‘ರಕ್ತನೀಡಿ ಒಂದು ಜೀವ ಉಳಿಸಿ’ ವಾಟ್ಸಾಪ್ ಗ್ರೂಪ್‍ನಿಂದ ರಕ್ತದಾನಿಗಳ ದಿನಾಚರಣೆ


ಕುಮಟಾ: ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಶುಕ್ರವಾರ ತಾಲೂಕಿನ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತನೀಡಿ ಒಂದು ಜೀವ ಉಳಿಸಿ ವಾಟ್ಸಾಪ್ ಗ್ರೂಪ್ ಹಾಗೂ ಕೆಲ ಕಾಲೇಜು ವಿದ್ಯಾರ್ಥಿಗಳು ಸ್ವ ಪ್ರೇರಣೆಯಿಂದ ರಕ್ತನೀಡಿ, ಕೇಕ್ ಕತ್ತರಿಸಿ ಸಿಹಿಹಂಚುವ ಮೂಲಕ ರಕ್ತದಾನಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.

ರಕ್ತನೀಡಿ ಒಂದು ಜೀವವನ್ನು ಉಳಿಸಿ ಎಂಬ ಶೀರ್ಷಿಕೆಯಡಿ ನಿರ್ಮಾಣಗೊಂಡ ಈ ಗ್ರೂಪ್, ಕಳೆದ 7 ವರ್ಷಗಳಿಂದ ಸತತವಾಗಿ ರಾತ್ರಿ ಹಗಲೆನ್ನದೇ ಅಪಘಾತವಾದಾಗ, ಹೆರಿಗೆ ಸಂದರ್ಭದಲ್ಲಿ ಹಾಗೂ ಇನ್ನಿತರ ತುರ್ತು ಚಿಕಿತ್ಸೆಗಾಗಿ ರಕ್ತದ ಅವಶ್ಯಕತೆಯಿರುವವರಿಗೆ ಈ ತಂಡದ ದಾನಿಗಳು ರಕ್ತವನ್ನು ಒದಗಿಸುತ್ತ ಬಂದಿದ್ದಾರೆ. ಈಗಾಗಲೇ ವಾಟ್ಸಾಪ್‍ನಲ್ಲಿ 5 ಪುರುಷರ ಗ್ರೂಪ್ ಹಾಗೂ 1 ಮಹಿಳೆಯರ ತಂಡವನ್ನು ರಚಿಸಿಕೊಂಡ ಇವರು ಒಟ್ಟೂ 8500 ರಕ್ತದಾನಿಗಳನ್ನೊಳಗೊಂಡು, ಸದಾ ನಿಸ್ವಾರ್ಥ ಸೇವೆಗೆ ಸಿದ್ಧರಾಗಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಬ್ಲಡ್ ಬ್ಯಾಂಕಿನ ಹಿರಿಯ ಕಾರ್ಯದರ್ಶಿ ಡಾ. ಮೂಡ್ಲಗೇರಿ ಶಾನಭಾಗ ಮಾತನಾಡಿ, ರಕ್ತನೀಡಿ ಒಂದು ಜೀವ ಉಳಿಸಿ ತಂಡದವರು ಸ್ವಪ್ರೇರಣೆಯಿಂದ ತಮ್ಮ ಅಮೂಲ್ಯವಾದ ರಕ್ತದಾನ ಮಾಡಿ, ಅನೇಕ ಜೀವ ಉಳಿಯಲು ಸಹಕಾರಿಯಾಗಿದ್ದಾರೆ. ಇವತ್ತಿನ ಒಂದು ದಿನಕ್ಕೆ ರಕ್ತದಾನ ಸೀಮಿತವಾಗದೇ ವರ್ಷದ 365 ದಿನವೂ ಇವರ ಕಾರ್ಯ ಹೀಗೇ ಇರುತ್ತದೆ ಎಂಬುದು ಸಂತಸದ ಸಂಗತಿ. ಈ ತಂಡದ ಎಲ್ಲ ಸದ್ಯರಿಗೆ ದೇವರು ಆಯುರಾರೋಗ್ಯ ಕರುಣಿಸಲಿ. ತಂಡದಿಂದ ಇನ್ನೂ ಹೆಚ್ಚೆಚ್ಚು ಜನಪರ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.

ಈ ಗ್ರೂಪ್‍ನ ಮುಖ್ಯಸ್ಥ ಹಾಗೂ ಸಂಸ್ಥಾಪಕ ಶ್ರೀಧರ ಗಣೇಶ ಕುಮಟಾಕರ್ ಮಾತನಾಡಿ, ನಮ್ಮ ಗ್ರೂಪ್‍ನ ಸದಸ್ಯರು ಜಿಲ್ಲೆಯಲ್ಲಷ್ಟೇ ಅಲ್ಲದೆ, ಮಂಗಳೂರು, ಉಡುಪಿ ಹಾಗೂ ಮೈಸೂರು ಸೇರಿದಂತೆ ಇನ್ನಿತರ ಭಾಗಗಳಿಗೆ ತೆರಳಿ ರಕ್ತದ ಅವಶ್ಯಕತೆಯಿರುವ 2700ಕ್ಕೂ ಅಧಿಕ ಜನರಿಗೆ ಈಗಾಗಲೇ ರಕ್ತದಾನ ಮಾಡಿದ್ದು, ಈ ವರ್ಷವೇ 950 ಜನರಿಗೆ ರಕ್ತವನ್ನು ಒದಗಿಸಲಾಗಿದೆ. ಮಧ್ಯರಾತ್ರಿಯಲ್ಲಿಯೂ ಕಳುಹಿಸಿದ ಸಂದೇಶವನ್ನು ನೋಡಿ, ಸಮಯಕ್ಕೆ ಸರಿಯಾಗಿ ಸ್ಪಂದಿಸುತ್ತಿರುವ ನಮ್ಮ ಗ್ರೂಪ್‍ನ ಸದಸ್ಯರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಂತಹ ನಿಸ್ವಾರ್ಥ ಸೇವೆಗೆ ಸಾರ್ವಜನಿಕರ ಸಹಾಯವೂ ಅಗತ್ಯವಾಗಿದೆ ಎಂದರು.

ತಂಡದ ಹಲವು ಸದಸ್ಯರು ಹಾಗೂ ಕೆಲ ಕಾಲೇಜು ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ಸ್ವಪ್ರೇರಣೆಯಿಂದ ರಕ್ತದಾನ ಮಾಡಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.