ಆರೋಗ್ಯ- ಶಿಕ್ಷಣದ ಜಾಗೃತಿ ಕೊರತೆಯೇ ಜನಸಂಖ್ಯಾ ಸ್ಪೋಟಕ್ಕೆ ಕಾರಣ: ರತ್ನಾಕರ ನಾಯ್ಕ

ಕುಮಟಾ: ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಭೂಮಿ ಬೆಳೆಯುತ್ತಿಲ್ಲ. ಶಿಕ್ಷಣ ಹಾಗೂ ಆರೋಗ್ಯದ ಕುರಿತಾದ ಜಾಗೃತಿ ಕೊರತೆಯೇ ಜನಸಂಖ್ಯಾ ಸ್ಫೋಟಕ್ಕೆ ಕಾರಣ. ಯುವ ಸಮುದಾಯ ಈ ಕುರಿತು ನಿರ್ಲಕ್ಷಿಸಿದರೆ, ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮೀತಿ ಅಧ್ಯಕ್ಷ ರತ್ನಾಕರ ನಾಯ್ಕ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿ.ಪಂ.ಉತ್ತರಕನ್ನಡ, ಆರೋಗ್ಯ ಇಲಾಖೆ ಕುಮಟಾ, ತಾಲೂಕಾಡಳಿತ ಹಾಗೂ ತಾ.ಪಂ ಕುಮಟಾ, ಕೆನರಾ ಎಜ್ಯುಕೇಶನ್ ಸೊಸೈಟಿ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ-2019 ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಜನಸಂಖ್ಯಾ ಹೆಚ್ಚಳದಿಂದ ನಾವು ಮಿತಿಮೀರಿ ಮನೆಗಳನ್ನು, ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ. ಮರಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ಮಾಡುತ್ತಿದ್ದೇವೆ. ಇದರಿಂದ ಮಳೆ ಕಡಿಮೆಯಾಗಿ ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬೇರೆಡೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಜನಸಂಖ್ಯೆ ಅಷ್ಟೊಂದು ವೇಗವಾಗಿ ಹೆಚ್ಚುತ್ತಿಲ್ಲ. ಇದಕ್ಕೆ ಇಲ್ಲಿನವರ ಶಿಕ್ಷಣ ಹಾಗೂ ಆರೋಗ್ಯದ ಕುರಿತು ಇರುವ ಪ್ರಮುಖ ಕಾಳಜಿಯೇ ಕಾರಣ ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಆಜ್ಞಾ ನಾಯಕ ಪ್ರಾಸ್ತವಿಕವಾಗಿ ಮಾತನಾಡಿ, ಮುಂದಿನ ಕೆಲವೇ ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ 800 ಕೋಟಿಯನ್ನು ದಾಟಲಿದೆ. ಸ್ವಾತಂತ್ರ್ಯ ಬಂದ 60 ವರ್ಷಗಳಲ್ಲಿ ನಮ್ಮ ದೇಶದ ಜನಸಂಖ್ಯೆ 91 ಕೋಟಿಗಳಷ್ಟು ಹೆಚ್ಚಾಗಿದೆ. ಕೇವಲ ಬಡತನ, ಅಜ್ಞಾನ, ಮೂಡನಂಬಿಕೆ ಮಾತ್ರ ಜನಸಂಖ್ಯಾ ಹೆಚ್ಚಳಕ್ಕೆ ಕಾರಣವಲ್ಲ. ಜನಸಂಖ್ಯಾ ನಿಯಂತ್ರಣಕ್ಕೆ ಒಂದೇ ಬಾರಿ ಕಡಿವಾಣ ಹಾಕಲು ಸಾಧ್ಯವಿಲ್ಲ. ಇದರಿಂದ ಯುವಸಮುದಾಯದ ಸಂಖ್ಯೆ ಕಡಿಮೆಯಾಗಿ, ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಜನಸಂಖ್ಯಾ ನಿಯಂತ್ರಣ ಅಧಿಕವಾದಂತೆ ಜನರಿಗೆ ವಾಸಸ್ಥಾನವನ್ನು ಒದಗಿಸುವ ನಿಟ್ಟಿನಲ್ಲಿ ಕಾಡುಗಳ ನಾಶ, ಕೆರೆ, ಕಾಲುವೆಗಳ ಒತ್ತುವರಿ ಸೇರಿದಂತೆ ನಿಸರ್ಗಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡರೆ ಮುಂದೊಂದು ದಿನ ಅಧೋಗತಿಗೆ ಹೋಗುವುದು ನಿಶ್ಚಿತ. ಜನಸಂಖ್ಯಾ ನಿಯಂತ್ರಣದಲ್ಲಿ ಯುವ ಸಮುದಾಯದ ಪಾತ್ರ ಹೆಚ್ಚಿದೆ ಎಂದರು.

ಪ್ರಾರಂಭದಲ್ಲಿ ಅಕ್ಷತಾ ಹೆಬ್ಬಾರ ಸ್ವಾಗತ ಗೀತೆ ಹಾಡಿದರು. ದಯಾನಂದ ಶೆಟ್ಟಿ ಸ್ವಾಗತಿಸಿದರು. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ರತನ ಗಾಂವಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.