ತಂಡ್ರಕುಳಿ ಭಾಗದ ಚತುಷ್ಪಥ ರಸ್ತೆ ಸಂಪೂರ್ಣ ಅವೈಜ್ಞಾನಿಕ: ಕೆಲಸ ಸ್ಥಗಿತಗೊಳಿಸಲು ಐಆರ್‌ಬಿ ಕಂಪನಿಗೆ ಎಚ್ಚರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ತಾಲೂಕಿನ ದಿವಗಿ ಗ್ರಾ.ಪಂ. ವ್ಯಾಪ್ತಿಯ ತಂಡ್ರಕುಳಿ ಭಾಗದಲ್ಲಿ ನಡೆಸುತ್ತಿರುವ ಚತುಷ್ಪಥ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಐಆರ್‌ಬಿ ಕಂಪನಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಐಆರ್‌ಬಿ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯಿಂದ ಮಂಗಳವಾರ ತಂಡ್ರಕುಳಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ತಾಲೂಕಾ ಪಂಚಾಯತ ಸಭಾಭವನದಲ್ಲಿ ಬುಧವಾರ ವಿಶೇಷ ಸಭೆ ನಡೆಸಿದ ಶಾಸಕ ದಿನಕರ ಶೆಟ್ಟಿ, ಕಾಮಗಾರಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಧೋರಣೆ ವಿರುದ್ಧ ಕಿಡಿ ಕಾರಿದರು. ಹೆಗಡೆಯಿಂದ ಮಿರ್ಜಾನ್ ಮಾರ್ಗವಾಗಿ ಸೇತುವೆ ಕಲ್ಪಿಸಿ, ಚತುಷ್ಪಥ ಕಾಮಗಾರಿಯನ್ನು ನಡೆಸಿದ್ದರೆ ಈ ರೀತಿಯ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈಗಲೂ ಸ್ಥಳಾಂತರಿಸಲು ಕಾಲಾವಕಾಶವಿದೆ. ಜನತೆಯ ಜೀವದ ಜೊತೆ ಆಟವಾಡಬೇಡಿ. ಇದು ಕೊನೆಯ ಎಚ್ಚರಿಕೆ. ಇಷ್ಟು ದಿನ ಉಗ್ರ ನಿರ್ಣಯವನ್ನು ಕೈಗೊಂಡಿರಲಿಲ್ಲ. ನಾನು ಫೀಲ್ಡ್‌ಗೆ ಇಳಿದರೆ ಗೊತ್ತಲ್ಲ ಎಂದು ಎಚ್ಚರಿಸಿದರು.

ಅಂಬಿಗ ಸಮಾಜ ಸಂಘದ ಸದಸ್ಯ ಗಣೇಶ ಅಂಬಿಗ ಮಾತನಾಡಿ, ತಂಡ್ರಕುಳಿಯಲ್ಲಿ ಇಷ್ಟು ಅನಾಹುತಗಳಾದರೂ ಐಆರ್‌ಬಿ ಮೇಲೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ರಸ್ತೆಗೆ ಮಣ್ಣು ಹಾಕಿ ಯಾವುದೇ ಪಿಚಿಂಗ್ ಕಟ್ಟದೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಐಆರ್‌ಬಿಯವರು ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸಂಪೂರ್ಣ ಸುಳ್ಳು ಭರವಸೆಯನ್ನು ನೀಡಿ ಮುಗ್ಧ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ದಿವಗಿ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಹೇಮಂತಕುಮಾರ ಗಾಂವಕರ ಮಾತನಾಡಿ, ಚತುಷ್ಪಥ ಕಾಮಗಾರಿ ಮಾಡುವವರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಜೀವದ ಬೆಲೆ ಗೊತ್ತಿಲ್ಲ. ತಂಡ್ರಕುಳಿಗೆ ನೀರು ಬರದಂತೆ ಹೆದ್ದಾರಿಯ ಎರಡೂ ಕಡೆಗಳಲ್ಲಿ ಶೀಘ್ರದಲ್ಲಿಯೇ ಟ್ರೆಂಚ್ ಕೊರೆಯಬೇಕು. ಹಾನಿಗೊಳಗಾದ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಸುಳ್ಳು ಭರವಸೆಯ ನಾಟಕ ಬೇಡ ಎಂದರು.

