ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಹೆಸ್ಕಾಂ ಪ್ರಗತಿ ಪರಿಶೀಲನಾ ಸಭೆ


ಕುಮಟಾ: ತಾಲೂಕಾ ಪಂಚಾಯತ ಸಭಾಭವನದಲ್ಲಿ ಮಂಗಳವಾರ ಶಾಸಕ ದಿನಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಾನ್‍ಸೂನ್ ಆಗಮನದ ಹಿನ್ನಲೆಯಲ್ಲಿ ಕುಮಟಾ-ಹೊನ್ನಾವರ ವಿಭಾಗದ ಹೆಸ್ಕಾಂ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಶಾಸಕ ದಿನಕರ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಸಾಧ್ಯವಾದಷ್ಟು ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು. ಅವಶ್ಯಕತೆಯಿರುವ ಸಾಮಗ್ರಿಗಳನ್ನು ಮೊದಲೇ ದಾಸ್ತಾನು ಮಾಡಿಟ್ಟುಕೊಳ್ಳಿ. ತುರ್ತು ದುರಸ್ತಿ ಸಂದರ್ಭದಲ್ಲಿ ಹಗಲು-ರಾತ್ರಿ ಎನ್ನದೇ ಜನರ ಅನುಕೂಲಕ್ಕಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಕುಮಟಾ ಹಾಗೂ ಹೊನ್ನಾವರ ಹೆಸ್ಕಾಂ ಉಪವಿಭಾಗದಲ್ಲಿ ಸಾಷಕ್ಟು ಸಿಬ್ಬಂದಿಗಳ ಕೊರತೆಯಿದೆ. ಗ್ರಾಮೀಣ ಭಾಗಕ್ಕೆ ಹೆಚ್ಚು ಸಶಕ್ತರು ಹಾಗೂ ಪರಿಶ್ರಮಿಗಳ ಅಗತ್ಯವಿರುತ್ತದೆ. ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ಆಯಾ ಫೀಡರ್ ವ್ಯಾಪ್ತಿಗೆ ಹಂಚಿಕೆ ಮಾಡಬೇಕು ಎಂದು ಅವರು ತಿಳಿಸಿದರು.

ಸಂತೆಗುಳಿ ಗ್ರಾ.ಪಂ ಸದಸ್ಯ ವಿನಾಯಕ ಭಟ್ಟ ಮಾತನಾಡಿ, ದಟ್ಟ ಅರಣ್ಯಗಳಿಂದ ಕೂಡಿರುವ ನಮ್ಮ ಭಾಗಕ್ಕೆ ಕೆಲಸ ಮಾಡುವ ಜನ ಬೇಕು. ಹೆಸ್ಕಾಂಗೆ ಬೇಕಾದ ಸಹಕಾರ ಕೊಡಲು ನಾವು ಸಿದ್ಧರಿದ್ದೇವೆ. ಮಳೆಗಾಲದಲ್ಲಾದರೂ ಲೈನ್‍ಮೆನ್‍ಗಳು ಸಂತೇಗುಳಿ ವ್ಯಾಪ್ತಿಯಲ್ಲೇ ವಾಸ್ತವ್ಯದಲ್ಲಿರುವಂತೆ ಕ್ರಮ ಕೈಗೊಳ್ಳಿ ಎಂದರು.

ಸೆಕ್ಷನ್ ಆಫೀಸರ್ ಸತೀಶ ಮಾತನಾಡಿ, ನಮ್ಮ ವಿಭಾಗಕ್ಕೆ ಸಿಬ್ಬಂದಿಗಳ ತೀವ್ರ ಅಭಾವವಿದೆ. ಒಬ್ಬರೇ ನೂರಾರು ಟಿಸಿಗಳನ್ನು ನಿಭಾಯಿಸಬೇಕಿದೆ. ಕನಿಷ್ಟ ಇಬ್ಬರನ್ನಾದರೂ ನಮಗೆ ಕೊಡಿ ಎಂದು ವಿನಂತಿಸಿದರು. ಎಇ ವಿನೋದ ಭಾಗವತ ಪ್ರತಿಕ್ರಿಯಿಸಿ ಇಬ್ಬರು ಲೈನ್‍ಮನ್‍ಗಳನ್ನು ಹೊಂದಿಸಿಕೊಡುವುದಾಗಿ ತಿಳಿಸಿದರು.

ಹೆಸ್ಕಾಂ ಸಿಬ್ಬಂದಿಗಳ ಕೊರತೆಯ ಕುರಿತು ಉಸ್ತುವಾರಿ ಸಚಿವ ದೇಶಪಾಂಡೆಯವರ ಜೊತೆ ಮಾತನಾಡುತ್ತೇನೆ. ಸಿಬ್ಬಂದಿಗಳ ಇಷ್ಟೊಂದು ಕೊರತೆಯಾದಲ್ಲಿ ಜನರಿಗೆ ಉತ್ತಮ ಸೇವೆ ಕೊಡುವುದು ಕಷ್ಟ ಎಂದು ಶಾಸಕರು ತಿಳಿಸಿದರು.

ಸಭೆಯಲ್ಲಿ ಎ.ಇ ಎಂ.ಎ.ಪಠಾಣ, ಸೆಕ್ಷನ್ ಆಫೀಸರ್ ಶಂಕರ ಗೌಡ, ದೇವಗಿರಿ ಪಂಚಾಯಿತಿ ಸದಸ್ಯ ಸುರೇಶ ಹರಿಕಂತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.