ಸೋರುತ್ತಿರುವ ಕುಮಟಾ ಸರ್ಕಾರಿ ಕಾಲೇಜು ಕೊಠಡಿಗಳು: ಶಿಕ್ಷಕರ- ವಿದ್ಯಾರ್ಥಿಗಳ ಪರದಾಟ

ಕುಮಟಾ: ಶಿಥಿಲಾವಸ್ಥೆಗೆ ಜಾರಿದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಪರದಾಡುವಂತಾಗಿದೆ.

ಡಯಟ್‍ಗೆ ಸೇರಿದ ಬಹಳ ಹಳೇಯದಾದ ಕಟ್ಟಡದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾದಾಗಿನಿಂದ ಇಂಥಹ ಪರಿಸ್ಥಿತಿಯಲ್ಲೇ ದಿನ ಕಳೆಯುತ್ತಿದೆ. ಇಂತಹ ಶಿಥೀಲಾವಸ್ಥೆಗೆ ಜಾರಿದ, ಸೋರುತ್ತಿರುವ ಕಟ್ಟಡದಲ್ಲಿ ತರಗತಿ ನಡೆಸುವುದು ಕಷ್ಟ ಸಾಧ್ಯ. ಶಾಲಾ-ಕಾಲೇಜುಗಳಿಗೆ ಅನುಮತಿ ನೀಡುವ ಸರಕಾರ, ಸರಿಯಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಮೀನ- ಮೇಷವೆಣಿಸುತ್ತದೆ. ಇದು ಸರಕಾರದ ಆಡಳಿತದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಪ್ರತಿಯೊಂದು ಕೊಣೆಯಲ್ಲೂ ನೀರು ಸುರಿದು ವಿದ್ಯಾರ್ಥಿಗಳ ತರಗತಿಗಳು ಅಸ್ಥವ್ಯಸ್ಥಗೊಳ್ಳುತ್ತಿದೆ. ಇಂತಹ ಸ್ಥಿತಿಯಲ್ಲೇ ಹಲವು ವರ್ಷಗಳು ಕಳೆದರೂ ಈ ಕಟ್ಟಡ ಮಾತ್ರ ಸುಧಾರಣೆಯ ಭಾಗ್ಯ ಕಂಡಿಲ್ಲ.

ಮಳೆಗಾಲದ ಸಂದರ್ಭದಲ್ಲಿ ಕಾಲೇಜು ಕಟ್ಟಡದ ವರಾಂಡದಲ್ಲಿ ನೀರು ಹರಿಯುತ್ತವೆ. ಕೆಲವು ಕಿಟಕಿಗಳು ಮುರಿದು ಬಿದ್ದಿವೆ. ಮುರಿದು ಬೀಳುವ ಸ್ಥಿತಿಯಲ್ಲಿರುವ ಮೇಲ್ಚಾವಣಿಯ ಕಟ್ಟಿಗೆಯ ದಿಂಬುಗಳಿಗೆ ಕಂಬಕೊಟ್ಟು ತಡೆಹಿಡಿಯಲಾಗಿದೆ. ಕೆಲವಡೆ ಮೇಲ್ಚಾವಣಿಯ ಭಾಗ ಕುಸಿಯುವ ಸ್ಥಿತಿಯಲ್ಲಿದ್ದು, ಅಪಾಯ ಸೂಚಿಸುತ್ತಿವೆ. ಹೀಗಿದ್ದರೂ ತರಗತಿ ನಡೆಸುತ್ತಿರುವುದು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಚೆಲ್ಲಾಟವಾಡುವಂತಿದೆ. ಇಂಥ ಘೋರ ಪರಿಸ್ಥಿತಿ ಸೃಷ್ಟಿಗೊಂಡರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸದೇ ಇರುವುದು ವಿಪರ್ಯಾಸ. ಕಾಲೇಜಿನ ಕಟ್ಟಡ ನೋಡಿದವರಿಗೆ ಕೇಂದ್ರ ಕಾರಾಗ್ರಹಕ್ಕಿಂತ ಕನಿಷ್ಟ ಮಟ್ಟದಲ್ಲಿರುವುದು ಕಂಡು ಬರುತ್ತದೆ. ಕಾಲೇಜು ಪರಿಸರದಲ್ಲಿ ಇರಬೇಕಾದ ಸ್ವಚ್ಛತೆ, ಸಂಸ್ಕಾರ ಹಾಗೂ ಬದ್ಧತೆಗಳು ಎಲ್ಲೂ ಕಾಣಸಿಗುತ್ತಿಲ್ಲ. ಸುತ್ತಲಿನ ಪರಿಸರ ಕೆಟ್ಟದಾಗಿ ಮಾಲಿನ್ಯಗೊಂಡಿದೆ. ತರಗತಿಯ ಪಕ್ಕದಲ್ಲೇ ದನ-ಜನ ಶೌಚಮಾಡಿರುವುದು ಕಂಡು ಬಂದಿದ್ದು, ಅಸ್ವಚ್ಚತೆ ತಾಂಡವಾಡುತ್ತಿದೆ.