ಸಭೆಗೆ ಆಗಮಿಸಿದ್ದ ತಂಡ್ರಕುಳಿ ಗ್ರಾಮಸ್ಥರು ಮಾತನಾಡಿ, ಗುಡ್ಡಕುಸಿತದಂತಹ ಅನಾಹುತವಾದಾಗಲೂ ಯಾವ ಪರಿಹಾರವನ್ನೂ ಒದಗಿಸಲಿಲ್ಲ. ಕಲ್ಲು ಮನೆಗಳ ಮೇಲೆ ಬಿದ್ದಾಗಲೂ ಏನ್ನನ್ನೂ ನೀಡಿಲ್ಲ. ಉಳಿಯಲು ಸರಿಯಾದ ಮನೆಯಿಲ್ಲ. ಹಾನಿಯಾದ ಆಸ್ತಿಪಾಸ್ತಿಗೆ ಪರಿಹಾರವಿಲ್ಲ. ರಾತ್ರಿ ಮಲಗಿದಾಗ ಬೆಳಿಗ್ಗೆ ಏಳುತ್ತೇವೋ ಇಲ್ಲವೋ ಎಂಬ ಭಯ. ವಾಹನ ಅಪಘಾತವಾದರೆ ಮನೆಗಳ ಮೇಲೆ ಬೀಳುತ್ತದೆಯೋ ಎಂಬ ಭೀತಿಯಿದೆ. ಹೋದ ಜೀವಕ್ಕೆ ಹೊಣೆಯಾರು ಎಂದು ಐಆರ್‌ಬಿ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹರಿಹರಿಹಾಯ್ದರು.

ದಿವಗಿ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೌಡ ಮಾತನಾಡಿ, ತಂಡ್ರಕುಳಿಯಂತೆಯೇ ದುಂಡಕುಳಿಯಲ್ಲೂ ಸಮಸ್ಯೆ ಇದೆ ಎಂದರು.

ನಂತರ ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ, ಜೂ. 22ರ ಒಳಗಾಗಿ ಎಲ್ಲ ತುರ್ತು ಕಾರ್ಯ ಪರಿಹಾರ ಮುಗಿಸಬೇಕು. ತಂಡ್ರಕುಳಿಯ ಜನತೆ ಕಳೆದ ಮೂರು ವರ್ಷದಿಂದ ಜೀವವನ್ನು ಕೈಯಲ್ಲಿಟ್ಟು ಬದುಕು ನಡೆಸುತ್ತಿದ್ದಾರೆ. ಐಆರ್‌ಬಿ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಂಡ್ರಕುಳಿಯಲ್ಲಿ ಕೊರೆದ ಗುಡ್ಡದ ಮೇಲ್ಭಾಗಕ್ಕೆ ಟ್ರೆಂಚ್ ಹೊಡೆಸಬೇಕು. 1 ಹಿಟಾಚಿ, 1 ಜೆಸಿಬಿ, ಟಿಪ್ಪರ್ ಹಾಗೂ ಒಂದು ಅಂಬ್ಯುಲೆನ್ಸ್‌ನ್ನು 24 ಗಂಟೆಯೂ ಅಲ್ಲಿಯೇ ಇರುವಂತೆ ಮಾಡಬೇಕು. ಬಾವಿ, ಬೈಕ್, ಪಂಪ್, ಅಂಗಡಿ ಹಾನಿಯ ಜೊತೆಗೆ ಘೋಷಿಸಿದ ತಲಾ ಹತ್ತು ಸಾವಿರ ರೂ. ಪರಿಹಾರ ಶೀಘ್ರ ವಿತರಿಸಬೇಕು. ನೀರು ನುಗ್ಗಿದ ಮನೆಗಳಿಗೆ ಇಂದೇ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಒದಗಿಸಿಬೇಕು. ಜೂ.22ಕ್ಕೆ ಪುನಃ ಸಭೆ ಕರೆದು ಸ್ಥಳಾಂತರದ ಕುರಿತು ಚರ್ಚಿಸಲಾಗುವುದು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಜಿದ್‌ಮುಲ್ಲಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಟಿ ನಾಯ್ಕ, ತಹಸೀಲ್ದಾರ್ ಮೇಘರಾಜ ನಾಯ್ಕ, ಸಿಪಿಐ ಸಂತೋಷ ಶೆಟ್ಟಿ, ಜಿ.ಪಂ ಸದಸ್ಯ ಗಜಾನನ ಪೈ, ಐಆರ್‌ಬಿ ಇಂಜಿನಿಯರ್ ಎಸ್. ಎನ್. ಕುಲಕರ್ಣಿ, ಸುರೇಶ ರಾಜಗುರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನಕುಮಾರ ಸೇರಿದಂತೆ ತಾಲೂಕ ಮಟ್ಟದ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.