ಚತುಷ್ಪಥ ಕಾಮಗಾರಿಗೆ ಅವೈಜ್ಞಾನಿಕವಾಗಿ ಬಂಡೆ ಒಡೆತ: ಸ್ಥಳೀಯರ ಪ್ರತಿಭಟನೆ


ಕುಮಟಾ: ದಿವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಶುಕ್ರವಾರ ಬಂಡೆಯನ್ನು ಒಡೆಯಲು ಅವೈಜ್ಞಾನಿಕವಾಗಿ ಬಾಂಬ್ ಸಿಡಿಸಿರುವುದನ್ನು ವಿರೋಧಿಸಿ ಸ್ಥಳೀಯರು ಕೆಲಗಂಟೆಗಳ ಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಮಧ್ಯಾಹ್ನ ಅವೈಜ್ಞಾನಿಕವಾಗಿ ಸಿಡಿಮದ್ದನ್ನು ಸ್ಫೋಟಿಸಿದ್ದರಿಂದ ಮನೆ, ಶಾಲೆ, ಅಂಗನವಾಡಿಗಳ ಮೇಲೆ ಭಾರೀ ಗಾತ್ರದ ಕಲ್ಲುಗಳ ಸುರಿಮಳೆಯಾಗಿ ಸ್ಥಳೀಯರು ಜೀವಭಯದಿಂದ ಮನೆಬಿಟ್ಟಿದ್ದಾರೆ. ಸಿಡಿದ ಕಲ್ಲುಗಳು ಸೂರನ್ನು ಒಡೆದುಕೊಂಡು ಒಳಗೆ ಬಿದ್ದರೂ ಅದೃಷ್ಟವಶಾತ್ ಯಾರಿಗೂ ಜೀವಾಪಾಯವಾಗದೇ ಬಚಾವಾಗಿದ್ದಾರೆ. ರಾಘವೇಂದ್ರ ಅಪ್ಪಯ್ಯ ಅಂಬಿಗ ಎಂಬುವವರ ಮನೆಯ ಕೋಣೆಯೊಳಗೆ ಮಕ್ಕಳು ಮಲಗಿದ್ದ ಹಾಸಿಗೆಯ ಪಕ್ಕವೇ ದೊಡ್ಡ ಕಲ್ಲು ಬಿದ್ದಿದ್ದು, ಸ್ಥಳೀಯರಲ್ಲಿ ಭಯಹುಟ್ಟಿಸಿದೆ. ಶಾಲೆಯ ಹಂಚುಗಳನ್ನು ಪುಡಿಗಟ್ಟಿ ಒಳಗೆ ಕಲ್ಲುಗಳು ಬಿದ್ದಿದ್ದು, ಒಂದೊಮ್ಮೆ ಕೊಠಡಿಯಲ್ಲಿ ಮಕ್ಕಳು ಇದ್ದಿದ್ದರೆ ಏನಾಗಬಹುದಿತ್ತು ಎಂದು ಜನ ಪ್ರಶ್ನಿಸಿದ್ದಾರೆ. ಒಟ್ಟಾರೆ ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಗುಡ್ಡ ಕುಸಿದು ಉಂಟಾಗಿದ್ದ ಭಾರೀ ಅನಾಹುತವನ್ನು ಪುನಃ ನೆನಪಿಸುವಂತೆ ಮಾಡಿದೆ.

ತಕ್ಷಣ ಸಂಘಟಿತರಾದ ಗ್ರಾಮಸ್ಥರು ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್‍ಬಿಯವರು ಅವೈಜ್ಞಾನಿಕವಾಗಿ ಬಾಂಬ್ ಸಿಡಿಸುವುದನ್ನು ವಿರೋಧಿಸಿ ಪ್ರತಿಭಟಿಸಿದರು. 2 ತಾಸುಗಳಾದರೂ ಐಆರ್‍ಬಿ ಅಥವಾ ಸರ್ಕಾರದ ಯಾವ ಅಧಿಕಾರಿಯೂ ಸ್ಥಳಕ್ಕೆ ಬಾರದೇ ಇರುವುದು ಜನರ ಆಕ್ರೋಶ ಹೆಚ್ಚಲು ಕಾರಣವಾಯಿತು. ನಂತರ ಸ್ಥಳೀಯರು ಹೆದ್ದಾರಿ ತಡೆ ನಡೆಸಿ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಸಿಪಿಐ ಸಂತೋಷ ಶೆಟ್ಟಿ, ತಹಸೀಲ್ದಾರ್ ಪಿ.ಕೆ.ದೇಶಪಾಂಡೆ, ಪಿಎಸೈ ಈಸಿ ಸಂಪತ್ ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದರು. ಬಾಂಬ್ ಸ್ಫೋಟದಿಂದ ನೂರಾರು ಮೀಟರು ದೂರಕ್ಕೆ ಸಿಡಿದ ದೊಡ್ಡ ಕಲ್ಲುಗಳು ಉಂಟುಮಾಡಿದ ಹಾನಿಯನ್ನು ಕಂಡು ದಂಗಾದರು.

