ಸುವಿಚಾರ

ಅಸಾರಭೂತೇ ಸಂಸಾರೇ ಸಾರಭೂತಾ ನಿತಂಬಿನೀ
ಇತಿ ಸಂಚಿಂತ್ಯ ವೈ ಶಂಭುರರ್ಧಾಂಗೇ ಪಾರ್ವತೀಂ ದಧೌ ||

ಸಾರವೆಂಬುದೇ ಇಲ್ಲದ ಈ ಸಂಸಾರದಲ್ಲಿ ಸಾರವುಳ್ಳ ಒಂದೇ ಒಂದು ಸಂಗತಿಯೆಂದರೆ ಅದು ಹೆಣ್ಣು. ರಸಹೀನವಾದ ಮಾನವ ಬದುಕಿನ ರಸವೆಂದರೆ ಹೆಣ್ಣೇ. ಈ ರೀತಿಯ ಯೋಚನೆ ಬಂದಿದ್ದರಿಂದಲೇ ಶಿವನೂ ಸಹ ತನ್ನ ದೇಹದ ಸಮಾ ಅರ್ಧಭಾಗದಲ್ಲಿ ಪಾರ್ವತೀದೇವಿಯನ್ನು ಧರಿಸಿದನಂತೆ.
ಹೆಣ್ಣಿಲ್ಲದ ಬದುಕು ಅದೆಷ್ಟು ನಿಸ್ಸಾರವೆಂಬುದನ್ನು ಈ ಸುಭಾಷಿತವು ಸಾರವತ್ತಾಗಿ ಹಿಡಿದಿಟ್ಟಿದೆ. ಅರ್ಧನಾರೀಶ್ವರನೆನ್ನುವ ಭಾರತೀಯ ಕಲ್ಪನೆಯೊಂದು ಸಾಕು, ಭಾರತದಲ್ಲಿ ಸ್ತ್ರೀ ಪುರುಷರನ್ನು ಮತ್ತವರ ಸಂಬಂಧವನ್ನು ಕಾಣುವ ರೀತಿ ಯಾವುದಿತ್ತೆಂದು ಅರುಹಲು. ’ಶಿವನು ಜಗದೀಶತ್ವ ಪದವಿಯನ್ನು ಪಡೆದಿದ್ದೇ ಪಾರ್ವತಿಯ ಕೈ ಹಿಡಿದಿದ್ದರಿಂದಾಗಿ, ಅದಿಲ್ಲದಿದ್ದರೆ ಅವನು ಮೈಗೆಲ್ಲ ಭಸ್ಮ ಬಳಿದುಕೊಂಡು ಕಪಾಲಧಾರಿಯಾಗಿ ಭೂತಾಧಿಪತಿಯಾಗಿ ಉಳಿದಿರುತ್ತಿದ್ದ’ ಎಂದು ಶಂಕರರು ಭವಾನಿಯ ಮಹಿಮೆಯನ್ನು ಕೊಂಡಾಡಿದ್ದನ್ನಿಲ್ಲಿ ಸ್ಮರಿಸಬಹುದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.