ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಗೆ ವಿಳಂಬ: ಸಂಬಂಧಿಗಳ ಪ್ರತಿಭಟನೆ

ಶಿರಸಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೋರ್ವನ ಶವದ ಮರಣೋತ್ತರ ಪರೀಕ್ಷೆ ನಡೆಸಲು ವಿಳಂಬ ಮಾಡಿದ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕ್ರಮವನ್ನು ಖಂಡಿಸಿ ಮೃತನ ಸಂಬಂಧಿಕರು ಹಾಗೂ ಸಾರ್ವಜನಿಕರು ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ಸೋಮವಾರ ರಾತ್ರಿ ನಗರದ ಯಲ್ಲಾಪುರ ರಸ್ತೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಿರಣ ಆಚಾರಿ ಹಾಗೂ ಸುರಜ್ ಮೇಸ್ತಾ ಎಂಬುವವರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸಾಗಿಸುತ್ತಿರುವಾಗ ಕಿರಣ ಆಚಾರಿ ಮೃತಪಟ್ಟಿದ್ದಾರೆ. ಗಾಯಾಳು ಸುರಜ್ನಿನ್ನು ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಿ ಮೃತ ಕಿರಣ ಶವವನ್ನು ಶಿರಸಿಯ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಮೃತ ದೇಹ ತಂದಿಟ್ಟು 4-5 ತಾಸು ಕಳೆದರೂ ಇಲ್ಲಿನ ವೈದ್ಯರು ಸ್ಪಂದಿಸದೇ ವಿಳಂಬ ಮಾಡಿದ್ದಾರೆಂದು ಆರೋಪಿಸಿ ನೂರಾರು ಜನ ಆಸ್ಪತ್ರೆಗೆ ಧಾವಿಸಿ ವೈದ್ಯರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ನಂತರ ಪೊಲೀಸರ ಮನವೊಲಿಕೆಯಿಂದ ರಸ್ತೆ ತಡೆ ಸ್ಥಗಿತಗೊಳಿಸಿದರು.

ಈ ಕುರಿತು ಸ್ಥಳೀಯರಾದ ಅರವಿಂದ ನೇತ್ರೇಕರ್ ಮಾತನಾಡಿ, ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಾರ್ಗಮಧ್ಯೆ ಮೃತಪಟ್ಟ ಕಿರಣ ಆಚಾರಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಇಲ್ಲಿಯ ಸರ್ಕಾರಿ ಆಸ್ಪತ್ರೆಯವರು ತೀರಾ ನಿರ್ಲಕ್ಷ ವಹಿಸಿದ್ದಾರೆ. ಬೆಳಿಗ್ಗೆಯೇ ಮೃತದೇಹ ತಂದರೂ ಮಧ್ಯಾಹ್ನವಾದರೂ ಯಾರು ಸ್ಪಂದಿಸಿಲ್ಲ. ಇದು ವೈದ್ಯರ ಬೇಜವಾಬ್ದಾರಿಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲೇ ಪೋಸ್ಟ್ಮಾಯರ್ಟಮ್ ಮಾಡಿಸಿ ಎಂದು ಉಢಾಪೆಯಿಂದ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ಮಧ್ಯಸ್ಥಿಕೆಯ ನಂತರ ಮಧ್ಯಾಹ್ನದ ವೇಳೆಗೆ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡಿದ್ದು, ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.