ಕುಮಟಾದಲ್ಲಿ ಮಂದಹಾಸ ಮೂಡಿಸಿದ ಗಾಳಿ- ಮಳೆ: ತುಂಬಿ ಹರಿದ ಗಟಾರ

ಕುಮಟಾ: ಪಟ್ಟಣದಾದ್ಯಂತ ಮಂಗಳವಾರ ಮಧ್ಯಾಹ್ನದಿಂದ ಸುರಿದ ಭಾರಿ ಗಾಳಿ ಮಳೆಗೆ ಪಟ್ಟಣದ ಹಲವು ರಸ್ತೆಗಳಂಚಿನಲ್ಲಿರುವ ಗಟಾರಗಳು ತುಂಬಿ, ರಸ್ತೆಯಲ್ಲಿ ನೀರು ಹರಿಯಲಾರಂಭಿಸಿದ್ದವು. ಇನ್ನು ರಾಷ್ಟ್ರೀಯ ಹೆದ್ದಾರಿಯ ಹೆಗಡೆ ಕ್ರಾಸ್ ಬಳಿ ಬೃಹತ್ ಮರದ ಟೊಂಗೆಗಳು ಹೆದ್ದಾರಿಯಲ್ಲಿ ಮುರಿದುಬಿದ್ದು ಕೆಲಕಾಲ ವಾಹನ ಸವಾರರು ಪರದಾಡುವಂತಾಗಿತ್ತು.

ಈ ವರ್ಷ ತಾಲೂಕಿನಲ್ಲಿ ಸುರಿದಿರುವುದು ಇದೇ ಮೊದಲ ಮಳೆ. ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನ ಸಮೀಪಿಸುತ್ತಲೇ ವರುಣನ ಆರ್ಭಟ ಹೆಚ್ಚಾಗತೊಡಗಿತ್ತು. ಒಂದು ಕಡೆ ನೀರಿಲ್ಲದೇ ಪರದಾಡುವವರ ಮನಸಿನಲ್ಲಿ ಮಳೆ ಮಂದಹಾಸ ಅರಳಿಸಿದರೂ, ಪಟ್ಟಣವಾಸಿಗರಿಗೆ ಹಾಗೂ ಅಂಗಡಿಕಾರರಿಗೆ ಪುರಸಭೆಯ ನಿರ್ಲಕ್ಷ್ಯದಿಂದ ದೊಡ್ಡ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ಪುರಸಭೆ ಮಳೆಗಾಲವನ್ನು ಎದುರಿಸಲು ಕೈಗೊಳ್ಳಬೇಕಾದ ಯಾವ ಮುನ್ನೆಚ್ಚರಿಕಾ ಕ್ರಮವನ್ನೂ ಕೈಗೊಳ್ಳದಿರುವುದೇ ಇದಕ್ಕೆ ಕಾರಣ. ಬೆಂಕಿ ಬಿದ್ದಮೇಲೆ ಬಾವಿ ತೋಡುವಂತಹ ಇವರ ವ್ಯವಸ್ಥೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ ಪ್ರಮುಖ ಹಾಗೂ ಉಪ ರಸ್ತೆಗಳೆಂದು ನೂರಕ್ಕೂ ಅಧಿಕ ರಸ್ತೆಗಳಿವೆ. ಈ ರಸ್ತೆಗಳಂಚಿನಲ್ಲಿ ಒಳಚರಂಡಿ ಕಾಮಗಾರಿ ನಡೆಸಿದ್ದರಿಂದ ರಸ್ತೆಗಳಲ್ಲಿ ಉಬ್ಬು ತಗ್ಗುಗಳು ನಿರ್ಮಾಣವಾಗಿವೆ. ಇದರ ಹೊರತಾಗಿ ಅನೇಕ ರಸ್ತೆಗಳಿಗೆ ಗÀಟಾರಗಳಿವೆ. ಎಲ್ಲ ಗಟಾರಗಳು ಕಸ, ಪ್ಲಾಸ್ಟಿಕ್ ಹಾಗೂ ಮಣ್ಣಿನಿಂದ ಮುಚ್ಚಿಹೋಗಿವೆ. ಮುಚ್ಚಿರುವ ಗಟಾರವನ್ನು ಮಳೆಗಾಲಕ್ಕೂ ಮುನ್ನವೆ ಹೂಳೆತ್ತದಿರುವುದರಿಂದ ಪಟ್ಟಣದ ಬಸ್ತಿಪೇಟೆ, ನೆಲ್ಲಿಕೇರಿ, ಎಸ್‍ಬಿಐ ಬ್ಯಾಂಕ್, ಹೆಡ್‍ಪೋಸ್ಟ್ ಎದುರಿನ ರಸ್ತೆ ಸೇರಿದಂತೆ ಹಲವೆಡೆಗಳಲ್ಲಿ ನೀರು ತುಂಬಿ, ವಾಹನ ಸವಾರರಿಗೆ ಅಡಚಣೆಯುಂಟಾಗಿತ್ತು.

