ಸರಕಾರದ ಪರಿಸರ ವಿರೋಧಿ ಯೋಜನೆ ವಿರುದ್ಧ ಜನನಾಯಕರು ರಾಜಿನಾಮೆ ನೀಡಲಿ; ಸ್ವರ್ಣವಲ್ಲೀ ಶ್ರೀ

ಶಿರಸಿ: ಜನರಿಂದ ಆಯ್ಕೆಯಾಗಿ ಅಧಿಕಾರ ನಡೆಸುತ್ತಿರುವ ನಾಯಕರು ಅಧಿಕಾರಕ್ಕಾಗಿ ರಾಜಿನಾಮೆ ನೀಡುವ ಬದಲು ಜನ ಮತ್ತು ಸಮಾಜದ ಹಿತಕ್ಕಾಗಿ ರಾಜಿನಾಮೆ ನೀಡುವಂತಾಗಲಿ ಎಂದು ಸ್ವರ್ಣವಲ್ಲೀ ಶ್ರೀಗಳು ಆಗ್ರಹಿಸಿದರು.
ಸಿದ್ದಾಪುರ ತಾಲೂಕಿನ ನೆಲಮಾವು ಮಠದಲ್ಲಿ ಅಘನಾಶಿನಿ ಕಣಿವೆ ಸಂರಕ್ಷಣಾ ಸಮಿತಿ ಆಯೋಜನೆಯಲ್ಲಿ ಬುಧವಾರ ನಡೆದ ಅಘನಾಶಿನಿ ಕಣಿವೆ ಉಳಿಸಿ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಆಶೀರ್ವದಿಸಿದ ಅವರು, ರಾಜಕಾರಣಿಗಳು ಅಧಿಕಾರಕ್ಕಾಗಿ ರಾಜಿನಾಮೆ ನೀಡಿದರೆ ಜನಸಾಮಾನ್ಯರು ಮೆಚ್ಚಿಕೊಳ್ಳುವದಿಲ್ಲ. ಬದಲಾಗಿ ಸರ್ಕಾರಗಳ ಪರಿಸರ ವಿರೋಧಿ ಯೋಜನೆಗಳ ವಿರುದ್ಧ ಪಕ್ಷಾತೀತವಾಗಿ ರಾಜಿನಾಮೆ ನೀಡುವಂತಾಗಲಿ ಎಂದರು.
ಉತ್ತರಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಇತರೇ ಜಿಲ್ಲೆಗಳ ಜನಪ್ರತಿನಿಧಿಗಳನ್ನು ನೋಡಿ ಕಲಿಯಬೇಕಿದೆ. ಜಿಲ್ಲೆಗೆ ತೊಮದರೆಗಳು ಎದುರಾದಲ್ಲಿ ಒಗ್ಗಟ್ಟಾಗಿ ಸರ್ಕಾರದ ನಡೆ ವಿರುದ್ಧ ಧ್ವನಿ ಎತ್ತುತ್ತಾರೆ. ಆದರೆ ಇಲ್ಲಿಯ ಕೆಲವರು ಜಿಲ್ಲೆಗೆ ಕಂಟಕ ಎದುರಾದರೂ ಜನರ ಧ್ವನಿಗೆ ಗಟ್ಟಿ ಧ್ವನಿಯಾಗುತ್ತಿಲ್ಲ ಎಂದು ಬೆಸರಿಸಿದರು.
ಜಿಲ್ಲೆಯ ಅರಣ್ಯ ಭೂಮಿಯನ್ನು ಬೇರೆಡೆಗೆ ಸೇರ್ಪಡಿಸುವ ಹಾಗೂ ನದಿ ನೀರನ್ನು ಬೇರೆಡೆಗೆ ಕೊಂಡೊಯ್ಯುವ ಯೋಜನೆಗಳು ಅವೈಜ್ಞಾನಿಕವಾಗಿದೆ. ಜಿಲ್ಲೆಯ ವಾಸ್ತವಿಕ ಅಧ್ಯಯನ ನಡೆಸಿ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದ ಶ್ರೀಗಳು, ಸರ್ಕಾರದ ಪರಿಸರ ವಿರೋಧಿ ನಿರ್ಣಯಗಳ ಪರಿಣಾಮ ಭವಿಷ್ಯದಲ್ಲಿ ಮಲೆನಾಡಿನ ಜನತೆ ಅನಾಹುತ ಎದುರಿಸಬೇಕಿದೆ ಎಂದರು.
ಬಯಲುಸೀಮೆಗಳ ನೀರಿನ ಸಮಸ್ಯೆ ಕುರಿತು ನಮಗೂ ಅನುಕಂಪವಿದೆ. ಆದರೆ ಮಲೆನಾಡಲ್ಲೂ ನೀರಿನ ಕೊರತೆಯಿದೆ ಎಂಬುದನ್ನು ಮರೆಯಬಾರದು. ಪರಿಸರದ ವಿರುದ್ಧ ಹೆಜ್ಜೆ ಹಾಕಿದರೆ ಪಶ್ಚಿಮಘಟ್ಟ ಪ್ರದೇಶ ವಿನಾಶದತ್ತ ಸಾಗುತ್ತದೆ. ನೀರತಿನ ಸಮಸ್ಯೆ ಬಗೆಹರಿಸಲು ಮಳೆನೀರು ಕೊಯ್ಲು ಹಾಗೂ ಕೆರೆಗಳ ಪುಶ್ಚೇತನ ಕಾರ್ಯ ಆರಂಭಗೊಳ್ಳಲಿ ಎಂದರು.
ವೇದಿಕೆಯಲ್ಲಿ ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ತಜ್ಞರಾದ ಬಾಲಚಂದ್ರ ಸಾಯಿಮನೆ, ಕೇಶವ ಕೂರ್ಸೆ, ಡಾ. ಸುಭಾಶ್ಚಂದ್ರ, ಪ್ರೊ. ಶ್ರೀಧರ ಭಟ್ಟ ಇನ್ನಿತರರು ಉಪಸ್ಥಿತರಿದ್ದರು. ಸಾವಿರಕ್ಕೂ ಅಧಿಕ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಮಹಾಬಲೇಶ್ವರ ಹೆಗಡೆ ಸ್ವಾಗತಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.