ಕುಮಾರಸ್ವಾಮಿಯವರು ತಮ್ಮ ಅಪ್ಪ- ಮಗನನ್ನು ಹುಡುಕಿಕೊಂಡು ಬರಲಿ: ಮುಖ್ಯಮಂತ್ರಿ ಮಾತಿಗೆ ಅನಂತಕುಮಾರ ಟಾಂಗ್


ಕುಮಟಾ: ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಅನಂತಕುಮಾರ ಹೆಗಡೆ ಎಲ್ಲಿದ್ದಿಯಪ್ಪಾ ಎಂಬತ್ತಾಗುತ್ತದೆ ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದರು. ನಾನು ಜನರ ಮಧ್ಯದಲ್ಲಿಯೇ ಇದ್ದೇನೆ. ಆದರೆ ಮುಖ್ಯಮಂತ್ರಿಗಳು ತಮ್ಮ ಮಗ ಮತ್ತು ಅಪ್ಪನನ್ನು ಹುಡುಕಿಕೊಂಡು ಬರಲಿ ಎಂದು ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸಂಸದ ಅನಂತಕುಮಾರ ಹೆಗಡೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಗುರುವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಗೆಲುವಿನ ಸಂಭ್ರಮಾಚರಣೆಯ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಬಹುಮತವನ್ನು ಪಡೆದ ಸ್ಥಾನಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಪಕ್ಷವೂ ಒಂದು. ಉತ್ತರಕನ್ನಡದಷ್ಟು ಕಡಿಮೆ ಖರ್ಚಿನಲ್ಲಿ ಯಾವ ಕ್ಷೇತ್ರದ ಚುನಾವಣೆಯೂ ನಡೆದಿಲ್ಲ. ನನ್ನನ್ನು ಬಹುಮತದಿಂದ ಆರಿಸಿ ತರಲು ಶ್ರಮಿಸಿದಂತಹ ಶಾಸಕರು, ಮುಖಂಡರು, ಕಾರ್ಯಕರ್ತರು, ಹಲವಾರು ಸಂಘಟನೆಗಳು ಹಾಗೂ ಮತದಾರರಿಗೆ ನಾನು ಅಭಿನಂದಿಸುತ್ತೇನೆ. ಇದರಿಂದಾಗಿ ನನ್ನ ಜವಾಬ್ಧಾರಿ ಹೆಚ್ಚಿದೆ. ಜನಪ್ರತಿನಿಧಿಗಳು ಮತದಾರರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದರೆ ಅಸಾಧ್ಯವಾದದ್ದೂ ಸಾಧ್ಯವಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಇವತ್ತಿನ ಬಿಜೆಪಿಯ ದಾಖಲೆಯನ್ನು ಮುಂದಿನ ದಿನಗಳಲ್ಲಿಯೂ ಉಳಿಸಿಕೊಳ್ಳುವುದು ಜನರ ಮೇಲಿದೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಐದು ವರ್ಷಗಳ ಪ್ರಧಾನಿ ಮೋದಿಯವರ ಆಡಳಿತ ಹಲವಾರು ಸಾಧನೆಯ ಜೊತೆ ದೇಶ ಭದ್ರತೆಯ ಹಿತದೃಷ್ಟಿಯಿಂದ ಸಾಕಷ್ಟು ಯೋಜನೆಯನ್ನು ಜಾರಿಗೆ ತಂದಿದೆ. ಜಿಲ್ಲೆಯ ಜನತೆ ಮೋದಿಯವರನ್ನು ಹಾಗೂ ಅನಂತಕುಮಾರ ಹೆಗಡೆಯವರನ್ನು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನ. ರಾಜ್ಯದಲ್ಲಿ ಇಷ್ಟೊಂದು ಬಹುಮತಗಳ ಗೆಲುವು ಇದೇ ಮೊದಲ ಬಾರಿ ಎಂದು ಹರ್ಷವ್ಯಕ್ತಪಡಿಸಿದರು. ಕಿತ್ತೂರು ಶಾಸಕ ದೊಡ್ಡಗೌಡ್ರು ಮಾತನಾಡಿ, ಅನಂತಕುಮಾರ ಹೆಗಡೆ ಹಾಗೂ ನರೇಂದ್ರಮೋದಿಯವರನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ, ಮುಖಂಡ ವಿನೋದ ಪ್ರಭು, ರೂಪಾ ಹೆಗಡೆ ಕಂಪ್ಲಿ ಸೇರಿದಂತೆ ಹಲವಾರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.