ಸಾಂಪ್ರದಾಯಿಕ ನೀರು ಸಂಗ್ರಹಣೆಗೆ ಒತ್ತು: ಜಿಲ್ಲೆಯ 687 ಕಲ್ಯಾಣಿ- ಪುಷ್ಕರಣಿಗಳ ಪುನಶ್ಚೇತನ

ಕಾರವಾರ: ಇತ್ತೀಚಿನ ದಿನಗಳಲ್ಲಿ ಮಲೆನಾಡು, ಕರಾವಳಿ ಭಾಗಗಳಲ್ಲೇ ನೀರಿನ ಹಾಹಾಕಾರ ತಲೆದೋರಿರುವ ಹಿನ್ನೆಲೆಯಲ್ಲಿ ನಮ್ಮ ಸಾಂಪ್ರಾದಾಯಿ ನೀರು ಸಂಗ್ರಹಣೆ ಸಂರಚನೆಗಳಾದ ಕಲ್ಯಾಣಿ, ಪುಷ್ಕರಣಿ, ಗೋಗಟ್ಟೆಗಳನ್ನು ವೈಜ್ಞಾನಿಕವಾಗಿ ಪುನಶ್ಚೇತನಕ್ಕೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಂದಾಗಿದೆ.

ಅದರಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒಟ್ಟು 687 ಕಲ್ಯಾಣಿ, ಪುಷ್ಕರಣಿ, ಗೋಗಟ್ಟೆ, ಕಟ್ಟೆಗಳ ಇರುವುದಾಗಿ ವೈಜ್ಞಾನಿಕ ಸಮೀಕ್ಷೆಯಿಂದ ಪತ್ತೆಯಾಗಿದ್ದು ಇದರಿಂದ ಒಟ್ಟು ಸುಮಾರು 24,29,219 ಕ್ಯುಬಿಕ್ ಮೀಟರ್ ನೀರು ಸಂಗ್ರಹಿಸಬಹುದಾಗಿದೆ ಎಂಬುದು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್ ಅವರು ತಾಲೂಕುವಾರು ಇರುವ ನೀರಿನ ಸಂರಚನೆಯ ಸಮೀಕ್ಷಾ ವರದಿಯನ್ನು ತಾಲೂಕು ಅಧಿಕಾರಿಗಳಿಗೆ ನೀಡಿ ಸೂಕ್ತ ಕ್ರಮ ವಹಿಸಲು ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿ ಬೆಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲಾ ವಿವಿಧ ಇಲಾಖೆಗಳ ಸಹಕಾರದಲ್ಲಿ ಸಾಂಪ್ರದಾಯಿಕ ಜಲ ಸಂಗ್ರಹಣಾ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡಿದೆ, ಜಿಪಿಯೆಸ್ ಮತ್ತು ಇತರೆ ಉಪಕರಣಗಳನ್ನು ಬಳಸಿ ಜಿಲ್ಲೆಯ ಎಲ್ಲಾ ಸಂರಚನೆಗಳನ್ನು ಭೌತಿಕವಾಗಿ ಪರಿಶೀಲಿಸಿ ಕ್ಷೇತ್ರ ಸಮೀಕ್ಷೆ ಮಾಡಲಾಗಿದೆ.

ಸಾಂಪ್ರದಾಯಿಕ ಜಲ ಸಂಗ್ರಹಣಾ ವ್ಯವಸ್ಥೆಗಳಾದ ಕಲ್ಯಾಣಿಗಳು, ಪುಷ್ಕರಣಿಗಳು, ಕುಂಟೆ, ಗೋಕಟ್ಟೆ, ಕಟ್ಟೆ, ಇತ್ಯಾದಿಗಳು ಅನಾದಿ ಕಾಲದಿಂದಲೂ ಗೃಹಬಳಕೆ, ಜಾನುವಾರುಗಳಿಗೆ ನೀರು ಕುಡಿಯಲು, ನೀರಾವರಿ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಹಾಗೂ ಅಂತರ್ಜಲ ಮರುಪೂರಣ ಸೇರಿದಂತೆ ಸಮುದಾಯದ ಹಲವಾರು ಅಗತ್ಯಗಳನ್ನು ಪೂರೈಸಲು ನಿರ್ಮಿಸಲಾಗುತ್ತಿತ್ತು.

ಆದರೆ ಈ ಜಲ ಸಂಗ್ರಹಣಾ ರಚನೆಗಳು ನೀರು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರೂ ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ನೀರು ಸಂಗ್ರಹ ವ್ಯವಸ್ಥೆಗಳ ಶೇಖರಣೆಯ ಸಾಮರ್ಥ್ಯ ಸಾಕಷ್ಟು ಕಡಿಮೇಯಾಗಿದೆ. ಆದರಿಂದ ಎಲ್ಲಾ ಸಂರಚನೆಗಳನ್ನು ಭೌತಿಕವಾಗಿ ಪರಿಶೀಲಿಸಿ ಕ್ಷೇತ್ರ ಸಮಿಕ್ಷೆಯನ್ನು, ಜಿಲ್ಲೆಯ ಸಾಂಪ್ರದಾಯಿಕ ನೀರು ಸಂಗ್ರಹಣಾ ವ್ಯವಸ್ಥೆಗಳ ಅಧ್ಯಯನ, ವಿಶ್ಲೇಷಣೆ ಹಾಗೂ ಪುನರುಜೀವನಕ್ಕಾಗಿ ಸೂಕ್ತ ಕ್ರಮಗಳನ್ನು ಒದಗಿಸಲು ಜಿಲ್ಲೆಯ ವಿವಿಧ ಭೌತಿಕ ಸ್ಥಳ, ತಾಪಮಾನ, ಮಳೆ, ಮಣ್ಣಿನ ವಿಧ ಇತ್ಯಾಧಿಗಳಿಗೆ ಸಂಬಂಧಿಸಿದಂತೆ ನೀರು ಸಂಗ್ರಹಣಾ ವ್ಯವಸ್ಥೆಗಳನ್ನು ಸುದೀರ್ಘವಾಗಿ ಅಧ್ಯಯನ ಮಾಡಿ ಎಲ್ಲಾ ತಾಲೂಕುಗಳಿಗೆ ಸಮೀಕ್ಷಾ ವರದಿ ನೀಡಲಾಗಿದೆ.

ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 136 ಕಲ್ಯಾಣಿಗಳು, 195 ಕುಂಟೆಗಳು, 228 ಗೋಗಟ್ಟೆಗಳು, 128 ಕಟ್ಟೆಗಳು ಒಟ್ಟು 687 ಸಾಂಪ್ರದಾಯಿಕ ಜಲ ಮೂಲಗಳನ್ನು ಗುರುತಿಸಲಾಗಿದೆ. ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿ ಪ್ರಧಾನ ವೈಜ್ಞಾನಿಕ ಅಧಿಕಾರಿ ಡಾ.ಯು.ಟಿ.ವಿಜಯ್ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಈ ವರದಿಯನ್ನು ನೀಡಿದ್ದಾರೆ. ಅಲ್ಲದೆ ಸಾಂಪ್ರದಾಯಿಕ ಜಲ ಮೂಲಗಳ ಮಹತ್ವವನ್ನು ಪಂಚಾಯತ್ ರಾಜ್ ಸಂಸ್ಥೆಗಳ ಅನುಷ್ಠಾನಾಧಿಕಾರಿಗಳಿಗೆ ತಿಳಿಸಲು ಮಂಡಳಿಯಿಂದ ಸದ್ಯದಲ್ಲಿಯೇ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.