ಮೇ. 23 ರಿಂದ ರುದ್ರ ದೇವರ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಶಿರಸಿ: ಶ್ರೀ ರುದ್ರದೇವರ ಮಠ ಶಿರಸಿ ಇವರಿಂದ ನೂತನವಾಗಿ ನಿರ್ಮಾಣವಾದ ಶ್ರೀ ಶಿವಮೂರ್ತಿ ಅನುಭವ ಮುರುಘರಾಜೇಂದ್ರ ಮಂಟಪ ಅನುಭವ ಮಂಟಪ ಲೋಕಾರ್ಪಣೆ ಸಮಾರಂಭ ಹಾಗೂ ಶರಣ ಸಂಸ್ಕೃತಿ ಉತ್ಸವ 2019 ಮೇ.23 ರಿಂದ 26 ರವರೆಗೆ ರುದ್ರ ದೇವರ ಮಠದಲ್ಲಿ ನಡೆಯಲಿದೆ.

ಈ ಕುರಿತು ಇಲ್ಲಿನ ರುದ್ರ ದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಮೇ.23 ರಂದು ಸಂಜೆ 6.30 ಕ್ಕೆ ಪಾರಮಾರ್ಥ ಪ್ರವಚನದ ಸಮಾರೋಪ ಶಿವಮೊಗ್ಗದ ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮಿಗಳ , ತುಪ್ಪದಕುರಹಟ್ಟಿ ಶ್ರೀ ಭೂಸನೂರ ಸಂಸ್ಥಾನ ಮಠದ ಡಾ.ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಶನಿವಾರಸಂತೆಯ ಶ್ರೀ ಮುದ್ದಿನಕಟ್ಟಿ ಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮಿಗಳಸಮ್ಮುಖದಲ್ಲಿ ನಡೆಯಲಿದೆ. ಕೊಪ್ಪಳದ ಗವಿಮಠದ ಶ್ರೀ ಸಿದ್ಧಲಿಂಗ ದೇವರು ಸಮಾರೋಪ ನುಡಿ ಆಡಲಿದ್ದು, ಮುಖ್ಯ ಅತಿಥಿಗಳಾಗಿ ಡಾ.ವೆಂಕಟ್ರಮಣ ಹೆಗಡೆ, ಬಸವಕೇಂದ್ರ ಅಧ್ಯಕ್ಷೆ ಗೌರಮ್ಮ ಭೂಮಾ, ಗೌರೇಶ್ವರ ದೇವಸ್ಥಾನದ ಅಧ್ಯಕ್ಷ ಶಿವಾಮಂದ ಯಾತಗಿರಿ, ವೀರಭದ್ರ ದೇವಸ್ಥಾನದ ಅಧ್ಯಕ್ಷ ‌ಶಿವಾನಂದ ಶಿವನಂಚಿ ಆಗಮಿಸಲಿದ್ದಾರೆ ಎಂದರು.

ಮೇ.24 ರಂದು ಅನುಭವ ಮಂಟಪ ಲೋಕಾರ್ಪಣೆ ನಡೆಯಲಿದ್ದು, ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬ್ರಹನ್ಮಠದ ಡಾ.ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದೊಂದಿಗೆ , ಇಳಕಲ್ ಶ್ರೀ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಮಹಾಸ್ವಾಮಿಗಳು, ಬನವಾಸಿ ಹೊಳೆಮಠದ ಶ್ರೀ ನಾಗಭೂಷಣ ಸ್ವಾಮಿ, ಅತ್ತಿವೇರಿಯ ಮಾತೆ ಬಸವೇಶ್ವರಿ ಮತ್ತಿತ್ತರು ಆಗಮಿಸಲಿದ್ದಾರೆ. ಅಂದು ನಡೆಯುವ ಸಾಂಸ್ಕೃತಿಕ ಸಂಭ್ರಮದಲ್ಲಿ ಜನಪ್ರಿಯ ಗಾಯಕ ಹನುಮಂತ ಹಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೇ.25 ರಂದು ಬಸವತತ್ವ ಧ್ವಜಾರೋಹಣ ಸಹಜಶಿವಯೋಗ ನಡೆಯಲಿದ್ದು, ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬ್ರಹನ್ಮಠದ ಡಾ.ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಆಕ್ಕಿಆಲೂರಿನ ಮುತ್ತಿನ ಕಂಠ ಗುರುಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಚಿತ್ರದುರ್ಗದ ಮಡಿವಾಳ ಪೀಠದ ಶ್ರೀ ಬಸವ ಮಡಿವಾಳ ಮಾಚಿದೇವ ಸ್ವಾಮಿ, ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿ ಸೇರಿದಂತೆ ಇನ್ನಿತರು ಪಾಲ್ಗೊಳ್ಳಲಿದ್ದಾರೆ. ಮೇ.25 ಮತ್ತು 26 ರಂದು ಬದುಕು ಮತ್ತು ಅನಾವರಣ, ಆಧ್ಯಾತ್ಮ ಮತ್ತು ಅಭಿವೃದ್ಧಿ ಕುರಿತು ಚಿಂತನ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.

ಈ ವೇಳೆ ಶ್ರೀ ಶಿವ ಬಸವ ಸ್ವಾಮಿ,ಶ್ರೀ ಶಾಂತಿ ಲಿಂಗ ಸ್ವಾಮಿ ಹಾವೇರಿ, ಮಲ್ಲಿಕಾರ್ಜುನ ನಿಪ್ಪಾಣಿ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.