ಕೆನರಾ ವೃತ್ತದ ಜೇಷ್ಠತಾ ಪಟ್ಟಿಯಲ್ಲಿ ಅರ್ಹತಾ ದಿನ ನಿಗದಿಗೊಳಿಸುವಂತೆ ಒತ್ತಾಯ

ಶಿರಸಿ: ಕೆನರಾ ಅರಣ್ಯ ವೃತ್ತದ ವನಪಾಲಕರು ಹಾಗೂ ಉಪವಲಯ ಅರಣ್ಯಾಧಿಕಾರಿಗಳಿಗೆ ಜೇಷ್ಠತಾ ಪಟ್ಟಿಯಲ್ಲಿ ಅರ್ಹತಾ ದಿನ ನಿಗದಿ ಮಾಡುವಂತೆ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಸದಸ್ಯರು ಕೆನರಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಆಗಮಿಸಿ ಒತ್ತಾಯಿಸಿದರು.

ಉತ್ತರ ಕನ್ನಡದ ಶಿರಸಿಯಲ್ಲಿರುವ ಕಚೇರಿಗೆ ಬುಧವಾರ ಆಗಮಿಸಿದ 200ಕ್ಕೂ ಅಧಿಕ ಅರಣ್ಯ ಅಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳ ಜೇಷ್ಠತಾ ಪಟ್ಟಿ ಸರಿ ಪಡಿಸುವಂತೆ ಆಗ್ರಹಿಸಿದರು. 200 ಕ್ಕೂ ಅಧಿಕ ಸದಸ್ಯರಿಗೆ ತೊಂದರೆಯಾಗುತ್ತಿರುವ ಕಾರಣ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕೆನರಾ ಅರಣ್ಯ ವೃತ್ತ ರಾಜ್ಯದಲ್ಲಿ ಅತಿದೊಡ್ಡ ಅರಣ್ಯ ವೃತ್ತವಾಗಿದೆ. 413 ಡಿಆರ್‌ಎಫ್‌ಓಗಳು ಇದರ ವ್ಯಾಪ್ತಿಯಲ್ಲಿದ್ದಾರೆ. ಬೆಂಗಳೂರು, ಬೆಳಗಾಂವ, ಧಾರವಾಡ, ಬಳ್ಳಾರಿ ವಿಭಾಗದಲ್ಲಿ ಈಗಾಗಲೇ ಜೇಷ್ಠತಾ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ ಕೆನರಾ ವೃತ್ತದಲ್ಲಿ ಮಾತ್ರ ಜೇಷ್ಠತಾ ಪಟ್ಟಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ.

2008ರಿಂದ 16ರವರೆಗೆ ವನ ಪಾಲಕರಿಗೆ ಬಡ್ತಿ ನೀಡಿದರೂ ರಿಕ್ತಸ್ಥಾನ ನೀಡದೇ ಇರುವುದರಿಂದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಜ್ಯೇಷ್ಠತಾ ಪಟ್ಟಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಜೇಷ್ಠತಾ ಪಟ್ಟಿಯಲ್ಲಿ ಸ್ಥಾನ ನೀಡಬೇಕು, ಸ್ವತಂತ್ರ ಪ್ರಭಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ವನಪಾಲಕರನ್ನು ಸ್ಥಾನಪನ್ನಗೊಳಿಸಿದಂತೆ ವೇತನ, ಸೌಲಭ್ಯ ನೀಡಬೇಕು ಎಂದು ಡಿಎಫ್‌ಒ ಎಸ್.ಪಿ.ಹೆಗಡರ ಅವರೊಂದಿಗೆ ಚರ್ಚಿಸಿದರು.

ಈ ವೇಳೆ ಮಾತನಾಡಿದ ಸಂಘದ ಉಪಾಧ್ಯಕ್ಷ ಶ್ರೀನಿವಾಸ ನಾಯ್ಕ, 20 ರಿಂದ 25 ವರ್ಷ ಸೇವೆ ಸಲ್ಲಿಸಿದರೂ ಗಾರ್ಡಿಂದ ಫಾರೆಸ್ಟರ್ ಹುದ್ದೆ ಮಾತ್ರ ಸಿಗುತ್ತಿದೆ. ಪ್ರಮೋಟಿ ಕೋಟಾದ ಅಡಿಯಲ್ಲಿ ಯಾವುದೇ ಬಡ್ತಿ ಸಿಗುತ್ತಿಲ್ಲ. ಅಲ್ಲದೇ ಸ್ಯಾಲರಿ ಸ್ಕೇಲ್ ನಲ್ಲಿಯೂ ವ್ಯತ್ಯಾಸವಾಗುತ್ತಿದೆ. ಇದೆಲ್ಲವನ್ನೂ ಸರಿಪಡಿಸಬೇಕು ಎಂದು ಮನವಿ ಸಲ್ಲಿಸಿದ್ದು , ಸ್ಪಂದನೆ ದೊರೆಯುವ ನಿರೀಕ್ಷೆಯಿದೆ ಎಂದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.