ಕದಂಬದಲ್ಲಿ ಸಸ್ಯ ಸಂತೆ: 55 ಕ್ಕೂ ಅಧಿಕ ಜಾತಿಯ ಸಸಿಗಳು ಮಾರಾಟಕ್ಕೆ

ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ಸೊಸೈಟಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸೊಸೈಟಿ ಆವರಣದಲ್ಲಿ ಜೂ.25 ಮಂಗಳವಾರದಿಂದ ಒಂದು ತಿಂಗಳುಗಳ ಕಾಲ ಸಸ್ಯ ಸಂತೆ ಕಾರ್ಯಕ್ರಮ ನಡೆಯಲಿದ್ದು, 55 ಕ್ಕೂ ಅಧಿಕ ಜಾತಿಯ ಸಸಿಗಳು ಮಾರಾಟಕ್ಕೆ ಇರಲಿದೆ.

ತೆಂಗು, ಮಾವು, ಎಲಕ್ಕಿ, ಕಾಳುಮೆಣಸು, ರುದ್ರಾಕ್ಷಿ ಗಿಡ, ಬಕ್ಕೆ, ಪತ್ರೆ ಗಿಡಗಳು, ಅಡಿಕೆ ಸಸಿ, ಜಾಯಿಕಾಯಿ ಸೇರಿದಂತೆ 55 ಕ್ಕೂ ಅಧಿಕ ವಿವಿಧ ತಳಿಗಳು ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಡಿಸಿಎಫ್ ಎಸ್.ಜಿ.ಹೆಗಡೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ, ಇಂದು ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿರುವ ಕಾರಣ ಅರಣ್ಯೀಕರಣ ಆಗಬೇಕಿದೆ. ಇಲಾಖೆಯಿಂದ ಮಾತ್ರ ಅರಣ್ಯ ವೃದ್ಧಿಸಲು ಸಾಧ್ಯವಿಲ್ಲ. ಬದಲಿಗೆ ಜನರು ಜಾಗೃತರಾಗಿ ಹೆಚ್ಚೆಚ್ಚು ಅರಣ್ಯವನ್ನು ಬೆಳೆಸಬೇಕಿದೆ ಎಂದರು.

ಕದಂಬಾ ಮಾರ್ಕೇಟ್ ಅಧ್ಯಕ್ಷ ಶಂಭುಲಿಂಗ ಹೆಗಡೆ ಮಾತನಾಡಿ, ಅರಣ್ಯ ಇಲಾಖೆಯವರು ಅಳಿವಿನಂಚಿನಲ್ಲಿರುವ ಸ್ಥಳೀಯ ಗಿಡಗಳನ್ನು ಬೆಳೆಸಬೇಕು. ಅರಣ್ಯ ಇಲಾಖೆ ವಿದ್ಯಾರ್ಥಿಗಳು ಇಂತಹಾ ಹಲವು ತಳಿಗಳನ್ನು ಗುರುತಿಸಿದ್ದಾರೆ. ಅವುಗಳ ಪುನರ್ ಮಾಟಿ ಮಾಡುವಂತಾಗಲಿ ಎಂದು ಆಶಿಸಿದರು.

ಕದಂಬ ಮಾರ್ಕೆಟ್ ನ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರ ಭಟ್ ಮಾತನಾಡಿ, ಕಳೆದ 7 ವರ್ಷದಿಂದ ಸಸ್ಯ ಸಂತೆಯನ್ನು ಆಯೋಜಿಸುತ್ತ ಬಂದಿದ್ದೇವೆ. ಕಳೆದ ವರ್ಷ 1.5 ಲಕ್ಷ ಸಸಿ ಮಾರಾಟಮಾಡಲಾಗಿತ್ತು. ಈ ಬಾರಿ 2.5 ಲಕ್ಷ ಸಸಿಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಇಲ್ಲಿ ರೈತರು ಬೆಳೆದ ಗಿಡಗಳನ್ನು ತಂದು ಮಾರಾಟ ಮಾಡುವ ಅವಕಾಶವೂ ಇದ್ದು, ಹೆಚ್ಚೆಚ್ಚು ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಎಸಿಎಫ್ ಡಿ.ರಘು, ಆರ್.ಎಫ್.ಒ. ಅಮಿತ್ ಚೌಹಾಣ್, ಪ್ರಗತಿ ಪರ ಕೃಷಿಕ ಆರ್.ಜಿ. ಭಟ್ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.