ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನ ಅತ್ಯಗತ್ಯ: ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ


ಶಿರಸಿ: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳನ್ನು ನಿಯಂತ್ರಣದಲ್ಲಿಡಲು ನಿಯಮಗಳನ್ನು ರೂಪಿಸಿರುವಂತದ್ದು ಸಂವಿಧಾನವಾಗಿದೆ. ಹೀಗಾಗಿ ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನ ಅತ್ಯಗತ್ಯವಾಗಿದೆ ಎಂದು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ ಹೇಳಿದರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ‘ಭಾರತದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸಂವಿಧಾನದಲ್ಲಿ ಯಾವುದೇ ದೋಷಗಳಿಲ್ಲ, ಆದರೆ ಸಂವಿಧಾನ ಅನುಷ್ಠಾನದಲ್ಲಿ ದೋಷಗಳಾಗುತ್ತಿವೆ. ಸಂವಿಧಾನ ರಚನೆಯಾಗಿ ದಶಕಗಳೇ ಕಳೆದರು ಜನಪ್ರತಿನಿಧಿಗಳು, ಅಧಿಕಾರಿಗಳು ಸಂವಿಧಾನ ತಿಳಿಸುವ ಕಾರ್ಯವನ್ನೇ ಮಾಡಿಲ್ಲ. ಹೀಗಾಗಿ ಜನಸಾಮಾನ್ಯರು ಇಂದಿಗೂ ಸಂವಿಧಾನದ ವಿಷಯದಿಂದ ದೂರವೇ ಇದ್ದಾರೆ. ಈ ನಿಟ್ಟಿನಲ್ಲಿ ಜನರು ಸಂವಿಧಾನ ಓದುವ ಜೊತೆಗೆ ಅರಿಯುವುದು ಇಂದಿನ ಅಗತ್ಯವಾಗಿದೆ ಎಂದರು.

ಭಾರತದ ಸಂವಿಧಾನ ಕೇವಲ ದೊಡ್ಡ ಸಂವಿಧಾನ ಮಾತ್ರವಲ್ಲ ಅತ್ಯುತ್ತಮ ಸಂವಿಧಾನ ಕೂಡಾ ಆಗಿದೆ. ಎಲ್ಲ ಜನರ ಒಳಿತಿಗಾಗಿ ರಚಿಸಿದ್ದಾಗಿದೆ. ಇಂದು ಮಹಿಳೆಯರು, ದೀನ ದಲಿತರು, ಬುಡಕಟ್ಟು ಜನರು ತಲೆಎತ್ತಿ ಬದುಕುತ್ತಿದ್ದರೆ ಅದಕ್ಕೆ ಸಂವಿಧಾನ ಮೂಲ ಕಾರಣವಾಗಿದೆ ಎಂದ ಅವರು, ಸಂವಿಧಾನದಡಿ ಕಾಯಿದೆ- ಕಾನೂನುಗಳನ್ನು ರೂಪಿಸಲಾಗಿದೆ. ಪ್ರತಿ ವ್ಯಕ್ತಿಯೂ ಹುಟ್ಟಿನಿಂದ ಸಾಯುವವರೆಗೂ ಕಾನೂನಡಿ ಬದುಕುತ್ತಾನೆ. ಸಂವಿಧಾನವು ಸಮಾನತೆ, ಸ್ವಾತಂತ್ರ್ಯ, ಶೋಷಣೆಯ ವಿರುದ್ಧ, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕನ್ನು ನೀಡುತ್ತದೆ. ಆದ್ದರಿಂದ ಎಲ್ಲರೂ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳುವುದು ಅಗತ್ಯವಾಗಿದೆ. ಸಂವಿಧಾನದ ಭಾಗ 4 ರಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳು ಕೂಡಾ ಕಲ್ಯಾಣ ರಾಜ್ಯಕ್ಕಾಗಿ ಮಾಡಬೇಕಾದ ಅಂಶವನ್ನು ಹೇಳಿವೆ. ಇಂತಹ ನಮ್ಮ ಸಂವಿಧಾನವನ್ನು ಸರಿಯಾಗಿ ಓದಿ ಅರ್ಥಮಾಡಿಕೊಂಡು ಅದನ್ನು ರಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದೆಡೆ ಚಿಂತನೆಯೇ ಸಮರ್ಪಕವಾಗಿ ನಡೆದಿಲ್ಲ. ರಾಜಕೀಯಕ್ಕಷ್ಟೇ ಪ್ರಜಾಪ್ರಭುತ್ವಕ್ಕಷ್ಟೇ ಸೀಮಿತಗೊಳಿಸಲಾಗಿದೆ. ಆದರೆ ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವಕ್ಕೂ ರಾಜಕೀಯ ಪ್ರಜಾಪ್ರಭುತ್ವಕ್ಕೂ ಬೆಸುಗೆಯಿದೆ ಎಂಬುದನ್ನು ಮರೆತಿದ್ದಾರೆ. ಇದು ಸರಿಯಾದರೆ ಮಾತ್ರ ನಿಜವಾದ ಪ್ರಜಾಪ್ರಭುತ್ವ, ಸಂವಿಧಾನದ ಗೆಲುವಾಗುತ್ತದೆ ಎಂದರು.

ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣಕುಮಾರ ಪಾಟೀಲ, ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಇದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.