ಶೀರ್ಷಾಸನದಿಂದ ಏನೆಲ್ಲಾ ಲಾಭವಿದೆ ಗೊತ್ತಾ?


ಶೀರ್ಷಾಸನ: ಯೋಗಾಸನಗಳಲ್ಲಿ ಆಸನಗಳ ರಾಜ ಶೀರ್ಷಾಸನ ಕರೆಯಲಾಗುತ್ತದೆ. ಇದರಲ್ಲಿ ಸಾಲಂಬ ಶೀರ್ಷಾಸನ, ಬದ್ಧಹಸ್ತ ಶೀರ್ಷಾಸನ, ಮುಕ್ತಹಸ್ತ ಶೀರ್ಷಾಸನ ಮುಂತಾದ ಅನೇಕ ಪ್ರಭೇದಗಳು ಇವೆ.

ಮಾಡುವ ಕ್ರಮ: ಮೊದಲು ನೆಲದ ಮೇಲೆ ಮೆತ್ತಗಿರುವ ದಪ್ಪನಾದ ಜಮಖಾನವನ್ನು ಹಾಸಿ, ಅದರ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು. ಅನಂತರ ಕೈಗಳ ಬೆರಳುಗಳನ್ನು ಪರಸ್ಪರ ಜೋಡಿಸಿ, ಮೊಳಕೈಯಿಂದ ಮುಂದಿನ ಎರಡೂ ಕೈಗಳನ್ನು `v’ ಕೋನಾಕೃತಿಯಲ್ಲಿ ಜಮಖಾನದ ಮೇಲೆ ಇರಿಸಬೇಕು. ಎರಡು ಕೈಗಳ ಮಧ್ಯೆ ಅಂಗೈಗಳ ಸಮೀಪದಲ್ಲಿ ನೆತ್ತಿಯನ್ನು ಇಟ್ಟು ಮಂಡಿಗಳನ್ನು ನೆಲದಿಂದ ಮೇಲಕ್ಕೆ ಎತ್ತಿ, ಕಾಲುಗಳನ್ನು ನೇರ ಮಾಡಬೇಕು.

ಅನಂತರ ದೇಹದ ಭಾರವನ್ನು ತಲೆ ಮತ್ತು ಮೊಣಕೈಗಳ ಮೇಲೆ ಹಾಕಿ ನಂತರ ಉಸಿರನ್ನು ಹೊರಕ್ಕೆ ದೂಡಬೇಕು. ನಿಧಾನವಾಗಿ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತುತ್ತಾ ಪ್ರತಿಯೊಂದು ಹಂತದಲ್ಲೂ ಸಮತೋಲನವನ್ನು ಪಡೆದು, ಕೊನೆಗೆ ಕಾಲುಗಳನ್ನು ಭೂಮಿಗೆ ಲಂಬವಾಗಿರಿಸಬೇಕು. ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಮೊಳಕೈಗಳು ಮತ್ತು ನೆತಿ ಮೇಲೆ ಇರುತ್ತದೆ ಮತ್ತು ಇಡೀ ಶರೀರವು ಭೂಮಿಗೆ ಲಂಬವಾಗಿರುತ್ತದೆ. ಶೀರ್ಷಾಸನವನ್ನು 3ರಿಂದ 5 ನಿಮಿಷಗಳವರೆಗೆ ಅಭ್ಯಾಸಮಾಡಿ ಅನಂತರ ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಪ್ರಾರಂಭದಲ್ಲಿ ಗೋಡೆಯ ಮಗ್ಗುಲಲ್ಲಿ ಶೀರ್ಷಾಸನವನ್ನು ಮಾಡುವುದು ಉತ್ತಮ.

ಲಾಭಗಳು: 1. ಇಡೀ ಶರೀರದ ಹಾಗೂ ಮನಸ್ಸಿನ ಸರ್ವತೋಮುಖ ಬೆಳವಣಿಗೆಗೆ ಶೀರ್ಷಾಸಾನದ ಅಭ್ಯಾಸವು ಹೆಚ್ಚು ಉಪಕಾರಿ.
2. ಶೀರ್ಷಾಸನದ ಅಭ್ಯಾಸದಿಂದ ಶುದ್ಧ ರಕ್ತವು ಹೆಚ್ಚಿನ ಪ್ರಮಾಣದಲ್ಲಿ ಮಸ್ತಿಷ್ಕಕ್ಕೆ ದೊರೆಯುವುದರಿಂದ ಕೆಲಮಟ್ಟಿಗೆ ತಲೆನೋವು ಮತ್ತು ಅರ್ಧತಲೆನೋವಿನ ನಿವಾರಣೆಗೂ ಸಹಾಯವಾಗುವುದು.
3. ಮಲಬದ್ಧತೆ, ಅಜೀರ್ಣ, ಆಗ್ನಿಮಾಂದ್ಯ , ರಕ್ತವಿಕಾರ, ನೆಗಡಿ, ಮೊಳೆರೋಗ, ಅತಿಮೂತ್ರ ಹಾಗೂ ಮಾತ್ರಜನಕಾಂಗಗಳಿಗೆ ಸಂಬಂಧಿಸಿದ ಅನೇಕ ರೋಗಗಳು ಶೀರ್ಷಾಸನದ ಅಭ್ಯಾಸದಿಂದ ಸಾಕಷ್ಟು ಮಟ್ಟಿಗೆ ದೂರವಾಗುತ್ತೆ. 4. ಹೃದಯ, ಶ್ವಾಸಕೋಶ ಮತ್ತು ಕತ್ತೂ ಸಹ ಈ ಆಸನದಿಂದ ಹೆಚ್ಚು ಬಲಿಷ್ಠವಾಗುವುವು.

Categories: ನಾಟಿ ನಂಟು

Leave A Reply

Your email address will not be published.