ಶಿವಮೊಗ್ಗ ವ್ಯಾಪ್ತಿಗೆ ಉ.ಕ ಅರಣ್ಯ ಪ್ರದೇಶ ಸೇರ್ಪಡೆ ಬೇಡವೆಂದು ಅರಣ್ಯ ಸಚಿವರಿಗೆ ಪತ್ರ ಬರೆದ ಶಾಸಕ ಕಾಗೇರಿ

ಶಿರಸಿ: ಉ.ಕ ಜಿಲ್ಲೆಯ ಅರಣ್ಯ ಪ್ರದೇಶವನ್ನು ಶಿವಮೊಗ್ಗ ವ್ಯಾಪ್ತಿಯ ಶರಾವತಿ ಅಭಯಾರಣ್ಯ ಸೇರ್ಪಡೆಗೆ ರಾಜ್ಯ ವನ್ಯ ಜೀವಿ ಮಂಡಳಿ ಒಪ್ಪಿಗೆ ನೀಡಿದ್ದು, ಈ ಕ್ರಮ ಸಮನಾದದ್ದಲ್ಲ ಎಂದು ರಾಜ್ಯದ ಅರಣ್ಯ ಸಚಿವ ಸತೀಶ ಜಾರಕಿಹೊಳೆಗೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಿದ್ದಾಪುರ- ಶಿರಸಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರ ಬರೆದಿದ್ದಾರೆ.

ಈ ಹಿಂದೆ 2012 ರಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆಯ ಶಿಫಾರಸ್ಸಿನಂತೆ ಅಘನಾಶಿನಿ ಸಿಂಗಳೀಕ ಸಂರಕ್ಷಿತ ಪ್ರದೇಶ (3000 ಚ.ಕೀಮೀ)ಯನ್ನು ಸ್ಥಳೀಯ ಜನರ ಕೋರಿಕೆಯಂತೆ ಸರ್ಕಾರ ಘೋಷಣೆ ಮಾಡಿದೆ. ಆದರೆ ಈಗ ಏಕಪಕ್ಷೀಯವಾಗಿ ಸ್ಥಳೀಯರು ಜನಪ್ರತಿನಿಧಿಗಳು, ಪರಿಸರ ವನ್ಯಜೀವಿ ಕಾರ್ಯಕರ್ತರು, ಯಾರ ಅಭಿಪ್ರಾಯ ಪಡೆಯದೇ, ಶರಾವತಿ ಅಭಯಾರಣ್ಯಕ್ಕೆ ಅಘನಾಶಿನಿ ಸಂರಕ್ಷಿತ ಪ್ರದೇಶ ಸೇರ್ಪಡೆ ಮಾಡುವ ಸರ್ಕಾರದ ಕ್ರಮ ಸಮರ್ಥನೀಯವಲ್ಲ.

ಆಡಳಿತಾತ್ಮಕವಾಗಿ ಭೌಗೋಳಿಕವಾಗಿ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಸಾಕಷ್ಟಯ ವಿಭಿನ್ನತೆ ಹೊಂದಿವೆ. ಅಘನಾಶಿನಿ ಕಣಿವೆಯ ಪ್ರದೇಶ ನಿರ್ವಹಣೆ ಕೆನರಾ ವೃತ್ತದಲ್ಲಿಯೇ ಇರಬೇಕು. ಶಿವಮೊಗ್ಗ ಜಿಲ್ಲೆಯ ಶರಾವತಿ ಅಭಯಾರಣ್ಯಕ್ಕೆ ಈ ಪ್ರದೇಶ ಸೇರ್ಪಡೆ ಬೇಡ. ಸಂಪರ್ಕದ ದೃಷ್ಟಿಯಿಂದ ಶಿವಮೊಗ್ಗ ಬಹು ದೂರದ ಪ್ರದೇಶವಾಗಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ, ಘಟ್ಟಪ್ರದೇಶದಲ್ಲಿ ವ್ಯಾಪಕ ಜನದಟ್ಟಣೆಯ ಹಳ್ಳಿಗಳಿರುವುದರಿಂದ ಅಭಯಾರಣ್ಯಕ್ಕೆ ಸೇರ್ಪಡೆ ವಿಷಯ ಬಹು ವಿವಾದಾತ್ಮಕ, ತೊಂದರೆದಾಯಕ, ಹಾಗೂ ಜನವಿರೋಧಿಯೆಂದು ಕರೆಸಿಕೊಳ್ಳಲಿದೆ ಈ ಕಾರಣಗಳಿಂದ ಅಘನಾಶಿನಿ ಸಂರಕ್ಷಿತ ಪ್ರದೇಶವೆಂದು ಈ ಹಿಂದೆಯೇ ಘೋಷಣೆ ಮಾಡಲಾಗಿದೆ.

ಕತ್ತಲೆಕಾನು, ಕರಿಕಾನ ಪರ್ವತ, ಸಿಂಗಳೀಕ ಪ್ರದೇಶ, ಮುಕ್ತಿಹೊಳೆ, ಉಂಚಳ್ಳಿ ಜಲಪಾತ, ಬೆಣ್ಣೆಹೊಳೆ ಜಲಪಾತ, ಮಿರಿಸ್ಟಿಕಾ ಸ್ಟಾಂಪ್ಸ್ ಸೇತಿದಂತೆ ಅಮೂಲ್ಯ ಸಸ್ಯ, ವನ್ಯ ವೈವಿಧ್ಯ ಹೊಂದಿರುವ ಅಘನಾಶಿನಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿ ವನ್ಯಜೀವಿ ಕಾಯ್ದೆಯ ವ್ಯಾಪ್ತಿಗೆ ಈಗಾಗಲೇ ತಂದಾಗಿದೆ. ಪುನಃ ಶರಾವತಿ ಅಭಯಾರಣ್ಯಕ್ಕೆ ಈ ಪ್ರದೇಶವನ್ನು ಸೇರಿಸುತ್ತೇವೆ ಎಂದು ಅರಣ್ಯ ಇಲಾಖೆ ಆದೇಶ ಹೊರಡಿಸಿದರೆ ಸಾರ್ವಜನಿಕರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಲಿದೆ. ಆದ್ದರಿಂದ ಶರಾವತಿ ಅಭಯಾರಣ್ಯಕ್ಕೆ ಅಘನಾಶಿನಿ ಪ್ರದೇಶವನ್ನು ಸೇರ್ಪಡೆ ಮಾಡುವ ಪ್ರಸ್ತಾವನೆ, ನಿರ್ಣಯಗಳನ್ನು ಕೈ ಬಿಡಬೇಕೆಂದು ವಿನಂತಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.