ಮನಸ್ಸಿನ ನೆಮ್ಮದಿಗೆ ಸಹಕಾರಿ ಸುಖಾಸನ

ಸುಖಾಸನ: ಯೋಗದ ಆರಂಭದಲ್ಲಿ ಅಭ್ಯಾಸ ಮಾಡುವ ಆಸನ ಸುಖಾಸನ. ಇದು ಹಿತವಾದ, ಸುಖಕರವಾದ ಆಸನವಾಗಿದೆ. ಸಾಮಾನ್ಯವಾಗಿ ಊಟಕ್ಕೆ ಸುಖಾಸನದಲ್ಲಿ ಕುಳಿತುಕೊಳ್ಳುತ್ತಾರೆ. ಈ ಆಸನದಲ್ಲಿ ಕುಳಿತುಕೊಳ್ಳುವಾಗ ಬೆನ್ನು ನೇರ ಮಾಡಿದರೆ ಪೃಷ್ಠದ ಭಾಗ, ಬೆನ್ನು ಮೂಳೆಯ ಭಾಗಕ್ಕೆ ಯಾವುದೇ ರೀತಿಯ ಒತ್ತಡವಾಗುವುದಿಲ್ಲ. ಹಿತವಾದ ಅನುಭವ ದೊರಕುತ್ತದೆ.

ಅಭ್ಯಾಸಕ್ರಮ: ನೆಲದ ಮೇಲೆ ಬೆನ್ನು, ಕುತ್ತಿಗೆ ನೇರಮಾಡಿ ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ ಬಲಗಾಲನ್ನು ಮಡಚಬೇಕು. ಎಡಗಾಲನ್ನು ಎಡಬದಿಗೆ ಮಡಚಬೇಕು. ಕೈಗಳಲ್ಲಿ ಚಿನ್ಮುದ್ರೆ ಮಾಡಿ ಬೆನ್ನು ಕುತ್ತಿಗೆ ನೇರಮಾಡಿ ಕುಳಿತುಕೊಳ್ಳಬೇಕು. ಸ್ವಲ್ಪ ಹೊತ್ತು ಸಾಮಾನ್ಯ ಉಸಿರಾಟದಲ್ಲಿಯೇ ವಿರಮಿಸಬೇಕು. ಅನಂತರ ವಿಶ್ರಾಂತಿ. ಈ ಆಸನದಲ್ಲಿ ಅಭ್ಯಾಸ ಆದರೆ ಪದ್ಮಾಸನ ಕಲಿಯಲು ಸುಲಭವಾಗುತ್ತದೆ.

ಪ್ರಯೋಜನಗಳು: ಇದೊಂದು ಸರಳ ಯೋಗಾಸನ. ನೆಲದ ಮೇಲೆ ಕುಳಿತು ಮಾಡುವ ಆಸನವಾಗಿದೆ. ಯೋಗದ ಸುಲಭ ಭಂಗಿ ಇದು. ಯೋಗದಲ್ಲಿ ಪ್ರಾಣಾಯಾಮ, ಧ್ಯಾನಕ್ಕೆ ಬಳಸುತ್ತಾರೆ. ಸಂಸ್ಕೃತದಲ್ಲಿ ಸುಖಮ್ ಎಂದರೆ ಆರಾಮ, ಸುಲಭ, ಸಂತೋಷದಾಯಕ ಇತ್ಯಾದಿ ಅರ್ಥವಿದೆ. ಮನಸ್ಸಿಗೆ ನೆಮ್ಮದಿ ಶಾಂತಿ ಒದಗಿ ಬರುತ್ತದೆ.

* ಯಾರಿಗೆ ಪದ್ಮಾಸನ, ವಜ್ರಾಸನ ಮಾಡಲು ಸಾಧ್ಯವಿಲ್ಲವೋ ಅಂತವರು ಸುಖಾಸನದಲ್ಲಿ ಪ್ರಾಣಾಯಾಮ, ಧ್ಯಾನ ಮಾಡಬಹುದು

* ಕಾಲಿನ ನರಗಳ ಸೆಳೆತ ನಿವಾರಣೆಯಾಗುತ್ತದೆ. ಮೂಲಧಾರ ಚಕ್ರದ ಸುಸ್ಥಿತಿಗೆ ಸಹಕಾರಿಯಾಗುತ್ತದೆ

* ಮೊಣಕಾಲುಗಳು ಬಲಗೊಳ್ಳುತ್ತವೆ

* ಬೆನ್ನು ಹುರಿಗೆ ಹೆಚ್ಚು ಒತ್ತಡವಾಗುವುದಿಲ್ಲ, ಬೆನ್ನು ನೇರ ಮಾಡಲು ಸುಲಭವಾಗುತ್ತದೆ

* ಸುಖಾಸನದಿಂದ ತುಂಬಾ ಪ್ರಯೋಜನಗಳಿವೆ. ಎಷ್ಟು ಹೊತ್ತು ಬೇಕಾದರೂ ಈ ಆಸನದಲ್ಲಿ ಕುಳಿತು ಕೊಳ್ಳಬಹುದು. ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ. ನೆಲದ ಮೇಲೆ ಕುಳಿತು ಊಟ ಮಾಡುವ ಹೆಚ್ಚಿನವರು ಈ ಆಸನದಲ್ಲೇ ಕುಳಿತುಕೊಳ್ಳುತ್ತಾರೆ

* ದೇಹದ ನಿಯಂತ್ರಣ ಮತ್ತು ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಕಾಲುಗಳ ಬಿಗಿತವನ್ನು ನಿವಾರಿಸುತ್ತದೆ

Categories: ನಾಟಿ ನಂಟು

Leave A Reply

Your email address will not be published.