ಲೋಕಸಭೆ ಚುನಾವಣೆ ಮತ ಎಣಿಕೆಗೆ ಸಕಲ ಸಜ್ಜು: ನಿಷೇಧಾಜ್ಞೆ- ವ್ಯಾಪಕ ಭದ್ರತೆ

ಕಾರವಾರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಏ. 23 ರಂದು ನಡೆದ ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಮತದಾನ ನಡೆದು ಮೇ. 23ರಂದು ಜಿಲ್ಲೆಯ ಕುಮಾಟಾ ಪಟ್ಟಣದಲ್ಲಿರುವ ಡಾ. ಎ. ವಿ. ಬಾಳಿಗಾ ಕಾಲೇಜಿನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

16ನೇ ಲೋಕಸಭೆ ಅವಧಿ ಪೂರ್ಣಗೊಂಡು 17ನೇ ಲೋಕಸಭೆ ರಚನೆಗೆ ಮಾ.10 ರಂದು ಭಾರತ ಚುನಾವಣಾ ಆಯೋಗ ಚುನಾವಣೆ ಘೋಷಿಸಿ ದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಸಿದೆ. ಈ ಪೈಕಿ ಕರ್ನಾಟಕ ರಾಜ್ಯದಲ್ಲಿ 2019 ಏ. 18 ಮತ್ತು 23ಕ್ಕೆ ಎರಡು ಹಂತದಲ್ಲಿ ಚುನಾವಣೆಗೆ ಮಾ. 28ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಏ. 23ರಂದು ನಡೆದು ಮೇ 23ರಂದು ಮತ ಎಣಿಕೆ ನಡೆಯುತ್ತಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು ಜಿಲ್ಲೆಯ ಹಳಿಯಾಳ (ಶೇ.73.43), ಕಾರವಾರ (ಶೇ.72.28), ಕುಮಟಾ (ಶೇ.77.12), ಭಟ್ಕಳ(71.79), ಶಿರಸಿ(ಶೇ.78.38), ಯಲ್ಲಾಪುರ

(ಶೇ.77.75) ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ (ಶೇ.70.68) ಹಾಗೂ ಕಿತ್ತೂರು (ಶೇ.72.33) ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿವೆ. ಒಟ್ಟು 15,52,134 ಮತದಾರರಿದ್ದು 11,49,609 ಮತದಾರರು ಮತ ಚಲಾಯಿಸಿ ಕ್ಷೇತ್ರದಲ್ಲಿ ಶೇ.74.07ರಷ್ಟು ಮತದಾನವಾಗಿತ್ತು.

ಕಣದಲ್ಲಿ ಎಷ್ಟು ಜನ: ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಾದ ಬಿಜೆಪಿಯ ಅನಂತಕುಮಾರ್ ಹೆಗಡೆ, ಜೆಡಿಎಸ್‌ನ ಆನಂದ್ ಆಸ್ನೋಟಿಕರ್, ಬಹುಜನ ಸಮಾಜ ಪಕ್ಷದ ಸುಧಾಕರ ಕೀರಜೋಗಳೇಕರ್, ನೋಂದಾಯಿತ ರಾಜಕೀಯ ಪಕ್ಷಗಳಾದ ರಾಷ್ಟ್ರೀಯ ಸಮಾಜ ಪಕ್ಷದ ನಾಗರಾಜ ನಾಯ್ಕ್, ರಾಷ್ಟ್ರೀಯ ಜನಸಂಭಾವನ ಪಕ್ಷದ ನಾಗರಾಜ್ ಶೇಠ್, ಭಾರತ ಭೂಮಿ ಪಕ್ಷದ ಮಂಜುನಾಥ ಸದಾಶಿವ, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಅನಿತಾ ಶೇಠ್, ಕುಂದಬಾಯಿ ಗಣಪತಿ ಪುರಲೇಕರ್, ಚಿದಾನಂದ ಹರಿಜನ, ನಾಗರಾಜ್ ಅನಂತ್ ಶಿರಾಲಿ, ಬಾಲಕೃಷ್ಣ ಪಾಟೀಲ್, ಮೊಹಮದ್ ಝಬರೂದ್ ಖತೀಬ್ ಒಟ್ಟು 13 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಚುನಾವಣೆ ಎದುರಿಸಿ ಫಲಿತಾಂಶಕ್ಕೆ ಕಾಯುತ್ತಿದ್ದಾರೆ.

