ಕೃಷಿ ಅಧಿಕಾರಿ ಸಿ.ಎಂ.ಪಟಗಾರಗೆ ಖೈರೆ ಗ್ರಾಮಸ್ಥರಿಂದ ಬೀಳ್ಕೊಡುಗೆ ಸಮಾರಂಭ

ಕುಮಟಾ: ಮಿರ್ಜಾನ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಯಾದ ಸಿ.ಎಂ.ಪಟಗಾರ ಅವರನ್ನು ಖೈರೆ ಗ್ರಾಮಸ್ಥರು ಶಾಸಕ ದಿನಕರ ಶೆಟ್ಟಿಯವರ ನೇತೃತ್ವದಲ್ಲಿ ಬುಧವಾರ ಸನ್ಮಾನಿಸಿ, ಬೀಳ್ಕೊಟ್ಟರು.

ನಂತರ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕೃಷಿ ಇಲಾಖೆಯಲ್ಲಿದ್ದಾಗ ಸಿ.ಎಂ.ಪಟಗಾರ ಉತ್ತಮವಾಗಿ ಕಾರ್ಯನಿರ್ವಹಿಸಿರುವುದನ್ನು ಖೈರೆ ಗ್ರಾಮಸ್ಥರು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಕಾಲಕಾಲಕ್ಕೆ ಕೃಷಿ ಇಲಾಖೆಯ ಮಾಹಿತಿಯನ್ನು ನೀಡಿದ್ದಾರೆ. ಇಲಾಖೆಯಿಂದ ಸಿಗಬೇಕಾದ ಸೌಲಭ್ಯ ರೈತರಿಗೆ ಸಿಗುವಂತೆ ಮಾಡಿದ್ದಾರೆ. ತಮ್ಮ ಭಾಗದಲ್ಲಿ ಕೃಷಿಕರ ಮನಗೆದ್ದ ಸಿ.ಎಂ.ಪಟಗಾರ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಎಂ.ಪಟಗಾರ, ನಾನು ನೀಡಿದ ಮಾಹಿತಿಯನ್ನು ರೈತರು ಪಾಲಿಸಿದ್ದರಿಂದ ಇಲ್ಲಿ ಸಾಲುನಾಟಿ ಕೃಷಿಯನ್ನು ಯಶಸ್ವಿಗೊಳಿಸಲು ಸಾಧ್ಯವಾಯಿತು. ಭತ್ತದಲ್ಲಿ ಹೆಚ್ಚೆಚ್ಚು ಇಳುವರಿ ಪಡೆದ ಖೈರೆಯನ್ನು ಕೃಷಿ ಇಲಾಖೆಯು ರಾಜ್ಯಮಟ್ಟದಲ್ಲಿ ಗುರುತಿಸುವಂತಾಯಿತು. ನನ್ನ ಅವಧಿಯಲ್ಲಿ ರೈತರು ನೀಡಿದ ಸಹಕಾರದಿಂದಲೇ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯಾಧ್ಯಾಪಕ ಎಂ.ಎಸ್.ಹೆಗಡೆ, ಇವರು ರೈತರಿಗೆ ನೀಡಿದ ಉತ್ತಮ ಸೇವೆಗಾಗಿ ಸರಕಾರ ಇವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರು ಸೇವೆಯಿಂದ ನಿವೃತ್ತರಾಗಿರಬಹುದು. ಆದರೆ ರೈತರಿಗೆ ಮಾಹಿತಿಯನ್ನು ನೀಡಲು ಸದಾ ಸಿದ್ಧರಿದ್ದಾರೆ ಎಂದರು.

ಮಾಜಿ ಜಿ.ಪಂ ಸದಸ್ಯ ಗೋವಿಂದ ಪಟಗಾರ ಮಾತನಾಡಿ, ಖೈರೆ ಗ್ರಾಮಸ್ಥರು ಇವರನ್ನು ನಿವೃತ್ತಿಯ ನಂತರವೂ ಸನ್ಮಾನಿಸಿದ್ದಾರೆ ಎಂಬುದು ಇವರು ಸೇವೆಯಲ್ಲಿದ್ದಾಗ ರೈತರಿಗೆ ಉತ್ತಮ ಸೇವೆಯನ್ನು ನೀಡಿದ್ದಾರೆಂಬುದಕ್ಕೆ ಸಾಕ್ಷಿ ಎಂದರು.

ರೈತ ಮುಖಂಡ ನಾಗರಾಜ ಪಟಗಾರ ಸ್ವ್ವಾಗತಿಸಿದರು. ಲಕ್ಷ್ಮೀ ಪಟಗಾರ ಪ್ರಾರ್ಥಿಸಿದರು. ಮೇಘನಾ ಪಟಗಾರ ನಿರೂಪಿಸಿದರು. ರಾಘವೇಂದ್ರ ಪಟಗಾರ ಪ್ರಶಸ್ತಿ ಪತ್ರ ವಾಚಿಸಿದರು. ಜಿ.ಆರ್.ಭಟ್ಟ, ಸಾತು ಗೌಡ, ಬೀರ ಗೌಡ, ಓಮು ಪಟಗಾರ, ನಾರಾಯಣ ನಾಯ್ಕ ಹಾಗೂ ಇತರ ರೈತರು ಹಾಜರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.