ಅರಣ್ಯ ಭೂಮಿಯಲ್ಲಿ ಅಕ್ರಮ ಹೊಸ ಮನೆ ನಿರ್ಮಾಣ: ಅರಣ್ಯ ಇಲಾಖಾ ಸಿಬ್ಬಂದಿಗಳಿಂದ ಮಹಿಳೆ ಮೇಲೆ ದೌರ್ಜನ್ಯ


ಶಿರಸಿ: ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹೊಸ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಹಿಳೆಯೊರ್ವಳನ್ನು ಕರೆತಂದು ದೌರ್ಜನ್ಯ ನಡೆಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿರುವ ಘಟನೆ ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ಸೋಮವಾರ ನಡೆದಿದೆ.

ಕಾನಸೂರು ಬಳಿಯ ಬಾಳೆಕೈ ಗ್ರಾಮದ ನಿವಾಸಿ ಗೀತಾ ಗಣಪತಿ ನಾಯ್ಕ ಆಸ್ಪತ್ರೆ ಸೇರಿದ ಮಹಿಳೆಯಾಗಿದ್ದಾಳೆ. ಈಕೆಯು ತನ್ನ ಮಾವನ ಕಾಲದಿಂದ ಉಳಿದುಕೊಂಡು ಬಂದಿದ್ದ ಅರಣ್ಯ ಅತಿಕ್ರಮಣ ಜಾಗದಲ್ಲಿ ಹೊಸ ಮನೆಯನ್ನು ನಿರ್ಮಾಣ ಮಾಡಲು ಹೊರಟಾಗ ಅರಣ್ಯ ಇಲಾಖೆಯವರು ಬಂಧಿಸಿ ಕರೆ ತಂದಿದ್ದಾರೆ. ಆದರೆ ಕರೆ ತರುವ ವೇಳೆ ಮತ್ತು ಕಚೇರಿಯಲ್ಲಿ ಸರಿಯಾದ ಊಟ ತಿಂಡಿಯನ್ನೂ ನೀಡದೇ ಮಾನಸಿಕ ಮತ್ತು ದೈಹಿಕ ‌ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಅದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ಎದುರಾಗಿದೆ.

ಸೋಮವಾರ ಮಧ್ಯಾಹ್ನದ ವೇಳೆಗೆ ಮನೆಯಿಂದ ಇಲಾಖೆ ಸಿಬ್ಬಂದಿಗಳು ಕಚೇರಿಗೆ ಕರೆದುಕೊಂಡು ಬಂದಿದ್ದು, ನಂತರ ಗೀತಾ ನಾಯ್ಕ ಜ್ವರದಿಂದ ಬಳಲುತ್ತಿರುವುದಾಗಿ ತಿಳಿಸಿದ ಕಾರಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿಯರೆಗೆ ಊಟ ಇಲ್ಲದೇ ಜ್ವರದಿಂದ ಬಳಲುತ್ತಿದ್ದ ಗೀತಾ ಮೆಟ್ಟಿಲ ಮೇಲಿಂದ ಕೆಳಗಡೆ ಬಿದ್ದು, ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿದೆ ಎನ್ನಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ರೋಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಮಾತನಾಡಿರುವ ಗೀತಾ ನಾಯ್ಕ ‘ ಜ್ವರ ದಿಂದ ಬಳಲುತ್ತಿದ್ದೇನೆ. ಗುಳಿಗೆ ತಂದು ಕೊಳ್ಳಲೂ ಸಮಯ ನೀಡಿಲಿಲ್ಲ. ಮಗನಿಗೆ ಕಾಲ್ ಮಾಡುತ್ತೇನೆ ಎಂದರೂ ಅವಕಾಶ ಕೊಡಲಿಲ್ಲ. ಕಳ್ಳರಂತೆ ನಡೆಸಿಕೊಂಡರು. ನನ್ನ ಜಾಗದಲ್ಲಿ ನಾನು ಇರಲೂ ಬಿಡುತ್ತಿಲ್ಲ ‘ ಎಂದು ಅಳಲನ್ನು ತೊಡಿಕೊಂಡಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.