ಬಾಲ ಕಾರ್ಮಿಕ ಪದ್ಧತಿ ನಿಷೇಧಕ್ಕೆ ಜನರ ಸಹಕಾರ ಅಗತ್ಯ: ನ್ಯಾ. ಟಿ ಗೋವಿಂದಯ್ಯ

ಕಾರವಾರ: ಸರ್ಕಾರ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅನೇಕ ಸವಲತ್ತು ನೀಡುತ್ತಿದ್ದರೂ ಸಹ ಇಂದಿನ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದೆ. ಬಾಲಕಾರ್ಮಿಕ ಪದ್ಧತಿ ತೊಡೆದು ಹಾಕಲು ವಿವಿಧ ಇಲಾಖೆಗಳ ಜೊತೆಗೆ ಸಾರ್ವಜನಿಕರ ಸಹಕಾರ ಕೂಡ ಅತಿ ಅವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಹೇಳಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ಸಹಾಯವಾಣಿ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಸೆಂಟ್‍ಕಾನ್ವೆಂಟ್ ಹೈಸ್ಕೂಲ್‍ನಲ್ಲಿ ಆಯೋಜಿಸಲಾದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಸಾಗಾಣಿಕೆಯಂತೆ ಮಕ್ಕಳ ಸಾಗಾಣಿಕೆಯಾಗಿ ಮುಗ್ದ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿದು ಶೋಷಣೆಗೊಳಗಾಗುತ್ತಾರೆ. ಸಮಾಜದಲ್ಲಿ ಶೇ.30 ರಷ್ಟು ಮಕ್ಕಳು ತಮ್ಮ ಬಾಲ್ಯಾವಸ್ಥೆಯಿಂದ ವಂಚಿತರಾಗುತ್ತಾರೆ. ಶಿಕ್ಷಿತರಾದವರು ಬಾಲ ಕಾರ್ಮಿಕ ಪದ್ಧತಿಯನ್ನು ವಿರೋಧಿಸಬೇಕು. ಬಾಲ ಕಾರ್ಮಿಕರನ್ನು ಕಂಡಾಗ ಸಂಬಂಧಪಟ್ವವರ ಗಮನಕ್ಕೆ ತರಬೇಕು. ಆರೋಗ್ಯಕರ ಸಮಾಜ ಮಾಡಲು ಶ್ರಮಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲುತನ್ನ ಪ್ರಯತ್ನ ಪಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗತ್ತಿನ ಅತ್ಯಂತ ಸುಂದರವಾದ ಸೃಷ್ಠಿಯೆ ಮಕ್ಕಳು, ಮಕ್ಕಳಿಗೆ ದುಡಿಮೆ ಬೇಡ, ಶಿಕ್ಷಣ ಬೇಕು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೊಳಿಸುವ ಸಲುವಾಗಿ ಸರಕಾರ ಸಹಕಾರ ನೀಡುತ್ತಿದೆ. ಕಲ್ಯಾಣ ರಾಷ್ಟ್ರವಾಗಬೇಕೆಂದು ಸಂವಿಧಾನ ಹೇಳುತ್ತದೆ. ಎಲ್ಲಾ ಮಕ್ಕಳು ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಎಸ್. ಜೋಗೂರ ಅವರು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದ ಹಿನ್ನಲೆ ಹಾಗೂ ಆಚರಣೆ ಕುರಿತು ವಿಸ್ತೃತವಾಗಿ ವಿವರಿಸಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಪ್ರಮಾಣ ವಚನ ಭೋದಿಸಿದರು. ನ್ಯಾಯವಾಧಿ ವರದಾ ನಾಯ್ಕ ಅವರು ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇದ ಹಾಗೂ ನಿಯಂತ್ರ) ತಿದ್ದುಪಡಿಕಾಯ್ದೆ 2016 ರಕುರಿತು ಉಪನ್ಯಾಸ ನೀಡಿದರು. ಸೆಂಟ್‍ಕಾನ್ವೆಂಟ್ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಬಾಲ ಕಾರ್ಮಿಕ ಕುರಿತು ಕಿರು ನಾಟಕ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಎನ್ ಅಶೋಕ ಕುಮಾರ, ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಸಂಯೋಜಕ ಶ್ರೀಕಾಂತ ಹೆಗಡೆ ಸೇರಿದಂತೆ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.