ಸಮಾಜದ ಇಂದಿನ ಸವಾಲು ಹವ್ಯಕ ಸಮುದಾಯ- ಸಂಪ್ರದಾಯದ ಮೇಲೆ ಪ್ರಭಾವ ಬೀರಿದೆ: ಡಾ. ಜಿ.ವಿ.ಜೋಶಿ


ಕುಮಟಾ: ಅನಾದಿಯಿಂದಲೂ ಹವ್ಯಕ ಸಮುದಾಯ ತ್ಯಾಗದಿಂದ ಬೆಳೆದಿದೆ. ಆದರೆ ವರ್ತಮಾನದ ಸವಾಲುಗಳು ಹವ್ಯಕ ಸಮುದಾಯ ಹಾಗೂ ಸಂಪ್ರದಾಯಗಳ ಮೇಲೆ ಪ್ರಭಾವ ಬೀರಿದೆ. ಜಗತ್ತು ಸ್ವಾರ್ಥಿಯಾಗಿ ಬದಲಾಗಿದೆ. ವ್ಯಕ್ತಿವಾದ ಹೆಚ್ಚಾಗಿ ಸಂಸ್ಕೃತಿ- ಸಂಪ್ರದಾಯಗಳು ಮೂಲೆಗುಂಪಾಗುತ್ತಿದೆ. ಎಂದು ಮಂಗಳೂರು ವಿವಿ ನಿವೃತ್ತ ಅಧ್ಯಾಪಕ, ಅಂಕಣಕಾರ ಡಾ. ಜಿ.ವಿ.ಜೋಶಿ ಕೆಕ್ಕಾರ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಸೋಮವಾರ ಆರಂಭಗೊಂಡ ಹವ್ಯಕ ವಿದ್ಯಾವರ್ಧಕ ಸಂಘದ ಅಮೃತಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹವ್ಯಕ ಅಸ್ಮಿತೆಯ ಉಳಿವಿಗೆ ಪರಸ್ಪರ ಸಹಕಾರ ಹಾಗೂ ಸಂಘಟನೆ ಬೇಕು. ಹವ್ಯಕ ಸಂಪ್ರದಾಯದ ಉಳಿವಿಗೆ ಹವ್ಯಕ ಮಹಿಳೆಯರು ವಿಶೇಷ ಕಾಳಜಿ ವಹಿಸಬೇಕಿದೆ. ಎತ್ತರದಿಂದ ಎತ್ತರಕ್ಕೆ ಬೆಳೆಯುವ ನಿಸರ್ಗದ ಸಂದೇಶವನ್ನು ಹವ್ಯಕ ಸಮುದಾಯ ಸ್ವೀಕರಿಸಿದೆ. ಸದಾ ವೈವಿಧ್ಯತೆಯನ್ನು ಮೆರೆದಿರುವ ಹವ್ಯಕ ಸಮುದಾಯದ ಇತಿಹಾಸ ಹಾಗೂ ಸಾಧನೆಗಳು ಮುಂದಿನ ದಿನದಲ್ಲಿ ಇನ್ನಷ್ಟು ಉತ್ತುಂಗಕ್ಕೇರಲಿದೆ ಎಂದರು.

ಸ್ಮರಣ ಸಂಚಿಕೆ ಹವ್ಯಕಾಮೃತ ಬಿಡುಗಡೆಗೊಳಿಸಿದ ಉದ್ಯಮಿ ಎನ್.ಜಿ. ಭಟ್ಟ ಮಾತನಾಡಿ, ಸ್ವಂತದ ಸಮುದಾಯವನ್ನು ಯಾವತ್ತೂ ದೇವ ಸಮಾನವಾಗಿ ನೋಡಬೇಕು. ಸಂಘಟನೆಯ ಮಹತ್ವ ತಿಳಿದುಕೊಳ್ಳಬೇಕು. ಏಕೆಂದರೆ ಸುಖದಲ್ಲಿ ಬದುಕು ತೀರಾಸರಳ ಎನಿಸಿದರೂ ಕಷ್ಟಕಾಲದಲ್ಲಿ ಜೀವನಸಾಂಗತ್ಯಕ್ಕೆ ಸಮುದಾಯದ ಸಹಯೋಗ ಅತ್ಯಾವಶ್ಯಕ. ಒಗ್ಗಟ್ಟಿಗೆ ಮಹತ್ವಕೊಡದಿರುವುದು ಹವ್ಯಕರ ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ಕಾರಣ ಎಂದರು.

ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಟಿ.ಟಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಪಾಟಿ-ಪುಸ್ತಕಕೊಳ್ಳಲೂ ದುಡ್ಡಿರದ ಹವ್ಯಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಲೆಂದೇ ಸಂಘಕ್ಕೆ ನಾಲ್ಕಾಣೆಯ ಸದಸ್ಯತ್ವ ಪಡೆದು 1939 ರಲ್ಲಿ ಸ್ಥಾಪನೆಗೊಂಡ ಹವ್ಯಕ ವಿದ್ಯಾವರ್ಧಕ ಸಂಘಕ್ಕೆ ಈವರೆಗೆ ಶಕ್ತಿಮೀರಿ ಹಲವರು ದಾನ ಮಾಡಿದ್ದಾರೆ. ಸಂಘದ ಸಹಾಯ ಪಡೆದು ವಿದೇಶದಲ್ಲಿ ಕಲಿತವರು ಇಂದು ದೇಶದಲ್ಲಿ ಸೇವೆ ಮಾಡುತ್ತಿರುವುದು ಸಂಘದ ಸಾರ್ಥಕತೆಯಾಗಿದೆ ಎಂದರು.

ಮೇಳ : ಇದೇ ಸಂದರ್ಭದಲ್ಲಿ ಹಲಸು-ಮಾವು ಸೇರಿದಂತೆ ವೈವಿಧ್ಯಮಯ ಆಹಾರ ಮೇಳ ಹಾಗೂ ಪ್ರದರ್ಶನ-ಮಾರಾಟ ಮಳಿಗೆಗಳ ಉದ್ಘಾಟನೆ ನಡೆಯಿತು. ಆಹಾರ ಮೇಳದಲ್ಲಿ ತಾಜಾ ಹಾಗೂ ಸಿದ್ಧ ಆಹಾರಗಳ ಮಳಿಗೆಗಳು ಎಲ್ಲರ ಗಮನ ಸೆಳೆಯಿತು. ಚಾಲಿ ಅಡಿಕೆ ಸುಲಿಯುವ ಯಂತ್ರ, ಕಸಿ ಗಿಡಗಳು, ಗಿಡಮೂಲಿಕೆ ಔಷಧಿ, ಬಟ್ಟೆ, ಸಾವಯವ ಉತ್ಪನ್ನಗಳು ಸೇರಿದಂತೆ ಹಲವು ಬಗೆಯ ಪ್ರದರ್ಶನ ಮಾರಾಟ ಮಳಿಗೆಗಳು ಇದ್ದವು.

ಮಧ್ಯಾಹ್ನ ಹವ್ಯಕ ಸಂಪ್ರದಾಯಗಳು ಹಾಗೂ ವರ್ತಮಾನ ಕುರಿತು ಗೋಷ್ಠಿಯಲ್ಲಿ ವಿದ್ವಾನ್ ಮಂಜುನಾಥ ಭಟ್ಟ ಕೊಡ್ಲಕೆರೆ, ವಿದ್ವಾನ್ ಹಿರಣ್ಯ ವಿ. ಭಟ್ಟ ಪುತ್ತೂರು ಪಾಲ್ಗೊಂಡಿದ್ದರು. ಸಂಜೆ ಸಾಧಕರಿಗೆ ಸನ್ಮಾನ ಹಾಗೂ ಮನೋರಂಜನಾ ಕಾರ್ಯಕ್ರಮಗಳು, ಭೂಕೈಲಾಸ ಸಂಗೀತ ರೂಪಕ ನಡೆಯಿತು.

ವೇ. ಅಕ್ಷಯ ಭಟ್ಟರಿಂದ ವೇದಘೋಷದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಿಂಧೂರಾ, ಕಾವ್ಯಾ, ಮಧುರಾ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಎಚ್.ವಿ.ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಎನ್.ಹೆಗಡೆ ನಿರೂಪಿಸಿದರು. ಸ್ಮರಣ ಸಂಚಿಕೆ ಸಂಪಾದಕ ಜಿ.ಎಸ್.ಭಟ್, ಸಾವಿತ್ರಿಭಟ್, ಸಿ.ಜಿ.ಉಪಾಧ್ಯಾಯ, ಎಂ.ಆರ್.ಹೆಗಡೆ, ಸುಬ್ರಾಯ ಭಟ್, ಶ್ರೀಕಾಂತ ಶಾಸ್ತ್ರಿ, ವಿಘ್ನೇಶ್ವರ ಭಟ್, ನಾಗರಾಜ ಭಟ್ ಹಂದಿಗೋಣ, ಎಂ.ಆರ್.ವಿ.ಹೆಗಡೆ, ಡಾ.ಟಿ.ಎನ್.ಹೆಗಡೆ ಇನ್ನಿತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.