ಸುವಿಚಾರ

ಲಭೇತ ಸಿಕತಾಸು ತೈಲಮಪಿ ಯತ್ನತಃ
ಪಿಬೇಚ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ |
ಕದಾಚಿದಪಿ ಪರ್ಯಟನ್ ಶಶವಿಷಾಣಮಾಸಾದಯೇತ್
ನ ತು ಪ್ರತಿನಿವಿಷ್ಟಮೂರ್ಖಜನಚಿತ್ತಮಾರಾಧಯೇತ್ ||

ಮರಳಲ್ಲಿ ತೈಲ ಇರುವುದಿಲ್ಲ ಅಂತ ಗೊತ್ತಿದೆ, ಹಾಗಿದ್ದೂ ತುಂಬ ಪ್ರಯತ್ನಪಟ್ಟು ಅದೇನೇನೋ ಹರಸಾಹಸ ಮಾಡಿದರೆ ಮರಳಿನಿಂದಲೂ ತೈಲ ಒಸರೀತು. ಮರಳುಗಾಡಲ್ಲಿ ಕಾಣುವ ಮೃಗತೃಷ್ಣಿಕೆ ಅಥವಾ ಮೃಗಜಲವೆಂಬ ಅವಭಾಸದಲ್ಲಿ ನೀರಿಲ್ಲವೆಂಬುದು ದಿಟವಾದರೂ ಏನಕ್ಕೇನೋ ಪ್ರಯತ್ನಮಾಡಿ ಅದರಿಂದಲೂ ನೀರು ದೊರಕಿಸಿಕೊಳ್ಳಬಹುದೇನೋ. ಮೊಲಕ್ಕೆ ಕೊಂಬಿಲ್ಲ ಅನ್ನುವುದು ನೂರಕ್ಕೆ ನೂರು ನಿಜ, ಹಾಗಿದ್ದೂ ಲೋಕದಲ್ಲೆಲ್ಲ ಅಲೆದಾಡುತ್ತ ಅಲೆದಾಡುತ್ತ ಎಲ್ಲೋ ಒಂದು ಕಡೆ ಮೊಲದಕೊಂಬಾದರೂ ಸಿಕ್ಕಿಬಿಡಬಹುದು. ಅಂದರೆ ಈ ಎಲ್ಲ ಅಸಾಧ್ಯಸಂಗತಿಗಳನ್ನೂ ಕಷ್ಟಪಟ್ಟರೆ ಸಾಧಿಸಿಬಿಡಬಹುದೇನೋ. ಇದೆಲ್ಲಕ್ಕಿಂತ ಇನ್ನೊಂದು ಭಯಂಕರವಾದ ಕಾರ್ಯವಿದೆ, ಅದೆಂದರೆ ಮೂರ್ಖರನ್ನು ಆರಾಧಿಸುವುದು, ಹಿಂಬಾಲಿಸುವುದು ಅಥವಾ ಅನುಸರಿಸುವುದು. ಎಲ್ಲ ಅಸಾಧ್ಯಕಾರ್ಯಗಳನ್ನು ಸಾಧ್ಯವಾಗಿಸುವ ಶ್ರಮವಾದರೂ ಬೇಕು, ಮೂರ್ಖರನ್ನು ಬೆಂಬಲಿಸುವ ಕೆಲಸವೊಂದು ಯಾವಕಾರಣಕ್ಕೂ ಬೇಡ. ವಂಶದ ಮೇಲಿನ ಮೋಹಕ್ಕೆ ಮೂರ್ಖನನ್ನು ಪ್ರಧಾನಿಯಾಗಿಸುವ ಕನಸುಕಾಣುತ್ತಿರುವವರು ಯೋಚಿಸಬೇಕಾದ್ದು ಇದೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.