ಧಾರಾಕಾರ ಮಳೆ- ಅವೈಜ್ಞಾನಿಕ ಡಾಂಬರೀಕರಣದಿಂದ ಈ ಗ್ರಾಮದ ಸಂಪರ್ಕವೇ ಕಡಿತ.! ಎಲ್ಲಿ ಗೊತ್ತಾ.?


ಯಲ್ಲಾಪುರ: ಮಲೆನಾಡಿನ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅನೇಕ ಕಡೆಗಳಲ್ಲಿ ಹಾನಿಯುಂಟಾಗಿದೆ. ಇದಕ್ಕೆ ತಾಲೂಕಿನ ಪುಟ್ಟ ಗ್ರಾಮ ಡಬ್ಗುಳಿಯೂ ಒಂದು.

ಈ ಭಾಗದಲ್ಲಿ ಮಂಗಳವಾರ- ಬುಧವಾರ ಸುರಿದ ಧಾರಾಕಾರ ಮಳೆಯಿಂದ ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಇತ್ತೀಚಿಗೆ ನಡೆದಿದ್ದ ಅವೈಜ್ಞಾನಿಕ ಡಾಂಬರೀಕರಣದ ಅಡ್ಡ ಪರಿಣಾಮ ಎನ್ನಲಾಗುತ್ತಿದೆ. ಒಂದು ಬದಿ ಹಳ್ಳ, ಒಂದು ಬದಿ ಬೃಹತ್ ಗುಡ್ಡದ ನಡುವೆ ಹಾದುಹೋಗುವ ರಸ್ತೆ ರಾತ್ರಿ ಬೆಳಗಾಗುವ ಒಳಗೆ ಮಾಯವಾಗಿದೆ. ಎರಡು ಗುಡ್ಡಗಳ ಬುಡ ಸಂಪೂರ್ಣ ರಸ್ತೆಯ ಮೇಲೆ ಕುಸಿದಿದ್ದು, ಡಾಂಬರು ರಸ್ತೆಯ ಸಮೇತ ಬೃಹತ್ ಮರಗಳು ಸುಮಾರು ನೂರಡಿ ಕೆಳಗಿರುವ ಹಳ್ಳದ ಪಾಲಾಗಿದೆ. ಐವತ್ತಕ್ಕೂ ಬೃಹತ್ ಮರಗಳು ಧರೆಗುರುಳಿವೆ. ಡಾಂಬರು ರಸ್ತೆಯ ಗುಂಟ 250 ಮೀಟರಿಗೂ ಉದ್ದ ಕುಸಿತಕ್ಕೊಳಗಾಗಿದ್ದು, ಡಬ್ಗುಳಿ ಗ್ರಾಮ ಸಂಪರ್ಕದಿಂದ ವಂಚಿತವಾಗಿದೆ.

ಇದೇ ವರ್ಷ ಕಚ್ಚಾ ರಸ್ತೆಯನ್ನು ಅಭಿವೃದ್ಧಿಪಡಿಸಿ ಡಾಂಬರೀಕರಣ ಮಾಡಲಾಗಿತ್ತು. ಡಾಂಬರು ರಸ್ತೆಯ ಪಕ್ಕ ಒಂದು ಹೆಜ್ಜೆ ಕಾಲಿಡಲೂ ಆಗದಂತೆ ಅಗಲೀಕರಿಸದೆ ಅವೈಜ್ಞಾನಿಕ ಕಾಮಗಾರಿ ನಡೆಸಲಾಗಿತ್ತು. ಅಲ್ಲದೇ ಕಾಮಗಾರಿಯ ಯಂತ್ರಗಳ ಒತ್ತಡಕ್ಕೆ ಗುಡ್ಡದ ಮಣ್ಣು ಸಡಿಲಗೊಂಡು ಎರಡು ಗುಡ್ಡಗಳ ಬುಡ ಕುಸಿದಿದೆ. ಗುಡ್ಡದ ಮೇಲಿದ ಮರಗಳು ಕಿತ್ತು ನೂರಕ್ಕೂ ಹೆಚ್ಚು ಅಡಿ ಆಳದ ಹಳ್ಳ ಸೇರಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.

ಸ್ಥಳಕ್ಕೆ ತಹಶೀಲ್ದಾರರು ಭೇಟಿ ನೀಡಲು ಬಂದಿದ್ದರೂ ಮಧ್ಯೆ ವಿದ್ಯುತ್ ತಂತಿ, ಕಂಬದ ಮೇಲೆ ನಾಲ್ಕು ಮರ ಬಿದ್ದು ಕುಸಿತ ಉಂಟಾದಲ್ಲಿ ತೆರಳಲು ಸಾಧ್ಯವಾಗದೆ ವಾಪಸ್ಸಾಗಿದ್ದಾರೆ. ಮಧ್ಯಾಹ್ನ ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ಆಗಮಿಸಿ ವಿಪತ್ತು ನಿರ್ವಹಣಾ ದಳಕ್ಕೆ ವಹಿಸುವುದಾಗಿ ಹೇಳಿ ತೆರಳಿದ್ದಾರೆ. ರಸ್ತೆ ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ ವಹಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಅವೈಜ್ಞಾನಿಕ ಕಾಮಗಾರಿ ಮತ್ತು ಭೂಮಿಯ ಮೇಲಿನ ಒತ್ತಡವೇ ಈ ದುರಂತಕ್ಕೆ ಕಾರಣ. ಮೂಲಭೂತ ಸೌಕರ್ಯವೇ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಮಳೆಗಾಲ ಪೂರ್ತಿ ಹೊರಜಗತ್ತಿನಿಂದ ದೂರ ಉಳಿಯುವ ಸ್ಥಿತಿ ನಮ್ಮದಾಗಿದೆ. ಸಂಬಂಧಿಸಿದವರು ಕೇವಲ ಆಶ್ವಾಸನೆ ಕೊಡದೆ ಆದಷ್ಟು ಬೇಗ ಪರಿಹಾರ ಕಾರ್ಯ ಕೈಗೊಳ್ಳಬೇಕು. – ಗ್ರಾಮಸ್ಥರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.