ಗೆಲುವಿನ ನಗೆ ಬೀರಿದ ಅನಂತಕುಮಾರಗೆ ಕಾರ್ಯಕರ್ತರಿಂದ ಸ್ವಾಗತ: ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಕೆ

ಶಿರಸಿ: ಉತ್ತರ ಕನ್ನಡ ಲೋಕಸಭೆ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದು ನಗರಕ್ಕೆ ಆಗಮಿಸಿದ ಸಚಿವ ಅನಂತಕುಮಾರ ಹೆಗಡೆ ಅವರನ್ನು ಇಲ್ಲಿನ ನಿಲೇಕಣಿಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಹೂವಿನ ಹಾರವನ್ನು ಹಾಕಿ ಭವ್ಯ ಸ್ವಾಗತ ಕೋರಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಪ್ರಧಾನಿ ಮೋದಿ ಮತ್ತು ಅನಂತಕುಮಾರ ಹೆಗಡೆ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ನಂತರ ನಿಲೇಕಣಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗೋಪಾಲಕೃಷ್ಣ ದೇವಸ್ಥಾನಕ್ಕೆ ಪತ್ನಿ ಶ್ರೀರೂಪಾ ಸಮೇತ ಭೇಟಿ ನೀಡಿ ಪ್ರಾರ್ಥಿಸಿದರು. ರಾಜ್ಯದ ಶಕ್ತಿಪೀಠ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ವಿವೇಕಾನಂದ ನಗರದ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿ ನನ್ನ ಗೆಲುವು ಈ ಮಣ್ಣಿನ ಗೆಲುವು. ಹಗಲು ಇರುಳು ಶ್ರಮಿಸಿದ ಕಾರ್ಯಕರ್ತರ ಗೆಲುವು. ಇದು 6 ಬಾರಿ ಆಯ್ಕೆ ಮಾಡಿದ ಮತದಾರರ ಗೆಲುವಾಗಿದೆ ಎಂದರು.

ವಿಜಯೋತ್ಸಾಹ: ಜಿಲ್ಲೆಯ ಕುಮಟಾದ ಬಾಳಿಗಾ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಬೃಹತ್ ಮುನ್ನಡೆಯನ್ನು ಪಡೆಯುತ್ತಿದ್ದಂತೆ ಸಚಿವ ಹೆಗಡೆಯವರಿಗೆ ಹೂವಿನ ಹಾರವನ್ನು ಹಾಕಿ ಶಾಸಲರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ್ ನಾಯ್ಕ ಸಂಭ್ರಮಿಸಿದರು. ಮತ ಎಣಿಕೆ ಮುಗಿದು 4.5 ಲಕ್ಷ ಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸಿದ ನಂತರ ಕಾರ್ಯಕರ್ತರು ಸೇರಿ ಹೆಗಡೆ ಅವರನ್ನು ಎತ್ತಿ ಕುಣಿದಾಡಿದರು.
ಕುಮಟಾದ ಹೆಗಡೆ ಕ್ರಾಸ್ ಬಳಿ ಶಾಸಕರಿಗೆ ಮತ್ತು ಪೊಲೀಸರ ನಡುವೆ ಮೆರವಣಿಗೆ ನಡೆಸುವ ಕುರಿತು ಸಣ್ಣ ವಾಗ್ವಾದ ನಡೆಯಿತು. ನಂತರ ಸಣ್ಣ ಪ್ರಮಾಣದಲ್ಲಿ ವಿಜಯೋತ್ಸಾಹ ಆಚರಿಸಿ ಗೆಲುವನ್ನು ಸಂಭ್ರಮಿಸಲಾಯಿತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.