ಸರ್ಕಾರಗಳು ಸಹಕಾರಿ ಸಂಸ್ಥೆಗಳಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ: ಎನ್. ಗಂಗಣ್ಣ ಬೇಸರ


ಶಿರಸಿ: ರಾಷ್ಟ್ರೀಕೃತ ಬ್ಯಾಂಕ್ ಗಳೊಂದಿಗೆ ಸಹಕಾರಿ ಸಂಸ್ಥೆಗಳು ಉತ್ತಮವಾದ ಪೈಪೋಟಿ ನೀಡುತ್ತಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ವ್ಯವಸ್ಥೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಪ್ರಾಮುಖ್ಯತೆ ನೀಡಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಎನ್.ಗಂಗಣ್ಣ ವಿಷಾದ ವ್ಯಕ್ತಪಡಿಸಿದರು.

ನಗರದ ಸಾಮ್ರಾಟ್ ವಿನಾಯಕ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಇವರ ಕುಮಟ ಸಂಯುಕ್ತಾಶ್ರಯದಲ್ಲಿ ನಡೆದ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ “ಪತ್ತಿನ ಸಹಕಾರ ಸಂಘಗಳ ಸರ್ವತೋಮುಖ ಅಭಿವೃದ್ಧಿ ಬಗ್ಗೆ “ಒಂದು ದಿನದ ರಾಜ್ಯ ಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಂದ ಬೆಳೆದು ರೈತರಿಗೆ ನೆರವು ನೀಡುವ ಸಹಕಾರಿ ಬ್ಯಾಂಕ್ ಗಳಲ್ಲಿ ಎನ್‌.ಪಿ.ಒ. ವ್ಯತ್ಯಾಸವಾದಲ್ಲಿ ಸರ್ಕಾರ ಕಾನೂನು ರೀತಿಯಲ್ಲಿ ಹೊಸ ಹೊಸ ನಿರ್ಬಂಧ ಹೇರುತ್ತದೆ. ಆದರೆ ದೊಡ್ಡ ದೊಡ್ಡ ವಾಣಿಜ್ಯೋದ್ಯಮಿಗಳ ಉದ್ಧರಾಕ್ಕೆ ನಿಂತಿರುವ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಎನ್.ಪಿ.ಒ. ಎಷ್ಟೇ ಕೆಳಗೆ ಬಂದರೂ ಅವರಿಗೆ ಹೆಚ್ಚಿನ ನೆರವು ನೀಡಿ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿದೆ. ಆದ ಕಾರಣ ಸಹಕಾರ ಸಂಘಕ್ಕೆ ನಿರ್ಭಂಧ ಹೇರುವಾಗ ಸರ್ಕಾರ ಯೋಚನೆ ಮಾಡಬೇಕು. ಯಾವುದೇ ನೆರವು ನೀಡದೇ ಕೇವಲ ನೊಟೀಸ್ ನೀಡುವ ಮೊದಲು ಉತ್ತಮ ಸಲಹೆಗಳನ್ನು ನೀಡಿ ನಮ್ಮೊಂದಿಗೆ ಕರೆದುಕೊಂಡು ಹೋಗುವ ವಿಚಾರವನ್ನು ಸರ್ಕಾರಗಳು ಮಾಡಬೇಕು ಎಂದರು.‌

ಕೃಷಿ ಚಟುವಟಿಕೆ ಹೊರತಾಗಿಯೂ ಸಹಕಾರಿ ಕ್ಷೇತ್ರ ಕೆಲಸ ಮಾಡುತ್ತಾ ಬಂದಿದೆ. ಸಹಕಾರಿ ಸಂಘ ನಿರಂತರವಾಗಿ ಆರ್ಥಿಕವಾಗಿ ಜನರು ಮೇಲೆಳಲು ಸಹಾಯ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ 3800 ಪತ್ತಿನ ಸಹಕಾರಿ ಸಂಘವಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ಸಂಘ ಕೆಲಸ ಮಾಡುತ್ತಿದೆ. ಇಲ್ಲಿ ಸಹಕಾರಿಗಳಾಗಿ ಪ್ರಾಮಾಣಿಕ ಸೇವೆ ಮಾಡುತ್ತಾ ಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಸಹಕಾರ ಸಂಘಗಳಲ್ಲಿ ಇರುವ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರಿ ಕ್ಷೇತ್ರದಲ್ಲಿ ರೈತರ ಪೂರಕ ಕಾನೂನು‌ ಮಾಡಬೇಕು. ಹೆಚ್ಚಿನ ನಿರ್ಬಂಧ ಹೇರಿ ನಶೀಸಿ ಹೋಗುವ ಕಾನೂನುಗಳನ್ನು ಜಾರಿಗೆ ತರಬಾರದು. ಅದೇ ರೀತಿ ಸಹಕಾರಿ ಸಂಘಗಳಿಗೆ ಮುಂದಿನ ದಿನಗಳು ಕಠಿಣವಾಗಲಿದೆ. ಅಧಿಕಾರಿಗಳು ಏಳ್ಗೆಗೆ ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದ ಅವರು, ರಾಜ್ಯದಲ್ಲಿ 42 ಸಾವಿರ ಸಹಕಾರಿ ಸಂಘ ಲಾಬಧಾಯವಾಗಿ ನಡೆಯುತ್ತಿದೆ ಎಂದಾದಲ್ಲಿ ಅದರಲ್ಲಿ ಮಹಾಮಂಡಳ ಪಾತ್ರ ಪ್ರಮುಖವಾಗಿದೆ. ಮುಂದೆಯೂ ಸಂಘಗಳ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು.

ತಾಂತ್ರಿಕ ಅಧಿವೇಶನ:  ಸಹಕಾರ ವಲಯದಲ್ಲಿ ಇತ್ತೀಚಿನ ಬೆಳವಣಿಗೆಗಳು , ಆಡಳಿತ ನಿರ್ವಹಣೆ, ಇತ್ತೀಚಿನ ಸಹಕಾರ ಕಾಯ್ದೆ ತಿದ್ದುಪಡಿ ವಿಷಯದ ಕುರಿತು ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕ ಹೆಚ್.ಎಸ್.ನಾಗರಾಜಯ್ಯ, ಜಿ.ಎಸ್.ಟಿ. ಹಾಗೂ ಪತ್ತಿನ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ತೆರಿಗೆ ಹಾಗೂ ಲೆಕ್ಕಪತ್ರ ನಿರ್ವಹಣೆ ಬಗ್ಗೆ ಚಾರ್ಟೆಡ್ ಅಕೌಂಟೆಂಟ್ ಬಿ.ವಿ.ರವೀಂದ್ರನಾಥ ಹಾಗೂ ಪತ್ತಿನ ಸಹಕಾರಿ ಸಂಘಗಳಲ್ಲಿ ಗಣಕೀಕರಣ ಹಾಗೂ ಹಣಕಾಸು ನಿರ್ವಹಣೆ ಕುರಿತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಅರುಣ್ ಕುಮಾರ್ ತಾಂತ್ರಿಕ ಮಾಹಿತಿಯನ್ನು ನೀಡಿದರು.

ಈ ವೇಳೆ ಪ್ರಮುಖರಾದ ಜಿ.ಟಿ.ಹೆಗಡೆ ತಟ್ಟೀಸರ, ಭಾಸ್ಕರ ಹೆಗಡೆ ಕಾಗೇರಿ, ಎಚ್.ಎಸ್.ನಾಗರಾಜಯ್ಯ, ವಿಷ್ಣು ಭಟ್ ಅಳ್ಳಂಕಿ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.