ಚತುಷ್ಪಥ ನಿರ್ಮಾಣದ ಅವೈಜ್ಞಾನಿಕ ಕಾಮಗಾರಿ: ಮನೆಗೆ ನುಗ್ಗಿದ ನೀರು

ಕುಮಟಾ: ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ತಂಡ್ರಕುಳಿಯಲ್ಲಿ ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯ ಅವಾಂತರದಿಂದ ಗುಡ್ಡದಿಂದ ಹರಿದು ಬಂದ ದೊಡ್ಡ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದ್ದು, ಮೂರು ಕುಟುಂಬಗಳು ಸದ್ಯ ಮನೆ ಬಿಟ್ಟಿದ್ದಾರೆ.

ದೇವಯ್ಯ ಹಮ್ಮಯ್ಯ ಅಂಬಿಗ, ಗಣಪತಿ ದುರ್ಗು ಅಂಬಿಗ, ನೀಲಪ್ಪ ಯಲ್ಲಪ್ಪ ಅಂಬಿಗ ಎಂಬವರ ಮನೆಗಳಿಗೆ ನೀರು ನುಗ್ಗಿದೆ. ಮನೆಯೊಳಗೆ ಗುಡ್ಡದ ಮಣ್ಣು ಕಲ್ಲು ತುಂಬಿದ್ದರಿಂದ ವಾಸಿಸದಂತ ಪರಿಸ್ಥಿತಿ ನಿರ್ಮಾಣವಾಗಿದೆ. 2017 ರಲ್ಲಿ ಇದೇ ದಿನ ಜೂ. 11 ರಂದು ಗುಡ್ಡ ಕುಸಿದು ಮೂವರು ಪ್ರಾಣ ಕಳೆದುಕೊಂಡಿದ್ದರು. ಈಗ ಮತ್ತೆ ಮನೆಗಳಿಗೆ ಒಮ್ಮೆಲೇ ನೀರು ನುಗ್ಗಿರುವುದು ಜನರನ್ನು ಕಂಗಾಲಾಗುವಂತೆ ಮಾಡಿದೆ.

ತಂಡ್ರಕುಳಿಯಲ್ಲಿ ನಡೆದಿರುವ ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯ ಅವಾಂತರದಿಂದ ಗುಡ್ಡದ ಕಡೆಯಿಂದ ಹರಿದು ಹೊಳೆ ಸೇರುವ ನೀರಿಗೆ ಮಾರ್ಗ ಇಲ್ಲದಂತಾಗಿದೆ. ಹೆದ್ದಾರಿಯ ಮೇಲೆಯೇ ಸೊಂಟ ಮಟ್ಟಕ್ಕೆ ನೀರು ಹರಿದು ರಸ್ತೆಯ ಅಂಚನ್ನು ಕೊರೆದುಕೊಂಡು ಕೆಳಗಿನ ತಂಡ್ರಕುಳಿ ಜನವಸತಿ ಪ್ರದೇಶದ ಮೇಲೆ ಅಪ್ಪಳಿಸಿದೆ. ಘಟನೆಯಿಂದ ಸ್ಥಳೀಯರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದು, ಪದೇಪದೇ ತಾಲೂಕಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರೂ ಮಳೆಗಾಲದ ಮುಂಜಾಗ್ರತೆಯನ್ನು ನಿರ್ಲಕ್ಷಿಸಿದ್ದಕ್ಕೆ ಹಿಡಿಶಾಪ ಹಾಕಿದ್ದಾರೆ.

ಕೆಲ ಕಾಲ ಹೆದ್ದಾರಿ ಸಂಚಾರಕ್ಕೂ ಸಮಸ್ಯೆಯಾಯಿತಾದರೂ ಸ್ಥಳಕ್ಕೆ ಸಿಪಿಐ ಸಂತೋಷ ಶೆಟ್ಟಿ ಹಾಗೂ ಸಿಬ್ಬಂದಿಗಳು ಆಗಮಿಸಿ ಸಂಚಾರ ಸುಗಮಗೊಳಿಸಿದರು. ಶಾಸಕ ದಿನಕರ ಶೆಟ್ಟಿ ತಂಡ್ರಕುಳಿಗೆ ಬಂದು ಪರಿಸ್ಥಿತಿ ಅವಲೋಕಿಸಿದರು. ಜಿಲ್ಲಾಡಳಿತಕ್ಕೆ ಮಾತ್ರವಲ್ಲದೇ ಸಚಿವ ದೇಶಪಾಂಡೆಯವರಿಗೂ ತಂಡ್ರಕುಳಿಯ ಅಪಾಯಕಾರಿ ಸ್ಥಿತಿಯನ್ನು ಗಮನಕ್ಕೆ ತಂದಿದ್ದೇನೆ. ಮುಂಜಾಗ್ರತೆಗಾಗಿ ಸೂಕ್ತ ಕ್ರಮಕ್ಕೆ ಎರಡು ವಾರದ ಹಿಂದೆಯೇ ಕೋರಿದ್ದೇನೆ. ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವವರಿಗೆ ಬಿಸಿ ಮುಟ್ಟಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ. ತಹಸೀಲ್ದಾರ್ ಮೇಘರಾಜ ನಾಯ್ಕ ಕೂಡಾ ತಂಡ್ರಕುಳಿಗೆ ಬಂದು ತುರ್ತು ಕಾರ್ಯಾಚರನೆ ಆರಂಭಿಸಿದ್ದಾರೆ. ಸದ್ಯ ಜೆಸಿಬಿ ತರಿಸಿ ಗುಡ್ಡದಿಂದ ಬರುವ ನೀರನ್ನು ಬೇರೆಡೆ ಹರಿದು ಹೋಗಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.