, ಮೋಹನ ನಾಯ್ಕ, ಜಗದೀಶ ನಾಯ್ಕ, ಗಣಪತಿ ಮುಕ್ರಿ, ರಾಮಾ ಮುಕ್ರಿ, ಸುಬ್ರಾಯ ಮುಕ್ರಿ, ನಾರಾಯಣ ನಾಯ್ಕ, ಕೃಷ್ಣ ಗೌಡ, ಮಾರುತಿ ನಾಯ್ಕ, ಈಶ್ವರ ನಾಯ್ಕ, ದತ್ತಾತ್ರಯ ನಾಯ್ಕ, ಸುರೇಶ ಸೇರಿದಂತೆ ಇನ್ನಿತರರು ವಿರೋಧ ವ್ಯಕ್ತಪಡಿಸಿದ್ದಾರೆ.

ಇಂತಹ ಅವೈಜ್ಞಾನಿಕ ಒಳಚರಂಡಿ ಕಾಲುವೆಯ ಅವಾಂತರಕ್ಕೆ ಬಗ್ಗೋಣದಿಂದ ಊರಕೇರಿವರೆಗಿನ ಜನ ಬೆಲೆ ತೆರುವಂತಾಗಿದೆ. ಒಂದಿಲ್ಲೊಂದು ಕಡೆ ಕುಸಿಯುತ್ತಿರುವ ಒಳಚರಂಡಿ ಕಾಲುವೆಯಲ್ಲಿ ದೊಡ್ಡ ವಾಹನಗಳು ಮಾತ್ರವಲ್ಲದೇ ದ್ವಿಚಕ್ರ ವಾಹನಿಗರೂ ಕೂಡಾ ಬಿದ್ದು ಪೆಟ್ಟು ಮಾಡಿಕೊಳ್ಳುವುದು ದಿನನಿತ್ಯದ ದ್ರಶ್ಯವಾಗಿದೆ. ಇಷ್ಟೊಂದು ಸಮಸ್ಯೆಯಾದ ಬಳಿಕ ಬಗ್ಗೋಣದಲ್ಲಿ ಕುಸಿದ ಒಳಚರಂಡಿ ಕಾಲುವೆಗಳಿಗೆ ಕಾಮಗಾರಿ ಗುತ್ತಿಗೆ ಪಡೆದವರು ಶುಕ್ರವಾರ ಕಲ್ಲುಮಣ್ಣು ಮುಚ್ಚುವ ಕೆಲಸ ಆರಂಭಿಸಿದ್ದಾರೆ. ಆದರೆ ಮಳೆಗಾಲ ಮುಗಿಯುವವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂಬುದು ಸ್ಥಳೀಯರ ಅಳಲು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.