ದೇವಗಿರಿ ಪ್ರದೇಶದ ಮಳೆಗಾಲದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಹೆಸ್ಕಾಂಗೆ ಗ್ರಾಮಸ್ಥರ ಒತ್ತಾಯ

ಕುಮಟಾ: ತಾಲೂಕಿನ ದೇವಗಿರಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಮಳೆಗಾಲದ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ದೇವಗಿರಿ ಪಂಚಾಯತ ವತಿಯಿಂದ ಹೆಸ್ಕಾಂ ಎಇಇ ಎಂ.ಎ.ಪಠಾಣರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ದೇವಗಿರಿ ವ್ಯಾಪ್ತಿಗೆ ವಾಲಗಳ್ಳಿ ಫೀಡರಿನಿಂದ ವಿದ್ಯುತ್ ಸಂಪರ್ಕ ಇದೆ. ಆದರೆ ವಾಲಗಳ್ಳಿ ಫೀಡರಿನಿಂದ ದೇವಗಿರಿಗೆ ಸಂಪರ್ಕಗೊಳ್ಳುವ ಮಾರ್ಗದಲ್ಲಿ ಅರಣ್ಯ, ಗಿಡಮರಗಳು ಜಾಸ್ತಿ ಪ್ರಮಾಣದಲ್ಲಿದೆ. ಈ ಕಾರಣದಿಂದ ಪ್ರತಿ ಮಳೆಗಾಲದಲ್ಲಿ ವಿದ್ಯುತ್ ತಂತಿ, ಕಂಬಗಳ ಮೇಲೆ ಮರಗಿಡಗಳು ಮುರಿದು ಬಿದ್ದು ಪದೇಪದೇ ವಿದ್ಯುತ್ ಕಡಿತವಾಗಿ ದೇವಗಿರಿಗೆ ಸಮಸ್ಯೆಯಾಗುತ್ತದೆ. ಮಳೆಗಾಲದಲ್ಲಿ ತುರ್ತು ಸಂದರ್ಭವೆಂದು ಪರಿಗಣಿಸಿ ಈ ಮೊದಲು ನೀಡುವಂತೆಯೇ ದೇವಗಿರಿಗೆ ಹಂದಿಗೋಣ ಫೀಡರಿನಿಂದ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ದೇವಗಿರಿ ಗ್ರಾಮ ಪಂಚಾಯತ ಅಧ್ಯಕ್ಷ ಎಸ್.ಟಿ.ನಾಯ್ಕ ಮಾತನಾಡಿ, ನಾಲ್ಕು ದಿನಗಳಿಂದ ವಿದ್ಯುತ್ ಇಲ್ಲದೇ ಕತ್ತಲೆಯಲ್ಲಿಯೇ ಜೀವನ ನಡೆಸುವಂತಾಗಿದೆ. ಈ ಹಿಂದೆ ನೀಡವಂತೆ ಕುಮಟಾದಿಂದ ಚಿತ್ರಗಿ ಮಾರ್ಗವಾಗಿ ಹಂದಿಗೋಣ ಫೀಡರ್‍ನಿಂದ ವಿದ್ಯುತ್ ಕಲ್ಪಿಸಿ. ಹೆಸ್ಕಾಂ ಅಧಿಕಾರಿಗಳು ಶೀಘ್ರ ತುರ್ತು ಮಾರ್ಗಬದಲಾವಣೆಗೆ ಸೂಕ್ತ ಆನುಮತಿ ಕೊಡಬೇಕು. ಗುತ್ತಿಗೆ ಪಡೆದವರು ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಈ ಸಮಸ್ಯೆ ಮುಂದುವರಿದರೆ ಹೆಸ್ಕಾಂ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಗುತ್ತಿಗೆ ಪಡೆದ ಬಜಾಜ್ ಕಂಪನಿಯ ಹರೀಶ ಪೂಜಾರಿ ಮಾತನಾಡಿ, ಕೆಲಸ ವಿಳಂಭವಾಗಿರುವುದು ಸತ್ಯ. ಇನ್ನು ಎರಡು ಮೂರು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

ಮನವಿ ಸಲ್ಲಿಕೆಯಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕುಮಾರ ಭಟ್ಟ, ಪಂಚಾಯತ ಸದಸ್ಯರಾದ ಸುರೇಶ ಹರಿಕಂತ್ರ, ಗಣಪತಿ ಗೌಡ, ದೇವೇಂದ್ರ ಶೇರುಗಾರ, ಯುವಕ ಸಂಘದ ಅಧ್ಯಕ್ಷ ಅನಿಲ ರೇವಣಕರ, ಮಂಜು ಭಂಡಾರಿ ಸೇರಿದಂತೆ ಇನ್ನಿತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.