ತ್ರಿವಳಿ ಹಸಿರು ಸಾಧಕರ ಬೆಟ್ಟಕ್ಕೆ ಶ್ರೀ ಸ್ವರ್ಣವಲ್ಲೀ ಪ್ರಶಸ್ತಿ


ಶಿರಸಿ: ಅಡಿಕೆ ತೋಟದ ನಿರ್ವಹಣೆ ಬಿಡಲಾದ ಬೆಟ್ಟವನ್ನು ವೈವಿಧ್ಯ ವೃಕ್ಷ ಸಂರಕ್ಷಣೆ, ಜಲ ರಕ್ಷಣೆಯ ಇಂಗುಗುಂಡಿ ನಿರ್ಮಾಣ ಸೇರಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ರೈತರಿಗೆ ನೀಡಲಾಗುವ ಶ್ರೀಸ್ವರ್ಣವಲ್ಲೀ ಮಹಾ ಸಂಸ್ಥಾನದ ಬೆಟ್ಟ ಪ್ರಶಸ್ತಿಯನ್ನು ತ್ರಿವಳಿ ಹಸಿರು ಸಾಧಕರಿಗೆ ಮಠಾಧೀಶ ಹಸಿರು ಸ್ವಾಮೀಜಿ ಖ್ಯಾತಿಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಪ್ರದಾನ ಮಾಡಿ ಸಂತಸ ವ್ಯಕ್ತಪಡಿಸಿದರು.

ಯಲ್ಲಾಪುರ ತಾಲೂಕಿನ ಬೆದೆಹಕ್ಲನಲ್ಲಿ 45 ಎಕರೆ ಬೆಟ್ಟವನ್ನು ಹಸಿರಾಗಿಸಿದ, ಇಂಗು ಗುಂಡಿ ಮೂಲಕ ಅಂತರ್ಜಲ ಹೆಚ್ಚಿಸಿದ ರಾಮಕೃಷ್ಣ ಗಣಪತಿ ಹೆಗಡೆ ಅವರಿಗೆ ಅತ್ಯುತ್ತಮ ಬೆಟ್ಟ ರಕ್ಷಣೆಯ ಮಾದರಿಗಾಗಿ ಪ್ರಥಮ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಸಿದ್ದಾಪುರ ಹಳದೋಟದಲ್ಲಿ 40 ಎಕರೆ ಬೆಟ್ಟವನ್ನು ಮಾದರಿಯಾಗಿ ನಿರ್ವಹಣೆ ಮಾಡಿದ ಗಣಪತಿ ರಾಮಚಂದ್ರ ಹೆಗಡೆ ಹಾಗೂ 25 ಎಕರೆ ಬೆಟ್ಟದಲ್ಲಿ ಔಷಧ ಸಸ್ಯ ಸಹಿತ ಹಲವು ಉತ್ತಮ ಜಾತಿ ಗಿಡ ಬೆಳಸಿದ ಯಡಹಳ್ಳಿಯ ಪ್ರಗತಿಪರ ರೈತ ಅನಂತ ವೆಂ. ಹೆಗಡೆ ಬಳಗಂಡಿ ಅವರಿಗೆ ದ್ವಿತೀಯ ಪ್ರಶಸ್ತಿ ನೀಡಿ ಸ್ವಾಮೀಜಿಗಳು ಗೌರವಿಸಿದರು.

ಈ ವೇಳೆ ಆಯ್ಕೆ ಸಮಿತಿಯ ಸುಬ್ರಾಯ ಹೆಗಡೆ ತ್ಯಾಗಲಿ, ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹಕ್ಕಿಮನೆ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.