ಮಳೆಗಾಲದಲ್ಲಿ ಪೆಟ್ರೋಲ್ ಜೊತೆ ನೀರು ಸೇರದಂತೆ ನೋಡಿಕೊಳ್ಳಿ: ಭಾಸ್ಕರ ಹೆಗಡೆ

ಶಿರಸಿ: ಮಳೆಗಾಲದಲ್ಲಿ ಪೆಟ್ರೋಲ್ ಒಳಗೆ ನೀರು ಸೇರದಂತೆ ನೋಡಿಕೊಳ್ಳಬೇಕು ಎಂದು ವಾಹನ ಸವಾರರಿಗೆ, ಮಾಲಕರಿಗೆ ಜಿಲ್ಲಾ ಪೆಟ್ರೋಲಿಯಂ ಡೀಲರ್ಸ ಅಸೋಸಿಯೇಶನ್ ಅಧ್ಯಕ್ಷ, ಭಾಸ್ಕರ ಹೆಗಡೆ ಕಾಗೇರಿ, ಕಾರ್ಯದರ್ಶಿ ರವಿ ಪೈ ಹೊನ್ನಾವರ ಸಲಹೆ ಮಾಡಿದ್ದಾರೆ.

ಮಳೆಗಾಲ ಪ್ರಾರಂಭವಾಗಿದ್ದು ವಾಹನ ಮಾಲಕರು ಪೆಟ್ರೋಲ್ ಹಾಕಿಸುವಾಗ, ಅಥವಾ ಇನ್ನಾವುದೋ ಕಾರಣಕ್ಕೆ ಟಾಂಕಿಯಲ್ಲಿ ನೀರು ಹೋಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಸಮಸ್ಯೆ ಆಗಲಿದೆ. ಈ ಕಾರಣದಿಂದ ಜಾಗೃತಿ ಅಗತ್ಯ ಎಂದೂ ತಿಳಿಸಿದ್ದಾರೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂನಂಥ ರಾಷ್ಟ್ರೀಕೃತ ತೈಲ ಕಂಪನಿಗಳು ರೈತರ ಹಿತಾಸಕ್ತಿಯಿಂದ ಪೆಟ್ರೋಲ್ ನಲ್ಲಿ ಶೇ. 10 ಈಥೆನೊಲ್ ಬಳಸುತ್ತಿದ್ದಾರೆ. ಆದರೆ ಈಥೆನೊಲ್‍ನ ಗುಣಧರ್ಮಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳುವಳಿಕೆ ಕಡಿಮೆ.

ಈಥೆನೊಲ್ ನೀರಾಗಿ ಬದಲು: ಈಥೆನೊಲ್ ಒಂದು ಶುದ್ಧ ಹಾಗೂ ಪರಿಸರ ಸ್ನೇಹಿ ಇಂಧನವಾಗಿದ್ದು ನಮ್ಮ ವಾಹನದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡದೆಯೇ ಪೆಟ್ರೊಲ್ ನೊಂದಿಗೆ ಮಿಶ್ರಣ ಮಾಡಿ ಬಳಸಬಹುದಾಗಿದೆ. ಇದರಿಂದ ವಾಹನಗಳಿಗೆ ಯಾವುದೇ ಹಾನಿ ಇಲ್ಲ. ಆದರೆ ಇದರ ಒಂದು ವೈಶಿಷ್ಟ್ಯತೆ ಏನೆಂದರೆ ಇದು ಪೆಟ್ರೋಲ್ ನೊಂದಿಗೆ ಹೇಗೆ ಸಂಪೂರ್ಣವಾಗಿ ಬೇರೆಯುತ್ತದೆಯೋ ಹಾಗೆಯೇ ನೀರಿನೊಂದಿಗೆ ಕೂಡ ಬೇರೆಯುತ್ತದೆ. ಬೆರೆಯುವದಷ್ಟೇ ಅಲ್ಲ, ಸಂಪೂರ್ಣ ನೀರಾಗಿ ಬದಲಾಗುತ್ತದೆ. ಒಂದು ಲೀಟರ್ ಪೆಟ್ರೋಲ್ ನಲ್ಲಿ ಹತ್ತು ಪ್ರತಿಶತ 100 ಮಿಲಿ ಲೀಟರ್ ಈಥೆನೊಲ್ ಇರುತ್ತದೆ. ಈ ಈಥೆನೊಲ್ ನಲ್ಲಿ ಸ್ವಲ್ಪವೇ ನೀರು ಮಿಶ್ರಣ ವಾದರೂ 100 ಎಂಎಲ್ ಈಥೆನೊಲ್ ನೀರಾಗಿ ಬದಲಾಗುತ್ತದೆ ಎಂದೂ ವಿವರಿಸಿದ್ದಾರೆ.

ಕೆಲವು ವಾಹನಗಳು ಮಳೆಗಾಲದಲ್ಲಿ ವಿಶೇಷವಾಗಿ ಇಂಧನ ಹಾಕಿಸುವಾಗ ಮುಚ್ಚಳದ ಆಸುಪಾಸು ಮಳೆ ಬಂದಾಗ ಅಲ್ಪ ಪ್ರಮಾಣದ ನೀರು ತುಂಬಿಕೊಂಡಿರುತ್ತದೆ. ಪೆಟ್ರೋಲ್ ಹಾಕಿಸಲು ಮುಚ್ಚಳ ತೆರೆದಾಗ ಈ ನೀರು ಟ್ಯಾಂಕ್‍ನ ಒಳಗಡೆ ಹೋಗುತ್ತದೆ. ಹೀಗೆ ಪ್ರತಿ ಸಲ ತೆರೆದಾಗಲೂ ಅಲ್ಪ ಪ್ರಮಾಣದ ನೀರು ಒಳಗೆ ಹೋದಾಗ ಈಥೆನೋಲ್‍ನೊಂದಿಗೇ ಸೇರಿ ಕೆಸರಿನ ರೀತಿಯಲ್ಲಿ ಶೇಖರವಾಗುತ್ತದೆ. ಹಾಗೆ ಶೇಖರವಾದ ನೀರು ಅಥವಾ ಕೆಸರು ಯಾವಾಗ ಕಾರ್ಬೋರೇಟರ್ನಲ್ಲಿ ಸಿಕ್ಕಿ ಹಾಕಿಕೊಂಡು ಸಮಸ್ಯೆ ನೀಡುತ್ತದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.