ಆಧಾರ್‌ಕಾರ್ಡ್ ಪಡೆದುಕೊಳ್ಳಲು ಅಂಚೆ ಕಚೇರಿಯಲ್ಲಿ ಜನರ ಪರದಾಟ: ರಾತ್ರಿಯಿಡಿ ಕಾದು ಸುಸ್ತು


ಕುಮಟಾ: ಆಧಾರಕಾರ್ಡಗಾಗಿ ಇಲ್ಲಿನ ಪ್ರಧಾನ ಅಂಚೆ ಕಚೇರಿಯ ರ‍್ಯಾಂಪ ಮೇಲೆ ರಾತ್ರಿ ಕಳೆದ ದೂರದ ಹಳ್ಳಿಗಳಿಂದ ಬಂದ ಜನರ ಪಾಡು ದಯನೀಯವಾಗಿತ್ತು.

ಸರಕಾರದ ಕಾರ್ಯಕ್ರಮಗಳ ಸೌಲಭ್ಯ ಪಡೆಯಲು ಹಾಗೂ ಶಿಕ್ಷಣ ಮತ್ತು ಇನ್ನಿತರ ಉದ್ದೇಶಗಳಿಗೆ ಆಧಾರ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಆಧಾರ ಪಡೆದುಕೊಳ್ಳುವದು ಅನಿವಾರ್ಯವಾಗಿದೆ. ಆಧಾರ ಕಡ್ಡಾಯಗೊಳಿಸುವ ಸರಕಾರ ಅದನ್ನು ಸುಲಭವಾಗಿ ಪಡೆದುಕೊಳ್ಳಲು ಇನ್ನೂ ಸಹ ಸರಳ ಮಾರ್ಗಗಳನ್ನು ಕಲ್ಪಿಸಿಕೊಂಡಿಲ್ಲ. ಹೀಗಾಗಿ ಆಧಾರ ಪಡೆಯಲು ಜನ ಪಡದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಸೋಮವಾರ ಸಂಜೆ ಟೋಕನ್ ಪಡೆಯಲು ತಾಲೂಕಿನ ದೂರದ ಹಳ್ಳಿಗಳಿಂದ ಪ್ರಧಾನ ಅಂಚೆ ಕಚೇರಿಗೆ ಜನರು ಆಗಮಿಸಿದ್ದರು. ಅಂಚೆ ಅಧಿಕಾರಿಗಳು ಮಧ್ಯಾನದ ನಂತರ ಟೋಕನ್ ನೀಡಲು ನಿರಾಕರಿಸಿದರು. ಟೋಕನ ಪಡೆಯಲು ಮುಂಜಾನೆ ಮಾತ್ರ ಸಮಯ ನಿಗದಿ ಪಡಿಸಿರುವದು ಮುಗ್ದ ಹಳ್ಳಿಯ ಜನರಿಗೆ ತಿಳಿಯದು. ಅಲ್ಲದೆ ಸಂಜೆಯಾಗಿದ್ದರಿಂದ ಊರುಗಳಿಗೆ ತೆರಳಿ ಮುಂಜಾನೆ ಬರಲು ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ವಿಧಿ ಇಲ್ಲದೆ ಅಧಾರಿಗಾಗಿ ಬಂದ ಜನ ಅಂಚೆ ಕಛೇರಿ ಪ್ರವೇಶ ಬಾಗಿಲಿನ ರ‍್ಯಾಂಪನಲ್ಲಿ ರಾತ್ರಿ ಇಡೀ ಕುಳಿತು ಬೆಳಗು ಮಾಡಿದರು. ಅಂತು ಮಂಗಳವಾರ ಜನರಿಗೆ ಟೋಕನ ಭಾಗ್ಯ ಲಭಿಸಿತು.

ಅಂಚೆ ಕಛೇರಿಯಲ್ಲಿ 15 ಜನರಿಗೆ ಮಾತ್ರ ದಿನದ ಆಧಾರ ಟೋಕನ್ ನೀಡಲಾಗುತ್ತದೆ. ಇನ್ನೂ ಬಹಳಷ್ಟು ಆಧಾರ ಮಾಡಿಸುವ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳುವ ಜನರಿರುವದರಿಂದ ಸಮಸ್ಯೆ ಬಗೆ ಹರಿಯುವ ಲಕ್ಷಣಗಳಿಲ್ಲ. ಹೀಗಾಗಿ ಅಧಿಕಾರಿಗಳು ತುರ್ತು ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಅಲ್ಲದೆ ಜನರಿಗೆ ನಿರಾಯಾಸವಾಗಿ ಆಧಾರ ದೊರೆಯುವಂತೆ ಮಾರ್ಗ ಕಲ್ಪಿಸಿಕೊಡಬೇಕಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.