ತಾ.ಪಂ ಅಧ್ಯಕ್ಷೆ ವಿಜಯಾ ಪಟಗಾರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ: 7100.03 ಲಕ್ಷ ರೂ ಅನುದಾನ ನಿಗದಿ

ಕುಮಟಾ: 2019-20 ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಮಂಡನೆ ಹಾಗೂ ಪ್ರಗತಿ ಪರಿಶೀಲನಾ ಸಾಮಾನ್ಯ ಸಭೆ ತಾ.ಪಂ ಅಧ್ಯಕ್ಷೆ ವಿಜಯಾ ಪಟಗಾರ ಅಧ್ಯಕ್ಷತೆಯಲ್ಲಿ ತಾಲೂಕಾ ಪಂಚಾಯತ ಸಭಾಭವನದಲ್ಲಿ ಗುರುವಾರ ನಡೆಯಿತು.

ತಾ.ಪಂ ಅಧ್ಯಕ್ಷೆ ವಿಜಯಾ ಪಟಗಾರ ಬಜೆಟ್ ಮಂಡಿಸಿ, 2019-20 ನೇ ಸಾಲಿಗೆ ಒಟ್ಟೂ 7100.03 ಲಕ್ಷರೂ ಆನುದಾನ ನಿಗದಿಗೊಳಿಸಿದ್ದು, ಕಳೆದ ಸಾಲಿಗಿಂತ 456.18 ಲಕ್ಷರೂ ಹೆಚ್ಚು ಅನುದಾನ ಕಲ್ಪಿಸಲಾಗಿದೆ. ವೇತನಾಂಶಕ್ಕೆ 5606.95 ಲಕ್ಷರೂ ಹಾಗೂ ವೇತನೇತರ ವೆಚ್ಚಕ್ಕಾಗಿ 1493.08 ಲಕ್ಷರೂ ಅನುದಾನ ಮೀಸಲಿಡಲಾಗಿದೆ ಎಂದರು. ತಾಪಂ ಸಂಯುಕ್ತ ಅನುದಾನ ಹಾಗೂ ಅಭಿವೃದ್ಧಿ ಅನುದಾನದ ಲೆಕ್ಕ ಶೀರ್ಷಿಕೆಗೆ ಅನುದಾನ ನಿಗದಿ ಪಡಿಸಿಲ್ಲ ಮತ್ತು ಹಂಚಿಕೆಯಾಗಿಲ್ಲ ಎಂದು ತಿಳಿಸಿದರು.

ನಂತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯ ಈಶ್ವರ ನಾಯ್ಕ ಮಾತನಾಡಿ, ಚತುಷ್ಪಥ ಕಾಮಗಾರಿಗಾಗಿ ತಂಡ್ರಕುಳಿಯಲ್ಲಿ ಕೊರೆದ ಗುಡ್ಡಕ್ಕೆ ಮಾಡಿರುವ ಸಿಮೆಂಟ್ ಲೇಪನ ವೈಜ್ಞಾನಿಕವಲ್ಲ. ಐಆರ್‍ಬಿಯವರು ನಿರಂತರವಾಗಿ ತಪ್ಪು ಕೆಲಸ ಮಾಡುತ್ತಿದ್ದಾರೆ, ಇದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ. ತಾಲೂಕಿನಲ್ಲಿ ವಿವಿಧ ಪಿಂಚಣಿದಾರರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಇದಕ್ಕೇನು ಕಾರಣ ಎಂದು ತಹಸೀಲ್ದಾರ್‍ರನ್ನು ಪ್ರಶ್ನಿಸಿದ ಅವರು ಈಗಾಗಲೇ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ದೊಡ್ಡ ಪ್ರಮಾಣ ಕೂಗು ಎದ್ದಿದೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಸಾಕಾರಗೊಳಿಸಬೇಕಿದೆ. ಸೂಕ್ತ ಜಾಗ ಒದಗಿಸುವ ಕಾರ್ಯವಾಗಬೇಕಿದೆ. ತಹಸೀಲ್ದಾರರು ಈ ಬಗೆಗೆ ಹೆಚ್ಚಿನ ಗಮನಹರಿಸಬೇಕು. ತಾ.ಪಂನಿಂದಲೂ ಠರಾವು ಮಾಡಿ ಕಳಿಸೋಣ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಮೇಘರಾಜ ನಾಯ್ಕ, ತಂಡ್ರಕುಳಿ ಸಮಸ್ಯೆಯ ಬಗ್ಗೆ ಐಆರ್‍ಬಿಯ ಉನ್ನತ ಅಧಿಕಾರಿಗಳ ಜೊತೆ ಶಾಸಕರ ಸಮ್ಮುಖದಲ್ಲಿಯೇ ಮಾತನಾಡಿದ್ದೇವೆ. ಗುಡ್ಡದ ನೀರು ಹರಿದು ಹೋಗಲು ಟ್ರೆಂಚ್ ಹೊಡೆಯಲಾಗಿದೆ ಎಂದ ಅವರು ತಾಂತ್ರಿಕ ಕಾರಣದಿಂದ ಕೆಲವರಿಗೆ ಪಿಂಚಣಿ ಬಟವಡೆ ಸಮಸ್ಯೆಯಾಗಿದೆ ಎಂದರು. ಇನ್ನು ಜೂ. 12 ರವರೆಗೆ ಎಲ್ಲೆಡೆ ಟ್ಯಾಂಕರ್ ನೀರು ನೀಡಲಾಗಿದೆ. ಈಗ ಮಾನಸೂನ್ ಆರಂಭವಾಗಿದೆ. ಪ್ರಕೃತಿ ವಿಕೋಪದ ಸಂದರ್ಭಗಳನ್ನೆದುರಿಸಲು ತಾಲೂಕಾಡಳಿತ ಸಜ್ಜಾಗಿದೆ ಎಂದು ತಿಳಿಸಿದರು.