ಮತ ಎಣಿಕೆಗೆ ಸಿದ್ಧತೆ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕುಮಟಾದ ಡಾ. ಎ. ವಿ. ಬಾಳಿಗ ಕಾಲೇಜಿನಲ್ಲಿ ಮೇ 23ರಂದು ನಡೆಯಲಿದ್ದು ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ನಡೆಯಲು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಹರೀಶ್‌ಕುಮಾರ್ ಕೆ. ಇವರ ನೇತೃತ್ವದಲ್ಲಿ ಸಕಲ ಸಿದ್ಧತೆ ನಡೆದಿದೆ. ಮತ ಎಣಿಕೆಗಾಗಿನಿಯೋಜನೆಗೊಂಡಿರುವ368 ಸಿಬ್ಬಂದಿ ಮತ್ತು ಇಟಿಪಿಬಿಎಸ್‌ನ 24 ಮಂದಿ ಸೇರಿ ಒಟ್ಟು 392 ಸಿಬ್ಬಂದಿಗೆ (ಡಿ ದರ್ಜೆ ನೌಕರರನ್ನು ಹೊರತುಪಡಿಸಿ) ಈಗಾಗಲೇ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳಂತೆ ಆಯಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಆಧಾರದಲ್ಲಿ 15ರಿಂದ ಗರಿಷ್ಠ 19 ಸುತ್ತು ಮತ ಎಣಿಕೆ ನಡೆಯಲಿದೆ.ಈವರೆಗೆ ಒಟ್ಟು 624 ಸೇವಾ ಮತಗಳು ಹಾಗೂ 2594 ಅಂಚೆ ಮತಗಳು ಸೇರಿ ಒಟ್ಟು 3218 ಅಂಚೆ ಮತಗಳು ಬಂದಿವೆ.

ಮತ ಎಣಿಕೆ ಕೇಂದ್ರದ ಸುತ್ತ ಭದ್ರತೆ: ಮತ ಎಣಿಕೆ ನಡೆಯುತ್ತಿರುವ ಡಾ. ಎ. ವಿ. ಬಾಳಿಗ ಕಾಲೇಜಿನ ಸುತ್ತ 200 ಮೀಟರ್ ಪಾಸಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಮತ ಎಣಿಕೆ ಕೇಂದ್ರದಲ್ಲಿ ನಾಲ್ಕು ಹಂತದ ತೀವ್ರ ಭದ್ರತೆ ಇರಲಿದ್ದು ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳ ಚುನಾವಣಾ ಏಜೆಂಟರು, ಮತ ಎಣಿಕೆ ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಇವರೂ ಕೂಡ ಕಡ್ಡಾಯವಾಗಿ ಆಯೋಗದಿಂದ ನೀಡಲಾದ ಅಧಿಕೃತ ಪ್ರವೇಶ ಪತ್ರವನ್ನು ಹೊಂದಿರಬೇಕು. ರಾಜಕೀಯ ಪಕ್ಷಗಳ ಮುಖಂಡರಿಗೆ ಈಗಗಲೇಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತಿಳಿವಳಿಕೆಯನ್ನು ನೀಡಲಾಗಿದೆ.

ಮತ ಎಣಿಕೆ ಕೇಂದ್ರಕ್ಕೆ ಯಾವುದೇ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದ್ದು ಅಧಿಕೃತ ವಾಹನಗಳು ಪೊಲೀಸ್ ಇಲಾಖೆಯಿಂದ ನೀಡುವ ಮಾರ್ಗದರ್ಶನದಂತೆ ಪ್ರವೇಶ ಪಡೆಬಹುದಾಗಿದೆ. ಉಳಿದಂತೆ ಹೆಗಡೆ ವೃತ್ತದವರೆಗೆ ಮಾತ್ರ ಪ್ರವೇಶವಿರುತ್ತದೆ. ಪೊಲೀಸ್ ಇಲಾಖೆಯ ನಿಯಮಗಳನ್ನು ಯಾರೂ ಉಲ್ಲಂಘನೆ ಮಾಡದಂತೆ ಹಾಗೂ ಕಡ್ಡಾಯವಾಗಿ ಇಲಾಖೆಯಿಂದ ನೀಡಿರುವ ಪಾಸ್‌ಗಳನ್ನು ಪ್ರದರ್ಶಿಸಬೇಕಿದೆ. ಭದ್ರತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, 3 ಡಿವೈಎಸ್‌ಪಿ, 10 ಸಿಪಿಐ, 19 ಪಿಎಸ್‌ಐ, 29 ಎಎಸ್‌ಐ, 680 ಪೊಲೀಸ್ ಸಿಬ್ಬಂದಿ, 2 ಕೆಎಸ್‌ಆರ್‌ಪಿ, 6 ಡಿಎಆರ್, 3 ಸಿಎಪಿಎಫ್ ನಿಯೋಜಿಸಲಾಗಿದೆ.

ಅಲ್ಲದೆ ಉತ್ತರ ಕನ್ನಡ ಕೋಮು ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ದಿನಾಂಕ ಮೇ. 22 ಮಧ್ಯ ರಾತ್ರಿಯಿಂದ ಮೇ. 24 ರ ಮಧ್ಯರಾತ್ರಿವರೆಗೆ 144 ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೆ ಜಿಲ್ಲಾದ್ಯಂತ  ಮೇ .23 ಬೆಳಿಗ್ಗೆ 6 ರಿಂದ ಮೇ .24 ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ, ಮದ್ಯ ತಯಾರಿಕಾ ಘಟಕಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.