ಕಾಲೇಜು ನಡೆಯುವ ಸಂಪೂರ್ಣ ಕಟ್ಟಡ ಡಯಟ್‍ಗೆ ಸೇರಿದ್ದಾಗಿದೆ. ಅಲ್ಲದೇ ಈ ಕಾಲೇಜಿಗೆಂದು ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಪೂರ್ತಿಗೊಳ್ಳಲು ಕೆಲ ವರ್ಷಗಳೇ ಬೇಕು. ಹೀಗಿರುವಾಗ ಶಿಥಿಲಾವಸ್ಥೆಗೆ ಜಾರಿದ ಈ ಕಟ್ಟಡದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಬಹಳಷ್ಟು ಸಮಯ ಕಳೆಯುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಇದಕ್ಕೆ ಹೊಂದಿಕೊಂಡಿರುವ ಇನ್ನಷ್ಟು ಕಟ್ಟಡಗಳನ್ನು ಡಯಟ್ ದುರಸ್ಥಿಗೊಳಿಸಿದ್ದು, ಅದನ್ನು ತನ್ನ ಬಳಕೆಗೆ ಇಟ್ಟುಕೊಂಡಿದೆ. ಕಾಲೇಜು ತರಗತಿ ನಡೆಯುವ ಕೋಣೆಗಳ ರಿಪೇರಿ ಕಾಮಗಾರಿಗಾಗಿ ಸರಕಾರ ಒಂದಿಷ್ಟು ಹಣ ನೀಡುತ್ತದೆ. ಅದರಿಂದ ಸಂಪೂರ್ಣ ದುರಸ್ಥಿ ನಡೆಸಲು ಸಾಧ್ಯವಿಲ್ಲ. ಇದರಿಂದಾಗಿ ಪ್ರತೀವರ್ಷ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಗೀತಾ ಎಸ್. ವಾಲೀಕಾರ, ಕಾಲೇಜಿನಲ್ಲಿ 1,300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದಾರೆ. ಸಧ್ಯ ಸಾಧಾರಣ ಸ್ಥಿತಿಯಲ್ಲಿರುವ 12 ಕೋಣೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. 80 ಖಾಯಂ ಉಪನ್ಯಾಸಕರಿದ್ದು, ವರ್ಷಂಪ್ರತಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಸ್ಥಳಾವಕಾಶದಿಂದ ಪಟ್ಟಣದ ಪುರಸಭೆ ಎದುರಿನ ಕನ್ನಡ ಶಾಲೆಯಲ್ಲಿ ಹಾಗೂ ಡಯಟ್‍ನ ಪ್ರಾಥಮಿಕ ಶಾಲೆಯಲ್ಲಿ ಕೆಲ ತರಗತಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ಉಪನ್ಯಾಸಕರು ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಡುವಂತಾಗಿದೆ. ಅಲ್ಲದೇ ರಾತ್ರಿ ಸಮಯದಲ್ಲಿ ಹೋರಗಿನ ಕೆಲ ಜನರು ಕಾಲೇಜಿನ ಆವರಣಕ್ಕೆ ಬಂದು ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಲೇಜಿಗೆ ರಾತ್ರಿ ಸಮಯದಲ್ಲಿ ಒಬ್ಬರೇ ಕಾವುಲುಗಾರನಿದ್ದು, ಪೊಲೀಸರನ್ನು ನಿಯೋಜಿಸುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.