ತೋಟಗಾರಿಕಾ ಬೆಳೆಗಳ ಸಂರಕ್ಷಣೆಗೆ ಇಲ್ಲಿದೆ ಮಾಹಿತಿ..

ಶಿರಸಿ: ಮಲೆನಾಡು- ಕರಾವಳಿ ಭಾಗಗಳಲ್ಲಿ ಉತ್ತಮ ಮಳೆಯಾದರೆ, ಅರೆ ಮಲೆನಾಡು, ಬಯಲು ಸೀಮೆ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ. ಬೆಳೆಯನ್ನು ರೋಗದಿಂದ ಕಾಪಾಡಲು ತೋಟಗಾರಿಕಾ ಇಲಾಖೆ ರೈತರಿಗೆ ಅಗತ್ಯ ಮಾಹಿತಿಗಳನ್ನು ನೀಡಿದೆ.

ಹಲವು ಕಡೆ ಅಡಿಕೆ ಬೆಳೆಗೆ ಸಿಂಗಾರ ಒಣಗುವಿಕೆಯಿಂದಾಗಿ ತೀವ್ರ ಹಾನಿಯಾಗಿದೆ. ಆದರೆ ಈಗ ಉತ್ತಮ ಮಳೆಯಿಂದಾಗಿ ಅಡಿಕೆ, ಕಾಳು ಮೆಣಸು, ಶುಂಠಿ ಮುಂತಾದ ಬೆಳೆಗಳ ಕೊಳೆ ರೋಗಕ್ಕೆ ಪೂರಕ ವಾತಾವರಣ ಉಂಟಾಗಿದ್ದು, ಕೊಳೆ ರೋಗ ಹೆಚ್ಚಾಗುವ ಸಾಧ್ಯತೆ ಇದೆ. ಕಾಳು ಮೆಣಸಿನ ಎಲೆ ಕೊಳೆಯುವ ರೋಗವು ಹಲವೆಡೆ ಪ್ರಾರಂಭವಾಗಿದೆ. ಇವೆಲ್ಲ ರೋಗದಿಂದ ಬೆಳೆ ರಕ್ಷಣೆಗೆಂದು ಇಲಾಖೆ ಅಗತ್ಯ ಸೂಚನೆಗಳನ್ನು ನೀಡಿದೆ.

ಅಡಿಕೆ ಬೇರುಹುಳ ನಿಯಂತ್ರಣಕ್ಕೆ ಕ್ಲೋರೋಫೈರಿಫಾಸ್ ಕೀಟನಾಶಕವನ್ನು 4 ಮಿ.ಲೀ.ಪ್ರತಿ ಲೀಟರ ನೀರಿಗೆ ಬೆರೆಸಿದ ದ್ರಾವಣವನ್ನು ಪ್ರತಿ ಮರದ ಬುಡದ ಸುತ್ತಲೂ 3 ಲೀಟರ ದ್ರಾವಣ ಹಾಕಬೇಕು. ಅಥವಾ ಜೈವಿಕ ಬೇರು ಹುಳನಾಶಕ(ಸೋಲ್ಜರ)ವನ್ನು 5ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಪ್ರತಿ ಮರದ ಬುಡದ ಸುತ್ತಲೂ ಒಂದು ಲೀಟರ ದ್ರಾವಣ ಹಾಕಬೇಕು.

ಅಡಿಕೆ ಕೊಳೆ ರೋಗ ಮತ್ತು ಕೊಕೋ ಕಾಯಿ ಕೊಳೆ ರೋಗ ನಿಯಂತ್ರಣಕ್ಕೆ ಮುಂಜಾಗ್ರತೆಯಾಗಿ ಶೇಕಡಾ ಒಂದರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು. ಎಲೆಚುಕ್ಕೆ ಸಮಸ್ಯೆ ಇರುವ ಅಡಿಕೆ ಮರದ ಎಲೆಗಳಿಗೂ ಬೋರ್ಡೋ ದ್ರಾವಣವನ್ನು ಸಿಂಪಡಿಸಬಹುದು. ಕಾಳು ಮೆಣಸಿನ ಬಳ್ಳಿಯ ಸೊರಗು ರೋಗ- ಬಳ್ಳಿಯ ಎಲೆ, ಚಿಗುರು ಕೊಳೆ ನಿಯಂತ್ರಣಕ್ಕೆ ಶೇ.1ರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು. ಬುಡ ಕೊಳೆ ನಿಯಂತ್ರಣಕ್ಕಾಗಿ ಕಾಪರ ಆಕ್ಸಿಕ್ಲೋರೈಡ ಶೀಲೀಂದ್ರ ನಾಶಕವನ್ನು 3 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ರೋಗದ ಪ್ರಾರಂಭದಲ್ಲೇ ಆದರೆ ಮೆಟಾಲಾಕ್ಸಿಲ್ ಎಂ.ಜೆಡ್. 2ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿದ ದ್ರಾವಣ, ನಂತರ ಶೇ.1ರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು.

ಕಾಳು ಮೆಣಸಿನ ಬಳ್ಳಿ ರಕ್ಷಣೆಗೆ ನೆಲದ ಮೇಲೆ ಹಬ್ಬಿರುವ ಕುಡಿಗಳನ್ನು ಬಳ್ಳಿಯ ಬುಡದಿಂದ ಒಂದು ಗಣ್ಣು ಬಿಟ್ಟು ಕತ್ತರಿಸಿ, ಆ ಭಾಗಕ್ಕೆ ಬೋರ್ಡೋ ಪೇಸ್ಟ ಹಚ್ಚಬೇಕು. ಮತ್ತು ಕತ್ತರಿಸಿ ತೆಗೆದ ಕುಡಿ ಮತ್ತು ಎಲೆಗಳನ್ನು ತೋಟದಿಂದ ಹೊರ ಹಾಕಬೇಕು. ಬಳ್ಳಿಯ ಬೇರಿಗೆ ಹಾನಿಯಾಗುವ ಯಾವುದೇ ಕೆಲಸ ಮಾಡಬಾರದು. ಶುಂಠಿಯ ಗಡ್ಡೆ ಕೊಳೆ ನಿಯಂತ್ರಣಕ್ಕಾಗಿ ಕಾಪರ ಆಕ್ಸಿಕ್ಲೋರೈಡ ಶೀಲೀಂದ್ರ ನಾಶಕವನ್ನು 3ಗ್ರಾ ಪ್ರತಿ ಲೀಟರ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ರೋಗ ಪ್ರಾರಂಭದಲ್ಲಾದರೆ ಮೆಟಾಲಾಕ್ಸಿಲ್ ಎಂ.ಜೆಡ್. 2 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿದ ದ್ರಾವಣ ಹಾಕಬೇಕು. ತೋಟದಲ್ಲಿ ಬಸಿ ಗಾಲುವೆಗಳನ್ನು ಸ್ವಚ್ಛಗೋಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಸುಸ್ಥಿತಿಯಲ್ಲಿಡಬೇಕು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕಾ ಇಲಾಖಾ ಪ್ರಕಟಣೆಯಲ್ಲಿ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.