ಪಾಳು ಬಿದ್ದ ಸ್ಥಿತಿಯಲ್ಲಿ ಕೃಷಿ ಇಲಾಖೆ ವಸತಿ ಕಟ್ಟಡ: ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯ

ಕುಮಟಾ: ಸರ್ಕಾರದಿಂದ ವಿವಿಧ ಇಲಾಖೆಗಳು ಯಾವುದೋ ಬಳಕೆಗಾಗಿ ಕಟ್ಟಿದ ಕಟ್ಟಡಗಳು ಹಳೆಯತಾಗಿ ಶಿಥಿಲವಾದಾಗ ಒಂದೋ ದುರಸ್ತಿ ಮಾಡಿ ಮರುಬಳಕೆ ಮಾಡಬೇಕು ಅಥವಾ ಕೆಡವಿ ಸ್ವಚ್ಛಗೊಳಿಸಬೇಕು. ಇವೆರಡನ್ನೂ ಮಾಡದಿದ್ದರೆ ಹೇಗೆ ಅಸಹ್ಯಕರ ಪರಿಸರ ಸೃಷ್ಟಿಗೆ ಕಾರಣವಾಗುತ್ತದೆ ಎನ್ನವುದಕ್ಕೆ ಇಲ್ಲಿನ ಮಿಷನರಿ ಕಾಲನಿಯಂಚಿಗಿರುವ ಕೃಷಿ ಇಲಾಖೆಯ ವಸತಿ ಕಟ್ಟಡಗಳು ಸಾಕ್ಷಿಯಾಗಿ ನಿಂತಿವೆ.

ಒಂದು ಕಾಲದಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಉಪಯೋಗಕ್ಕಾಗಿ ಕಟ್ಟಿದ ವಸತಿ ಕಟ್ಟಡಗಳು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪಾಳುಬಿದ್ದ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಇಲಾಖೆಗೆ ಏನೂ ಮಾಡಲಾಗುತ್ತಿಲ್ಲ. ಸ್ಥಳೀಯ ಅತುಲ ಕಾಮತ ಎಂಬವರು ಮೂರ್ನಾಲ್ಕು ವರ್ಷದ ಹಿಂದೆಯೇ ಈ ವಸತಿ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಅಕ್ರಮ ಹಾಗೂ ಅನೈತಿಕ ಚಟುವಟಿಕೆ ನಡೆಯುವದನ್ನು ತಡೆಗಟ್ಟಿ ಎಂದು ಕೃಷಿ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿದ್ದರು. ಪತ್ರಿಕೆಗಳಲ್ಲೂ ಕೃಷಿ ಇಲಾಖೆಯ ವಸತಿ ಕಟ್ಟಡದಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ವರದಿಯಾಗಿದೆ. ಆದರೆ ಪ್ರಯೋಜನ ಮಾತ್ರ ಶೂನ್ಯ.

ಇಲ್ಲಿನ ವಸತಿ ಕಟ್ಟಡಗಳನ್ನು ಕೃಷಿ ಇಲಾಖೆ ಕಟ್ಟಿ ಬಳಸಿದ್ದರೂ, ಅಸಲು ಈ ಜಾಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಈ ಬಾರಿ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟು ಬೇಲಿಯನ್ನೂ ಹಾಕಿದೆ. ಆದರೆ ಸ್ವಲ್ಪ ನಿರ್ಜನ ಪ್ರದೇಶದಲ್ಲಿರುವ ಈ ವಸತಿ ಕಟ್ಟಡಗಳು ಮಾತ್ರ ಎಲ್ಲ ಬಗೆಯ ಕೆಟ್ಟ ಚಟುವಟಿಕೆಗೆ ಮುಕ್ತವಾಗೇ ಉಳಿದಿದೆ.

ಕೃಷಿ ಸಹಾಯಕ ನಿರ್ದೇಶಕ ಶಂಕರ ಹೆಗಡೆ ಪ್ರತಿಕ್ರಿಯಿಸಿ, ವಸತಿ ಕಟ್ಟಡಗಳು ದುರಸ್ತಿಗೂ ಬಾರದ ಸ್ಥಿತಿಯಲ್ಲಿದೆ. ಇಲಾಖೆಗೆ ಈ ವಸತಿ ಕಟ್ಟಡಗಳ ಅಗತ್ಯವೂ ಅಷ್ಟಕ್ಕಷ್ಟೇ. ಹೀಗಾಗಿ ಮೇಲಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿದರೆ ಕಟ್ಟಡ ಕೆಡವಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಮಾತ್ರವಲ್ಲದೇ ತಾಲೂಕಿನಲ್ಲಿ ಹಲವೆಡೆ ಆರೋಗ್ಯ, ಅರಣ್ಯ ಮತ್ತಿತರ ವಿವಿಧ ಇಲಾಖೆಗಳ ಶಿಥಿಲ ಕಟ್ಟಡಗಳು ಯಥಾಸ್ಥಿತಿಯಲ್ಲಿ ಕಳೇಬರಗಳಂತೆ ನಿಂತಿವೆ. ಆದರೆ ಕಟ್ಟಡ ದುರಸ್ತಿಗೂ ಬಾರದ, ನಿಷ್ಪ್ರಯೋಜಕ ಕಟ್ಟಡಗಳನ್ನು ಕೆಡವಿ ಪರಿಸರ ಸ್ವಚ್ಛಗೊಳಿಸುವ ಪ್ರಯತ್ನ ಮಾತ್ರ ಯಾವ ಇಲಾಖೆಯಿಂದಲೂ ನಡೆಯುತ್ತಿಲ್ಲ. ಐತಿಹಾಸಿಕ ಪಳೆಯುಳಿಕೆಗಳಂತೆ ಪೀಳಿಗೆಯಿಂದ ಪೀಳಿಗೆಗೆ ಪರಿಚಯಿಸುದಾಗಿದೆ ಎಂದು ಜನ ಆಡಿಕೊಳ್ಳುವಂತಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.