ಈ ಸಂದರ್ಭದಲ್ಲಿ ಮಾತನಾಡಿದ ದಿವಗಿ ಪಂಚಾಯಿತಿ ಮಾಜಿ ಸದಸ್ಯ ಆರ್.ಕೆ.ಅಂಬಿಗ ಚತುಷ್ಪಥ ಕಾಮಗಾರಿಯಿಂದ ತಂಡ್ರಕುಳಿಯಲ್ಲಿ ವರ್ಷದ ಹಿಂದೆ ಮೂರು ಜೀವಗಳ ಹಾನಿಯಾಗಿದೆ. ಪರಿಹಾರ ಕೊಡುತ್ತೇವೆ ಊರುಬಿಡಿ ಎಂದ ಸರ್ಕಾರ ಈವರೆಗೆ ನಯಾಪೈಸೆ ಜನರಿಗೆ ಕೊಟ್ಟಿಲ್ಲ. ದಿಕ್ಕಿಲ್ಲದ ಜನ ಪುನಃ ತಂಡ್ರಕುಳಿಯಲ್ಲೇ ಗೂಡುಕಟ್ಟಿಕೊಂಡು ಬದುಕು ನಡೆಸುತ್ತಿದ್ದಾರೆ. ಸ್ಥಳೀಯರಿಗೆ ಹೇಳದೇ ಕೇಳದೇ ಅವೈಜ್ಞಾನಿಕವಾಗಿ ಬಾಂಬ್ ಸ್ಫೋಟಿಸಿದ್ದಾರೆ. ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಐಆರ್‍ಬಿ ಕಂಪನಿಯದ್ದಾಗಿದೆ. ನಮಗೆ ಭರವಸೆ ಕೊಟ್ಟಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದರು.

ಅಂಬಿಗ ಸಮಾಜದ ಕಾರ್ಯದರ್ಶಿ ಗಣೇಶ ಅಂಬಿಗ ಮಾತನಾಡಿ, ಅಧಿಕಾರಿಗಳು ತಂಡ್ರಕುಳಿಯ ಜನತೆಗೆ ಪರಿಹಾರದ ಬಗ್ಗೆ ಕೊಟ್ಟ ಭರವಸೆಯನ್ನು ಮೊದಲು ಈಡೇರಿಸಬೇಕು. ಅವೈಜ್ಞಾನಿಕವಾಗಿ ಬಾಂಬ್ ಸ್ಫೋಟಿಸಿ ಹಾನಿ ಮಾಡಿದ ಬಗ್ಗೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿದ ತಹಸೀಲ್ದಾರ ದೇಶಪಾಂಡೆಯವರು ಈ ಕೂಡಲೇ ಇಲ್ಲಿನ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುವುದು. ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ದಿನಾಂಕ ನಿಗದಿ ಪಡಿಸಿ ಉಪವಿಭಾಗಾಧಿಕಾರಿಗಳ ಸಮಕ್ಷಮ ಸ್ಥಳೀಯರ ಸಭೆ ನಡೆಸಿ ಮುಂದಿನ ತೀರ್ಮಾನಕ್ಕೆ ಬರಲಾಗುವುದು. ಅಲ್ಲಿಯವರೆಗೆ ಕಾಮಗಾರಿ ನಡೆಸದಂತೆ ಗುತ್ತಿಗೆ ಪಡೆದ ಕಂಪನಿಗೆ ಸೂಚಿಸಲಾಗುವುದು ಎಂದರು.

ನಾಲ್ಕು ವರ್ಷವಾದರೂ ಚತುಷ್ಪಥ ಕಾಮಗಾರಿ ಮುಗಿಯುತ್ತಲೇ ಇಲ್ಲ. ಮನೆಯಲ್ಲಿ ಮಲಗಿರುವ ಸಮಯದಲ್ಲಿ ಯಾರಿಗೂ ಮಾಹಿತಿ ಕೊಡದೇ ಬಾಂಬ್ ಸ್ಫೋಟಿಸಿದ್ದಾರೆ. ಇದರಿಂದ ಜನ ಕಂಗಾಲಾಗಿದ್ದಾರೆ. ಇಲ್ಲಿ ಘಟನೆ ನಡೆದು ಎರಡು ತಾಸಾದರೂ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಯಾರೂ ನೋಡಲು ಬಂದಿಲ್ಲ. ” – ಸವಿತಾ ಅಂಬಿಗ, ಸ್ಥಳೀಯ ಮಹಿಳೆ

ನಾವು ಚತುಷ್ಪಥ ಕಾಮಗಾರಿಗೆ ಅಡ್ಡಿಪಡಿಸುತ್ತಿಲ್ಲ. ಕಳೆದ ಬಾರಿ ಏಳೆಂಟು ಮನೆಗಳ ಮೇಲೆ ಕಲ್ಲುಬಿದ್ದು ಹಾನಿಯಾದಾಗ ಯಾವ ಪರಿಹಾರವನ್ನೂ ನೀಡಲಿಲ್ಲ. ಈ ಬಾರಿ ಯಾವ ಮಾಹಿತಿಯನ್ನೂ ನೀಡದೆ ಬಾಂಬ್ ಸ್ಫೋಟಿಸಿದ್ದಾರೆ. ಈಗಾಗಿರುವ ಹಾನಿಯನ್ನು ಭರಿಸುವವರಾರು. ಅಧಿಕಾರಿಗಳು ಹಾಗೂ ಶಾಸಕರು ತಂಡ್ರಕುಳಿಯನ್ನು ಬದಿಗೊತ್ತುತ್ತಿದ್ದಾರೆ.  – ಗಣಪಯ್ಯ ಅಂಬಿಗ, ಸ್ಥಳೀಯ ನಿವಾಸಿ

Categories: ಜಿಲ್ಲಾ ಸುದ್ದಿ

Leave A Reply

Your email address will not be published.