ಗೀತಾ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ: ಪೊಲೀಸ್ ಅಧಿಕಾರಿಗಳನ್ನು ತರಾಟೆಗೆಳೆದ ರವೀಂದ್ರ ನಾಯ್ಕ


ಶಿರಸಿ: ಕಾನಸೂರು ಬಳಿಯ ಬಾಳಕೈ ನಿವಾಸಿ ಗೀತಾ ನಾಯ್ಕ ಮೇಲೆ ಅರಣ್ಯ ಇಲಾಖೆಯವರು ದೌರ್ಜನ್ಯ ನಡೆಸಿರುವುದುರ ಬಗ್ಗೆ ಲಿಖಿತ ದೂರು ನೀಡಿ 45 ಗಂಟೆ ಕಳೆದರೂ ಪೊಲೀಸ್ ಇಲಾಖೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.‌ ಬದಲಿಗೆ ಅರಣ್ಯ ಅಧಿಕಾರಿಗಳ ಪರ ವಕಾಲತ್ತನ್ನು ವಹಿಸುತ್ತಿದೆ ಎಂದು ಡಿವೈಎಸ್ಪಿ ಭಾಸ್ಕರ ಒಕ್ಕಲಿಗ ಅವರನ್ನು ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರ ವೇದಿಕೆ ಅಧ್ಯಕ್ಷ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ನಡೆಯಿತು.

ಬಾಳೆಕೈ ನಿವಾಸಿ ಗೀತಾ ನಾಯ್ಕ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಆಕೆಯನ್ನು ಬಂಧಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಗೀತಾ ನಾಯ್ಕ ತಮ್ಮ ರಾಜು ನಾಯ್ಕ ಡಿವೈಎಸ್ಪಿಗೆ ಘಟನೆಯ ದಿನವೇ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದರು. ಆದರೆ 2 ದಿನ ಕಳೆದರೂ ಯಾವುದೇ ಕ್ರಮ ಆಗಿಲ್ಲ ಎಂದು ಇಲ್ಲಿನ ಡಿವೈಎಸ್ಪಿ ಕಚೇರಿಗೆ ರವೀಂದ್ರ ನಾಯ್ಕ ಮತ್ತು ಸಂತ್ರಸ್ತೆ ಗೀತಾ ನಾಯ್ಕ ಸಂಬಂಧಿಕರು ಭೇಟಿ ನೀಡಿ ನ್ಯಾಯ ಸಿಗದೇ ಹೋದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ರವೀಂದ್ರ ನಾಯ್ಕ, ವಿಧವೆ ಹೆಣ್ಣು ಮಗಳಿಗೆ ತೊಂದರೆಯಾಗಿ 2 ದಿನ ಆದರೂ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಂಡಿಲ್ಲ. ಅನುಮತಿಯಿಲ್ಲದೇ ಮನೆಗೆ ನುಗ್ಗಿ ಆಕೆಯನ್ನು ಕರೆದುಕೊಂಡು ಬಂದಿದ್ದಾರೆ. ಕುಡಿಯಲು ನೀರೂ ಸಹ ನೀಡದೇ ಶೌಚಾಲಯ ತೆರಳಲು ಬಿಡದೇ ಹಿಂಸೆ ನೀಡಿದ್ದಾರೆ. ‌ಇದು 65 ಸಾವಿರ ಅತಿಕ್ರಮಣ ಕುಟುಂಬಕ್ಕೆ ಮಾಡಿದ ಅನ್ಯಾಯವಾಗಿದೆ ಎಂದರು.

ಮನೆಗೆ ನುಗ್ಗಿದ ಸಿಬ್ಬಂದಿಗಳನ್ನು ಕರೆಸಿ ವಿಚಾರಣೆ ನಡೆಸುವ ಬದಲು ಹಿರಿಯ ಅಧಿಕಾರಿ ಕರೆಸಿ ಕೈಕುಲುಕಿದ್ದೀರಿ. ಎರಡೂ ಒಂದೇ ಬಣ್ಣದ ಯುನಿಫಾರ್ಮ ಇರುವ ಕಾರಣ ಪೊಲೀಸರೂ ಸಹ ಅರಣ್ಯ ಇಲಾಖೆಯ ಜೊತೆಯಲ್ಲಿ ಶಾಮೀಲು ಆಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರಿಂದ ಹೆಣ್ಣು ಮಗಳ ತೊಂದರೆಗೆ ಕಿಮ್ಮತ್ತಿಲ್ಲ ಎನ್ನುವಂತಾಗಿದೆ. ಎರಡೂ ಇಲಾಖೆಯವರು ಈ ವಿಷಯದಲ್ಲಿ ವೈಫಲ್ಯ ತೋರಿದ್ದಾರೆ. ಇದೊಂದು ಕ್ರಿಮಿನಲ್ ಗುನ್ನೆಯಾಗಿದ್ದು, ಸೂಕ್ತ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ: ಮೇ. 24 ರಂದು ಡಿವೈಎಸ್ಪಿ ಮತ್ತು ಡಿಸಿಎಫ್ ಕಚೇರಿ ಮುಂದುಗಡೆ ಏಕಕಾಲಕ್ಕೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನವಿ ನೀಡಿದ ರವೀಂದ್ರ ನಾಯ್ಕ, ಪೊಲೀಸ್ ಇಲಾಖೆ ಸೂಕ್ತ ವಿಚಾರಣೆ ನಡೆಸಿದಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗುವುದು. ಅದೇ ರೀತಿ ಅರಣ್ಯ ಇಲಾಖೆಯವರು ದೌರ್ಜನ್ಯ ಕ್ಕೆ ಕಾರಣರಾದವರನ್ನು ಅಮಾನತ್ತು ಮಾಡುವವರೆಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ‌

ಡಿವೈಎಸ್ಪಿ ಭಾಸ್ಕರ ಒಕ್ಕಲಿಗ, ಈಗಾಗಲೇ ಸಿದ್ದಾಪುರ ಸಿಪಿಐ ಅವರಿಗೆ ಪ್ರಕರಣದ ಮಾಹಿತಿ ರವಾನಿಸಲಾಗಿದೆ. ನಾವು ಯಾರೊಂದಿಗೂ ಶಾಮೀಲಾಗಿಲ್ಲ. ಸರಿಯಾದ ತನಿಖೆ ನಡೆಸಿ ನ್ಯಾಯ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು. ಶಿರಸಿ ಸಿಪಿಐ ಬಿ.ಗಿರೀಶ್ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.