ಶಿರಸಿಯಲ್ಲಿ ಅಡಿಕೆ ಮರ ಹತ್ತುವ ತರಬೇತಿ ಶಿಬಿರಕ್ಕೆ ಚಾಲನೆ: 25 ಜನರು ಭಾಗಿ


ಶಿರಸಿ: ಜಿಲ್ಲೆಯ ಅಡಿಕೆ ಬೆಳೆಗಾರರ ಕೂಲಿ ಕಾರ್ಮಿಕರ ಸಮಸ್ಯೆಯನ್ನು ತಪ್ಪಿಸಲು ಇಲ್ಲಿನ ಕದಂಬ ಸಂಸ್ಥೆ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಾಗಿರುವ 5 ದಿನಗಳ ಅಡಿಕೆ ಮರ ಹತ್ತುವ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರಕ್ಕೆ ಮಂಗಳವಾರದಿಂದ ಚಾಲನೆ ನೀಡಲಾಗಿದೆ.

ಮೊದಲ ಬಾರಿಗೆ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ತರಬೇತಿ ಶಿಬಿರದಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ 25 ಜನರು ಭಾಗವಹಿಸಿದ್ದಾರೆ.‌ ಡಾ.ಶಶಿಧರ, ಡಾ.‌ನಾಗರಾಜಪ್ಪ, ರಾಮಕೃಷ್ಣ ನಾಯ್ಕ ಸೇರಿದಂತೆ ಒಟ್ಟೂ 6 ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದು, ಸೆಫ್ಟಿ‌ಬೆಲ್ಟ್, ವಿಮೆ, ಹೆಲ್ಮೆಟ್ ಗಳನ್ನು ಶಿಬಿರಾರ್ಥಿಗಳಿಗೆ ನೀಡಿ ದಿನಕ್ಕೆ 500 ರೂ ನೆರವನ್ನೂ ಸಹ ನೀಡಲಾಗುತ್ತಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಎನ್.ಕೆ.ಹೆಗಡೆ ಮಾತನಾಡಿ, ಅಡಿಕೆ ಬೆಳೆಗೆ ಹೇಳಿ ಮಾಡಿಸಿದ ಜಾಗ ಶಿರಸಿಯಾಗಿದೆ. ಕರಾವಳಿ, ಬಯಲುಸೀಮೆ ಸೇರಿದಂತೆ ಇತರೆ ಜಾಗಗಳಿಗೆ ಅಡಿಕೆ ಬೆಳೆ ವಿಸ್ತರಣೆ ಆಗಿದ್ದರೂ ಅಲ್ಲಿ ಮರಗಳ ಸಂರಕ್ಷಣೆ ಸುಲಭವಾಗಿದೆ. ಆದರೆ ಇಲ್ಲಿ ಹೆಚ್ಚಿನ ಮಳೆಯಾಗುವ ಕಾರಣ ಮರ ಏರುವುದು, ಬೆಳೆ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ಬೆಳೆ ರಕ್ಷಣೆಗೆ ಮರ ಏರುವ ಕೆಲಸ ಬಹಳ ಮುಖ್ಯವಾಗಿದೆ. ನುರಿತ ಕಾರ್ಮಿಕರಿಂದ ಮಾತ್ರ ಇದು ಸಾಧ್ಯವಾಗಿದ್ದು, ಕಾರ್ಮಿಕರ ಸಮಸ್ಯೆ ಹೋಗಲಾಡಿಸಲು ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದರು.

ವೈಜ್ಞಾನಿಕ ಲಾಭವನ್ನು ಪಡೆದುಕೊಂಡು ಮರ ಏರುವ ಕೌಶಲ್ಯ ಸುಧಾರಿಸಿಕೊಳ್ಳುವ ಅನಿವಾರ್ಯತೆ ಇಂದಿನ ದಿನಮಾನದಲ್ಲಿದೆ. ಈಗ ಆಯೋಜನೆ ಮಾಡಿರುವ ಶಿಬಿರ ಸಮಯೋಚಿತವಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ತರಬೇತಿ ಅಗತ್ಯವಿದೆ. ಎಲ್ಲಾ ಕಡೆಗಳಲ್ಲಿ ಇದು ವಿಸ್ತಾರವಾಗಿ ಆಸಕ್ತ ಶ್ರಮಿಕರಿಗೆ ತರಬೇರಿ ಸಿಗುವಂತೆ ಆಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಶಿವಮೊಗ್ಗ ವಿಶ್ವ ವಿದ್ಯಾಲಯ ಕುಲಪತಿ ಡಾ. ಎಂ. ಕೆ. ನಾಯ್ಕ ಉದ್ಘಾಟಿಸಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ಟ ಕಣ್ಣಿಗೆ, ಅರಣ್ಯ ಮಹಾವಿದ್ಯಾಲಯದ ಡೀನ್ ಶಿವಣ್ಣ ಮಾತನಾಡಿದರು.

ಕದಂಬ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜು ಎಂ. ಜೆ., ಎಂ.ವಿ. ಹೆಗಡೆ ಹುಳಗೋಳ ಇತರರಿದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.