ರಾಷ್ಟ್ರೀಯ ಹೆದ್ದಾರಿಯ ಹೆಗಡೆ ಕ್ರಾಸ್ ಬಳಿ ಬೃಹತ್ ಮರದ ಟೊಂಗೆಗಳು ಹೆದ್ದಾರಿಯಲ್ಲಿ ಮುರಿದು ಬಿದ್ದು ಕೆಲ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಇನ್ನು ಕೆಲ ವಿದ್ಯುತ್ ಕಂಬಗಳು ಧರೆಗುರುಳಿ, ವಿದ್ಯುತ್ ಕಡಿತಗೊಂಡಿದೆ. ರಸ್ತೆಯಂಚಿನ ಕೆಲ ಗೂಡಂಗಡಿಗಳ ಮುಂಗಟ್ಟುಗಳಿಗೆ ಗಟಾರದ ನೀರು ಸೇರಿದ್ದು, ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಪುರಸಭೆ ಗಟಾರಗಳ ಸ್ವಚ್ಛತೆಯ ಕಾರ್ಯ ಪ್ರಾರಂಭಿಸಲಿ ಎಂಬುದು ಹಲವರ ಆಗ್ರಹ.

ಮಳೆಗಾಲದ ಮುಂಚಿತವಾಗಿ ಪುರಸಭೆಗೆ ಗಟಾರದ ಹೂಳೆತ್ತುವ ಕುರಿತು ತಿಳಿಸಲಾಗಿತ್ತು. ಆದರೆ ಮಳೆ ಬೀಳುವ ಮೊದಲು ಯಾವ ಮುಂಜಾಗ್ರತಾ ಕ್ರಮವನ್ನೂ ಕೈಗೊಂಡಿಲ್ಲ. ಇದರಿಂದಾಗಿ ಪಟ್ಟಣದ ಹಲವು ಗಟಾರಗಳು ನೀರಿನಿಂದ ತುಂಬಿ, ರಸ್ತೆಯಲ್ಲಿ ನೀರು ಹರಿಯಲಾರಂಭಿಸಿದ್ದಲ್ಲದೇ, ಗಟಾರದಲ್ಲಿನ ತ್ಯಾಜ್ಯಗಳು ರಸ್ತೆ ತುಂಬೆಲ್ಲ ಹರಡಿದೆ. ಇದರಿಂದ ವಾಹನ ಸವಾರರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಅನುಭವಿಸುವಂತಾಗಿದೆ.- ಬಾಬು ಶೆಟ್ಟಿ {ಸ್ಥಳೀಯ ಗೂಡಂಗಡಿಕಾರ}

Categories: ಜಿಲ್ಲಾ ಸುದ್ದಿ

Leave A Reply

Your email address will not be published.