ತಾ.ಪಂ.ಕಾರ್ಯನಿರ್ವಹಣಾಧಿಕಾರಿ, ಸಿ.ಟಿ.ನಾಯ್ಕ, ಕಲ್ಲಬ್ಬೆ ಪಂಚಾಯಿತಿ ಕಾರ್ಯಾಲಯಕ್ಕೆ 5 ಗುಂಟೆ ಕಂದಾಯ ಭೂಮಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಸರಿಯಾದ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಿ ಮಂಜೂರಾತಿ ದೊರಕುವಂತಾಗಲಿ. ಏಕೆಂದರೆ ಕಲ್ಲಬ್ಬೆ ಪಂಚಾಯಿತಿಗೆ ಬೇರೆ ಕಂದಾಯ ಭೂಮಿ ಇಲ್ಲ ಎಂದು ತಹಸೀಲ್ದಾರ್‍ರನ್ನು ಕೋರಿದರು.

ಕಲಬಾಗ ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷ ನಾಯ್ಕ ಮಾತನಾಡಿ, ಕಲಭಾಗ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆರೋಗ್ಯ ಇಲಾಖೆ ಹಳೆಯ ಕಟ್ಟಡಗಳು ಶಿಥಿಲವಾಗಿದ್ದು, ಅಪಾಯಕಾರಿಯಾಗಿದೆ. ಇಲಾಖೆ ಕಟ್ಟಡ ಕೆಡವುತ್ತಿಲ್ಲ. ಆಕಸ್ಮಿಕ ಕಟ್ಟಡ ಬಿದ್ದು ಏನಾದರೂ ಅನಾಹುತವಾದರೆ ಆರೋಗ್ಯ ಇಲಾಖೆಯೇ ಹೊಣೆ ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಮಾತನಾಡಿ, ನಮ್ಮಿಂದಾದ ಪತ್ರ ವ್ಯವಹಾರ ಮಾಡಿ ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ. ಕಟ್ಟಡ ತೆರವಿಗೆ ಅನುಮತಿ ಸಿಕ್ಕಿಲ್ಲ ಎಂದರು. ಇಓ ಸಿ.ಟಿ.ನಾಯ್ಕ ಮಧ್ಯ ಪ್ರವೇಶಿಸಿ, ಆರೋಗ್ಯ ಇಲಾಖೆಯವರು ತಾ.ಪಂ ಠರಾವು ಆಧರಿಸಿ ಶಿಥಿಲ ಕಟ್ಟಡದ ಅಧಿಕೃತ ಮೌಲ್ಯಮಾಪನ ಮಾಡಿಸಿ ಇಲಾಖೆಗೆ ವರದಿ ಕೊಡಿ ಎಂದು ಸೂಚಿಸಿದರು.

ಮಿರ್ಜಾನ ನಾಡಕಚೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ತೆಗೆದುಕೊಳ್ಳುತ್ತಿಲ್ಲ. ತದಡಿ ಬಂದರು ಬಳಿ ಮೀನು ಸಂಗ್ರಹ ಟ್ಯಾಂಕಗಳು ಸೊಳ್ಳೆಗಳ ಉಗಮ ತಾಣಗಳಾಗಿವೆ. ಮಿರ್ಜಾನದಲ್ಲಿ ಚತುಷ್ಪಥಕ್ಕೆ ಸರ್ವಿಸ್ ರಸ್ತೆ ಮಾಡಿಲ್ಲ, ಓಂಬೀಚ್, ನವಗ್ರಾಮ ಭಾಗದಲ್ಲಿ ಭೂ ಅತಿಕ್ರಮಣ ನಡೆಯುತ್ತಿದೆ ಎಂಬ ಹಲವು ವಿಚಾರಗಳು ಸಭೆಯಲ್ಲಿ ಪ್ರಸ್ತಾಪಗೊಂಡಿತು.

ಸಭೆಯ ಆರಂಭದಲ್ಲಿ ಅಗಲಿದ ಸಾಹಿತಿ ಗಿರೀಶ ಕಾರ್ನಾಡ ಹಾಗೂ ಹೆಗಡೆಯ ಮಾಜಿ ಜಿಪಂ ಅಧ್ಯಕ್ಷ ಎಲ್.ವಿ.ಶಾನಭಾಗರಿಗೆ ಮೌನಾಚರಣೆಯೊಂದಿಗೆ ಸಂತಾಪ ಸೂಚಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ನಾಗಾಂಜಲಿ ನಾಯ್ಕಗೆ ತಾಲೂಕಾ ಪಂಚಾಯತ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಗೀತಾ ಮುಕ್ರಿ, ಸದಸ್ಯರಾದ ಮಹೇಶ ಶೆಟ್ಟಿ, ಬಾಲಕೃಷ್ಣ ನಾಯ್ಕ, ನೀಲಾಂಬಿಕಾ ನಾಯಕ, ಅನಸೂಯಾ ಅಂಬಿಗ, ಪಾರ್ವತಿ ಗೌಡ, ಇಲಾಖಾ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.