ವಾಸ್ತವಿಕ ಪರಿಜ್ಞಾನ ಇಲ್ಲದ ಯೋಜನೆಗೆ ಎಲ್ಲರ ವಿರೋಧ: ಅನಂತ ಅಶೀಸರ

ಶಿರಸಿ: ಉತ್ತಕನ್ನಡದ ನಿತ್ಯಹರಿದ್ವರ್ಣ ಕಾಡಿನಲ್ಲಿ ಸ್ವಚ್ಛಂದವಾಗಿ ಜೀವಿಸಿರುವ ಸಿಂಗಳಿಕಗಳ ರಕ್ಷಣೆಗೆ ಪ್ರತ್ಯೇಕ ಅಭಯಾರಣ್ಯ ಬೇಕಿಲ್ಲ. ಬದಲಾಗಿ ಇಲ್ಲಿಯ ಜನರೇ ಮುಂದಾಗಿ ಸಿಂಗಳಿಕಗಳಿಗೆ ಅಗತ್ಯವಿರುವ ವಾತಾವರಣ ಕಲ್ಪಿಸಿದ್ದಾರೆಂದು ಖ್ಯಾತ ಪರಿಸರ ತಜ್ಞ ಪ್ರೊ. ಶ್ರೀಧರ ಭಟ್ಟ ತಿಳಿಸಿದರು.
ಸಿದ್ದಾಪುರ ನೆಲೆಮಾವು ಮಠದಲ್ಲಿ ನಡೆದ ಅಘನಾಶಿನಿ ಕಣಿವೆ ಉಳಿಸಿ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಘನಾಶಿನಿ ನದಿ ಭೂಮಿಯಲ್ಲಿ ವಾಸಿಸುವ ಸಿಂಗಳಿಕಗಳು ಹಾಗೂ ಇಲ್ಲಿಯ ಜನರ ಮಧ್ಯೆ ಯಾವುದೇ ಸಂಘರ್ಷವಿಲ್ಲ. ಆದರೂ ಸಹ ಶರಾವತಿ ಅಭಯಾರಣ್ಯಕ್ಕೆ ಜಿಲ್ಲೆಯ ಅರಣ್ಯ ಭೂಮಿಯನ್ನು ಸೇರ್ಪಡಿಸುವ ಮೂಲಕ ಸರ್ಕಾರ ಪರಿಸರ ವಿರೋಧಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ಇದರಿಂದ ಉತ್ತಕನ್ನಡದ ಅರಣ್ಯ ಬಲಿಯಾಗಲಿದೆ ಎಂದರು.
ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ವನ್ಯಜೀವಿ ಸಂರಕ್ಷಣೆಯ ಬದಲಾಗಿ ವನ್ಯಜೀವಿಗಳಿಗೆ ತೊಂದರೆ ನೀಡುವ ಕಾರ್ಯ ಸರ್ಕಾರದ್ದಾಗಿದೆ. ವಾಸ್ತವಿಕ ಪರಿಜ್ಞಾನ ಇಲ್ಲದೆ ಯೋಜನೆ ರೂಪಿಸಲಾಗುತ್ತಿದೆ. ಗೊಂದಲಗಳ ಗೂಡಾಗಿರುವ ಶಿವಮೊಗ್ಗ ಅರಣ್ಯ ನಾಶಕ್ಕೆ ಎತ್ತಿದ ಕೈ ಎಂದರೂ ತಪ್ಪಿಲ್ಲ. ಇಂತಹ ಪ್ರದೇಶಕ್ಕೆ ಜಿಲ್ಲೆಯ ಅರಣ್ಯ ಸೇರ್ಪಡೆ ಸರಿಯಾದ ಕ್ರಮವಲ್ಲ. ಅಘನಾಶಿನಿ ಸಂರಕ್ಷಿತ ಪ್ರದೇಶ ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದರು.
ಅರಣ್ಯ ಉತ್ಪನ್ನಗಳ ಮೂಲಕ ಜೀವನ ಸಾಗಿಸುತ್ತಿರುವ ಜಿಲ್ಲೆಯ ಸಾವಿರಾರು ಬಡ ಕುಟುಂಬಗಳು ಶರಾವತಿ ಅಭಯಾರಣ್ಯದಿಂದ ಬದುಕು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಪಶ್ಚಿಮಾಭಿಮುಖವಾಗಿ ಹರಿಯುವ ಅಘನಾಶಿನಿ, ಶರಾವತಿ ನದಿ ನೀರು ಜನರ ಕೃಷಿ ಭೂಮಿ, ಮೀನುಗಾರಿಕೆ, ಸಮುದ್ರಗಳಿಗೆ, ವನ್ಯಜೀವಿಗಳಿಗೆ ಜೀವನದಿಯಾಗಿದೆ. ಇದನ್ನು ಸಂರಕ್ಷಿಸಿಕೊಳ್ಳುವದು ನಮ್ಮ ಜವಾಬ್ದಾರಿಯಾಗಿದೆ ಎಂದು ಡಾ.ಸುಭಾಶ್ಚಂದ್ರ ಅಭಿಪ್ರಾಯಪಟ್ಟರು.
ಈ ವೇಳೆ ಸ್ವರ್ಣವಲ್ಲೀ ಶ್ರೀಗಳು, ಪರಿಸರ ತಜ್ಞರುಗಳಾದ ಬಾಲಚಂದ್ರ ಸಾಯಿಮನೆ, ಕೇಶವ ಕೂರ್ಸೆ ಇನ್ನಿತರರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.